ಆಮ್ಲಜನಕ ಬೇಡಿಕೆ ಪೂರೈಸಲು ಹೊಸ ತಂತ್ರಾಂಶ: ಶೆಟ್ಟರ್

ಬೆಂಗಳೂರು,ಜೂ.೯- ರಾಜ್ಯ ಹಾಗೂ ದೇಶದಲ್ಲಿ ಕೋವಿಡ್ ಸೋಂಕು ಇಳಿಮುಖವಾಗಿ, ಆಮ್ಲಜನಕ ಬೇಡಿಕೆ ಪ್ರಮಾಣ ಕಡಿಮೆಯಾಗಿದ್ದರೂ ೩ನೇ ಅಲೆ ಸಂದರ್ಭದಲ್ಲಿ ಯಾವುದೇ ತೊಂದರೆಗಳಾಗದಂತೆ ಗಮನ ಹರಿಸಲಾಗಿದ್ದು, ಆಸ್ಪತ್ರೆಗಳು ಆಮ್ಲಜನಕ ಬೇಡಿಕೆಯನ್ನು ಸಲ್ಲಿಸಲು ತಂತ್ರಾಂಶವನ್ನು ಅಭಿವೃದ್ಧಿಗೊಳಿಸಲಾಗುತ್ತಿದೆ ಎಂದು ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಹೇಳಿದರು. ರಾಷ್ಟ್ರೀಯ ಮಾಹಿತಿ ಕೇಂದ್ರ ತಂತ್ರಾಂಶವನ್ನು
ಅಭಿವೃದ್ಧಿಗೊಳಿಸುತ್ತಿದ್ದು, ಈ ತಂತ್ರಾಂಶದ ಮೂಲಕ ಆಸ್ಪತ್ರೆಗಳು ಆಮ್ಲಜನಕದ ಬೇಡಿಕೆಯನ್ನು ಸಲ್ಲಿಸಬಹುದಾಗಿದೆ. ಮೂರು ದಿನಗಳಲ್ಲಿ ಈ ತಂತ್ರಾಂಶವನ್ನು ಲೋಕಾರ್ಪಣೆ ಮಾಡಲಾಗುವುದು ಎಂದರು.
ವಿಧಾನಸೌಧದಲ್ಲಿಂದು ಆಮ್ಲಜನಕ ಉತ್ಪಾದನೆ ಹಾಗೂ ಸರಬರಾಜು ಕುರಿತಂತೆ ಹಿರಿಯ ಅಧಿಕಾರಿಗಳ ಸಭೆ ನಡೆಸಿ ಮಾತನಾಡಿದ ಅವರು,ರಾಜ್ಯದ ಆಮ್ಲಜನಕ ಉತ್ಪಾದನೆ ಹಾಗೂ ಸರಬರಾಜು ಉತ್ಪಾದನೆ ಉಸ್ತುವಾರಿ ಆಗಿರುವ ಜಗದೀಶ್ ಶೆಟ್ಟರ್ ಅವರು, ರಾಜ್ಯದಲ್ಲಿ ಆಮ್ಲಜನಕ ಬೇಡಿಕೆ ಕುಸಿದಿರುವ ಹಿನ್ನೆಲೆಯಲ್ಲಿ ಕೈಗಾರಿಕೆಗಳಿಗೂ ಆಮ್ಲಜನಕ ಪೂರೈಸಲು ಕೇಂದ್ರಸರ್ಕಾರ ಒಪ್ಪಿಗೆ ನೀಡಿದೆ.
ಈ ಪ್ರಕ್ರಿಯೆ ಪ್ರಾರಂಭವಾದ ನಂತರ ಗೊಂದಲಗಳು ಉಂಟಾಗಬಾರದು ಎಂದು ಜಿಲ್ಲಾವಾರು ನೋಡೆಲ್ ಅಧಿಕಾರಿಯನ್ನು ನೇಮಿಸಲು ಚಿಂತನೆ ನಡೆದಿದೆ. ಈ ನೋಡೆಲ್ ಅಧಿಕಾರಿಗಳು ಆಸ್ಪತ್ರೆಗೆ ಆಮ್ಲಜನಕ ಪೂರೈಕೆ ಮಾಡುವ ಮೇಲುಸ್ತುವಾರಿ ವಹಿಸಲಿದ್ದಾರೆ ಎಂದರು.
ರಾಜ್ಯದಲ್ಲಿ ಕೋವಿಡ್ ೩ನೇ ಅಲೆ ಬಂದರೆ ಆಮ್ಲಜನಕ ವಿಷಯದಲ್ಲಿ ಸಿದ್ಧವಾಗಿರಬೇಕಾಗಿರುತ್ತದೆ. ನಿರ್ದಿಷ್ಟ ಸೂಚನೆಗಳನ್ನು ನೀಡಲಾಗಿದೆ. ಜಿಲ್ಲಾವಾರು ಆಸ್ಪತ್ರೆಗಳನ್ನು ಆಮ್ಲಜನಕ ಸ್ವಾವಲಂಬಿ ಮಾಡುವ ಮತ್ತು ಜಿಲ್ಲೆಗಳಲ್ಲಿ ಬಫರ್ ಸ್ಟಾಕ್ ಸಂಗ್ರಹಣೆಗೆ ಅಗತ್ಯವಿರುವ ಸೌಲಭ್ಯಗಳನ್ನು ನಿರ್ಮಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗುವಂತೆ ಸೂಚನೆ ನೀಡಿದ್ದೇನೆ ಎಂದರು.
ಈ ಸಭೆಯಲ್ಲಿ ಅಪರ ಮುಖ್ಯಕಾರ್ಯದರ್ಶಿ ರಾಜ್‌ಕುಮಾರ್ ಕತ್ರಿ, ಹಿರಿಯ ಅಧಿಕಾರಿಗಳಾದ ಮೌನೀಶ್ ಮೌದ್ಗಿಲ್, ಪ್ರತಾಪ್‌ರೆಡ್ಡಿ, ಕೆಐಎಡಿಬಿ ಸಿಇಓ ಶಿವಶಂಕರ್ ಮತ್ತಿತರರು ಪಾಲ್ಗೊಂಡಿದ್ದರು.