ಆಮ್ಲಜನಕ, ರೆಮಿಡಿಸಿವಿರ್ ಪೂರೈಸಿ ಕೇಂದ್ರಕ್ಕೆ ಸಿಎಂ ಮನವಿ

Cm yudiurappa video conference with pm modi

ಬೆಂಗಳೂರು,ಏ.೨೩- ರಾಜ್ಯದಲ್ಲಿ ಕೊರೊನಾ ಸೋಂಕಿನ ಸ್ಥಿತಿಗತಿ ಹಾಗೂ ಸೋಂಕಿನ ನಿರ್ವಹಣೆ ಬಗ್ಗೆ ರಾಜ್ಯಸರ್ಕಾರ ಕೈಗೊಂಡಿರುವ ಕ್ರಮಗಳನ್ನು ಪ್ರಧಾನಿ ನರೇಂದ್ರಮೋದಿ ಅವರಿಗೆ ಮನವರಿಕೆ ಮಾಡಿರುವ ಮುಖ್ಯಮಂತ್ರಿ ಯಡಿಯೂರಪ್ಪ ಅವರು, ರಾಜ್ಯಕ್ಕೆ ಹೆಚ್ಚುವರಿಯಾಗಿ ಆಮ್ಲಜನಕ ಮತ್ತು ರೆಮ್‌ಡಿಸಿವಿರ್ ಔಷಧವನ್ನು ಒದಗಿಸುವಂತೆ ಮನವಿ ಮಾಡಿದ್ದಾರೆ.
ದೇಶದ ಕೊರೊನಾ ಸ್ಥಿತಿಗತಿ ಬಗ್ಗೆ ಪ್ರಧಾನಿ ನರೇಂದ್ರಮೋದಿ ಅವರು ಇಂದು ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳ ಜತೆ ವೀಡಿಯೊ ಸಂವಾದ ನಡೆಸಿದ ಸಂದರ್ಭದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪನವರು ಕರ್ನಾಟಕ ಈಗಾಗಲೇ ರಾಜ್ಯಕ್ಕೆ ಅಗತ್ಯವಿರುವ ಆಮ್ಲಜನಕವನ್ನು ಒದಗಿಸುವಂತೆ ಕೇಂದ್ರಕ್ಕೆ ಮನವಿ ಮಾಡಿದೆ. ಅದರಂತೆ ಆಮ್ಲಜನಕವನ್ನು ಒದಗಿಸಲು ಸಂಬಂಧಪಟ್ಟವರಿಗೆ ನಿರ್ದೆಶನ ನೀಡುವಂತೆ ಪ್ರಧಾನಿ ಅವರನ್ನು ಕೋರಿದರು.
ಕರ್ನಾಟಕ ಕೊರೊನಾ ತಡೆಗೆ ಬಳಸುವ ರೆಮ್‌ಡಿಸಿವಿರ್ ಔಷಧಿಯನ್ನು ಅಗತ್ಯವಿರುವಷ್ಟು ಸಂಗ್ರಹಿಸಲು ಆಗುತ್ತಿಲ್ಲ. ಮುಂದಿನ ೧೦ ದಿನಗಳಲ್ಲಿ ೨ ಲಕ್ಷ ಡೋಸ್ ರೆಮ್‌ಡಿಸಿವಿರ್ ಔಷಧಿಯನ್ನು ಒದಗಿಸುವಂತೆಯೂ ಪ್ರಧಾನಿಗಳಲ್ಲಿ ಮುಖ್ಯಮಂತ್ರಿ ಮನವಿ ಮಾಡಿದರು.
ಕರ್ನಾಟಕ ಈಗಾಗಲೇ ಭಾರತ ಸರ್ಕಾರಕ್ಕೆ ೭,೬೬೭ ಡಿ ಟೈಪ್ ಆಮ್ಲಜನಕ ಸಿಲಿಂಡರ್ ಮತ್ತು ೬೪ ಆಮ್ಲಜನಕ ಉತ್ಪಾದನಾ ಘಟಕ ಒದಗಿಸುವಂತೆ ಮನವಿ ಮಾಡಿದೆ. ಈ ಸಂಬಂಧಪಟ್ಟವರಿಗೆ ನಿರ್ದೆಶನ ನೀಡಿ ರಾಜ್ಯದ ಬೇಡಿಕೆಯಂತೆ ಆಮ್ಲಜನಕ ಒದಗಿಸುವಂತೆ ಪ್ರಧಾನಿಗಳನ್ನು ಕೋರಿದರು.
