ಆಮ್ಲಜನಕ ರೀಫಿಲ್ಲಿಂಗ್ ಘಟಕ ಕೂಡಲೇ ವಶಕ್ಕೆ ಪಡೆಯಿರಿ: ದೆಹಲಿ ಸರ್ಕಾರಕ್ಕೆ ಹೈಕೋರ್ಟ್ ಸೂಚನೆ

ನವದೆಹಲಿ,ಏ.27- ದೆಹಲಿಯಲ್ಲಿ ದಿನೇ ದಿನೇ ಆಮ್ಲಜನಕ ‌ಕೊರತೆ ಎದುರಾಗಿರುವ ಹಿನ್ನೆಲೆಯಲ್ಲಿ ಆಮ್ಲಜನಕ ರೀಫಿಲ್ಲಿಂಗ್ ಘಟಕಗಳನ್ನು ಕೂಡಲೇ ದೆಹಲಿ ಸರ್ಕಾರ ತನ್ನ ವಶಕ್ಕೆ ಪಡೆಯುವಂತೆ ಹೈಕೋರ್ಟ್ ಆದೇಶಿಸಿದೆ.

ಸರ್ಕಾರ ವಶಕ್ಕೆ ಪಡೆಯಲು ಯಾರಾದರೂ ಅಡ್ಡಿಪಡಿಸಿದರೆ ಅಂತಹ ಆಮ್ಲಜನಕ ರೀ ಫಿಲ್ಲಿಂಗ್ ಘಟಕಗಳ ವಿರುದ್ಧ ನ್ಯಾಯಾಂಗ ನಿಂದನೆ ದಾಖಲಿಸಿ ಎಂದು ನ್ಯಾಯಾಲಯ ಕಟ್ಟುನಿಟ್ಟಿನ ಸೂಚನೆ ನೀಡಿದೆ.

ಈಗಾಗಲೇ ಐದು ಆಮ್ಲಜನಕ ರೀಫಿಲ್ಲಿಂಗ್ ಘಟಕಗಳ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ‌ ಮುಂದೆ ಯಾರಾದರೂ ಅಡ್ಡಿಪಡಿಸಿದರೆ ಅವರ ವಿರುದ್ಧ ನ್ಯಾಯಾಂಗ ನಿಂದನೆ ದೂರು ದಾಖಲಿಸಿಕೊಳ್ಳುವಂತೆ ನಿರ್ದೇಶನ ನೀಡಿದೆ.

ದೆಹಲಿಯಲ್ಲಿರುವ ಆಮ್ಲಜನಕ ರೀಫಿಲ್ಲಿಂಗ್ ಘಟಕಗಳನ್ನು ತಕ್ಷಣ ನಿಮ್ಮ ವಶಕ್ಕೆ ಪಡೆಯಿರಿ ನಿಮಗೆ ವಶಕ್ಕೆ ಪಡೆಯಲು ಆಗದಿದ್ದರೆ ಹೇಳಿ ಕೇಂದ್ರಸರ್ಕಾರದ ಅಧಿಕಾರಿಗಳನ್ನು ಕಳುಹಿಸಿ ಅವುಗಳನ್ನು ವಶಕ್ಕೆ ಪಡೆಯಲಾಗುವುದು ಎಂದು ನ್ಯಾಯಾಲಯ ಖಢಕ್ ಸಂದೇಶ ರವಾನಿಸಿದೆ.

ದೆಹಲಿಯಲ್ಲಿ ಕೊರೋನಾ ಸೋಂಕು ಸಂಖ್ಯೆ ದಿನನಿತ್ಯ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಆಸ್ಪತ್ರೆಗಳಲ್ಲಿ ಸೋಂಕಿತರಿಗೆ ಆಮ್ಲಜನಕ ಸಿಗದೆ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ ಹೀಗಾಗಿ ದೆಹಲಿ ಸರ್ಕಾರ ವಿವಿಧ ದೇಶಗಳಿಂದ ಆಮ್ಲಜನಕ ತರಿಸಿಕೊಳ್ಳಲಾಗಿದೆ.

ಎಲ್ಲಾ ಬೆಳವಣಿಗೆ ಹಿನ್ನೆಲೆಯಲ್ಲಿ ದೆಹಲಿ ಹೈಕೋರ್ಟ್ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ನೇತೃತ್ವದ ಸರ್ಕಾರಕ್ಕೆ ಸೂಚನೆ ನೀಡಿದೆ.ದೆಹಲಿಯಲ್ಲಿರುವ ಎಲ್ಲಾ ಆಮ್ಲಜನಕ ರೀಫಿಲ್ಲಿಂಗ್ ಘಟಕಗಳನ್ನು ತಕ್ಷಣ ಸರ್ಕಾರ ವಶಕ್ಕೆ ಪಡೆದು ಆಸ್ಪತ್ರೆಗೆ ಅಗತ್ಯವಿರುವ ಆಮ್ಲಜನಕವನ್ನು ಪೂರೈಕೆ ಮಾಡಿ ಎಂದು ಸಂದೇಶ ರವಾನಿಸಿದೆ.

ನ್ಯಾಯಮೂರ್ತಿಗಳಾದ ವಿಪಿನ್ ಸಿಂಗಿ ಮತ್ತು ರೇಖಾ ಪಿಳ್ಳೈ ನೇತೃತ್ವದ ದೆಹಲಿ ಹೈಕೋರ್ಟ್ ನ್ಯಾಯಪೀಠ ದೆಹಲಿ ಸರ್ಕಾರಕ್ಕೆ ಪಟ್ಟೆಪಟ್ಟೆ ಸೂಚನೆ ನೀಡಿ ಕೂಡಲೇ ಆಮ್ಲಜನಕ ಘಟಕಗಳನ್ನು ವಶಕ್ಕೆ ಪಡೆದು ಮುಂದಿನ ದಿನಗಳಲ್ಲಿ ಆಮ್ಲಜನಕ ಕೊರತೆ ಎದುರಾಗದಂತೆ ಎಚ್ಚರ ವಹಿಸಿ ಎಂದು ಸರ್ಕಾರಕ್ಕೆ ಸೂಚಿಸಿದೆ