ಏ. ೨೫ ರಿಂದ ರಾಜ್ಯಕ್ಕೆ ಪ್ರತಿದಿನ ೧,೧೪೨ ಟನ್ ಆಮ್ಲಜನಕ ಅಗತ್ಯವಿದೆ. ಹಾಗೆಯೇ ಏ. ೩೦ರಿಂದ ಪ್ರತಿದಿನ ೧೪೭ ಟನ್ ಆಮ್ಲಜನಕ ಅಗತ್ಯವಿದ್ದು, ಈ ಸಂಬಂಧ ಈಗಾಗಲೇ ಮನವಿ ಮಾಡಿದ್ದೇವೆ. ಈ ಮನವಿಯನ್ನು ಪರಿಗಣಿಸಿ ಅಗತ್ಯ ಆಮ್ಲಜನಕ ಒದಗಿಸಲು ಸೂಚನೆ ನೀಡುವಂತೆ ಯಡಿಯೂರಪ್ಪ ಈ ವಿಡಿಯೊ ಸಂವಾದದಲ್ಲಿ ಕೋರಿದರು.
ರಾಜ್ಯದಲ್ಲಿ ಕೊರೊನಾ ತಡೆಗೆ ಕೈಗೊಂಡಿರುವ ಕ್ರಮಗಳನ್ನು ಪ್ರಧಾನಿಗಳ ಗಮನಕ್ಕೆ ತಂದ ಅವರು, ನಿನ್ನೆ ೨೫,೭೯೫ ಕೊರೊನಾ ಸೋಂಕು ಪ್ರಕರಣಗಳು ವರದಿಯಾಗಿದ್ದು, ರಾಜ್ಯದ ಪಾಸಿಟಿವಿಟಿ ದರ ಶೇ. ೧೬ ರಷ್ಟು ಹೆಚ್ಚಾಗಿದೆ. ಬೆಂಗಳೂರು ನಗರ ಅತಿ ಹೆಚ್ಚು ಸೋಂಕು ಪೀಡಿತವಾಗಿದ್ದು, ಇದರ ಜತೆಗೆ ತುಮಕೂರು, ಬಳ್ಳಾರಿ, ಹಾಸನ ಮತ್ತು ಕಲಬುರಗಿಯಲ್ಲೂ ಹೆಚ್ಚು ಸೋಂಕು ಪ್ರಕರಣಗಳು ವರದಿಯಾಗಿವೆ.
ರಾಜ್ಯದಲ್ಲಿ ಒಟ್ಟು ಪ್ರಸ್ತುತ ೧,೯೬,೨೩೬ ಸಕ್ರಿಯ ಪ್ರಕರಣಗಳಿದ್ದು, ಬೆಂಗಳೂರು ನಗರವೊಂದರಲ್ಲೇ ೧,೩೭,೮೧೩ ಸಕ್ರಿಯ ಪ್ರಕರಣಗಳಿವೆ. ಮರಣದ ಪ್ರಮಾಣ ಶೇ. ೦.೫ ರಷ್ಟಿದೆ ಎಂಬ ಮಾಹಿತಿಯನ್ನು ಮುಖ್ಯಮಂತ್ರಿಗಳು ಪ್ರಧಾನಿಗೆ ನೀಡಿದರು.
ರಾಜ್ಯದಲ್ಲಿ ಕೋವಿಡ್ ತಡೆಗೆ ಕಟ್ಟುನಿಟ್ಟಿನ ಕ್ರಮಗಳನ್ನು ಜಾರಿ ಮಾಡಿ ಸಾರ್ವಜನಿಕ ಸ್ಥಳಗಳಲ್ಲಿ ಜನ ಗುಂಪುಗೂಡುವುದನ್ನು ನಿರ್ಬಂಧಿಸಲಾಗಿದೆ.
ಆರ್ಥಿಕ ಚಟುವಟಿಕೆಗಳು ಹೆಚ್ಚು ಬಾಧಿತವಾಗದಂತೆ ರಾತ್ರಿ ಕರ್ಫ್ಯೂ, ವಾರಾಂತ್ಯ ಕರ್ಫ್ಯೂವನ್ನು ಜಾರಿ ಮಾಡಲಾಗಿದೆ ಎಂದು ಪ್ರಧಾನಿಗಳಿಗೆ ಹೇಳಿದರು.
ಸೋಂಕಿತರ ಹೆಚ್ಚಿರುವುದರಿಂದ ಅಗತ್ಯ ಹಾಸಿಗೆಗಳನ್ನು ಒದಗಿಸಲು ಕ್ರಮಕೈಗೊಳ್ಳಲಾಗಿದೆ. ಖಾಸಗಿ ಆಸ್ಪತ್ರೆಗಳಲ್ಲು ಬೆಡ್ ಪಡೆಯಲಾಗಿದೆ. ಇದರ ಜತೆಗೆ ಬಯಲು ಆಸ್ಪತ್ರೆ ಹಾಗೂ ಐಸಿಯು ನಿರ್ಮಾಣಕ್ಕೂ ಸರ್ಕಾರ ಮುಂದಾಗಿದೆ ಎಂದು ಅವರು ಹೇಳಿದರು
ಬೆಂಗಳೂರಿನಲ್ಲಿ ಕೋವಿಡ್ ತಡೆಗೆ ೮ ವಲಯಗಳನ್ನು ಮಾಡಿ ಪ್ರತಿ ವಲಯಕ್ಕೂ ಉಸ್ತುವಾರಿ ಸಚಿವರುಗಳನ್ನು ನೇಮಿಸಿ ಇವರ ಜತೆಗೆ ಐಎಎಸ್ ಅಧಿಕಾರಿಗಳನ್ನು ನೋಡೆಲ್ ಅಧಿಕಾರಿಗಳಾಗಿ ನಿಯುಕ್ತಿಗೊಳಿಸಿ ಕೋವಿಡ್ ನಿರ್ವಹಣೆಗೆ ಕೈಗೊಳ್ಳಲಾಗಿದೆ ಎಂಬುದನ್ನು ಪ್ರಧಾನಿಗಳಿಗೆ ಅರುಹಿದರು.
ರಾಜ್ಯದಲ್ಲಿ ಕೊರೊನಾ ಲಸಿಕೆ ಕಾರ್ಯಕ್ರಮವನ್ನು ಚುರುಕುಗೊಳಿಸಲಾಗಿದ್ದು, ಇದುವರೆಗೂ ೮೨ ಲಕ್ಷ ಮಂದಿಗೆ ಲಸಿಕೆ ನೀಡಲಾಗಿದೆ. ಮೇ ೧ ರಿಂದ ಕೇಂದ್ರ ಸರ್ಕಾರದ ತೀರ್ಮಾನದಂತೆ ೧೮ ವರ್ಷ ಮೇಲ್ಪಟ್ಟವರಿಗೂ ಲಸಿಕೆ ನೀಡುವ ಕಾರ್ಯಕ್ರಮವನ್ನು ಆರಂಭಿಸುತ್ತಿದ್ದೇವೆ. ಹಾಗಾಗಿ ಅಗತ್ಯ ಲಸಿಕೆಯನ್ನು ಒದಗಿಸಿ ನೆರವು ನೀಡುವಂತೆ ಕೋರಿದರು.
ಪ್ರಧಾನಿಗಳ ಇಂದಿನ ಸಂವಾದ ಕಾರ್ಯಕ್ರಮದಲ್ಲಿ ಸಚಿವರುಗಳಾದ ಬಸವರಾಜ ಬೊಮ್ಮಾಯಿ, ಡಾ ಸುಧಾಕರ್, ರಾಜ್ಯಸರ್ಕಾರದ ಮುಖ್ಯಕಾರ್ಯದರ್ಶಿ ರವಿಕುಮಾರ್ ಸೇರಿದಂತೆ ಹಲವು ಹಿರಿಯ ಅಧಿಕಾರಿಗಳು ಪಾಲ್ಗೊಂಡಿದ್ದರು.