ಆಮ್ಲಜನಕ ಪೂರೈಕೆಗೆ ಅಡ್ಡಿಪಡಿಸಿದ‌‌ರೆ ಗಲ್ಲಿಗೇರಿಸುತ್ತೇವೆ: ದೆಹಲಿ ಕೋರ್ಟ್ ಎಚ್ಚರಿಕೆ

ನವದೆಹಲಿ, ಏ 24- ದೇಶದ ಕೊರೊನಾ ಸೋಂಕು ಉಲ್ಬಣಗೊಂಡು ಆಮ್ಲಜನಕ ಕೊರತೆ ಉಂಟಾಗಿದ್ದು, ಈ ಆಮ್ಲಜನಕ ಪೂರೈಕೆಗೆ ಅಡ್ಡಿಯುಂಟು ಮಾಡಿದರೆ, ಅಂತಹ ವ್ಯಕ್ತಿಯನ್ನು ಗಲ್ಲಿಗೇರಿಸುತ್ತೇವೆ ಎಂದು ದೆಹಲಿ ಹೈಕೋರ್ಟ್‌ ಗಂಭೀರ ಎಚ್ಚರಿಕೆ ನೀಡಿದೆ.

ಗಂಭೀರ ಸ್ಥಿತಿಯಲ್ಲಿರುವ ಕೋವಿಡ್‌ ರೋಗಿಗಳಿಗೆ ಆಮ್ಲಜನಕದ ಕೊರತೆ ಉಂಟಾಗಿರುವ ಬಗ್ಗೆ ದೆಹಲಿಯ ಮಹಾರಾಜ ಅಗ್ರಸೇನ್‌ ಆಸ್ಪತ್ರೆಯು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿತ್ತು. ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ವಿಪಿನ್‌ ಸಂಘಿ ಮತ್ತು ರೇಖಾ ಪಲ್ಲಿ ಅವರ ದ್ವಿಸದಸ್ಯ ಪೀಠವು, ‘ಆಮ್ಲಜನಕ ಪೂರೈಕೆಗೆ ಅಡ್ಡಿಯನ್ನುಂಟು ಮಾಡಿದ ವ್ಯಕ್ತಿಯ ಬಗ್ಗೆ ತಿಳಿಸಿ ಎಂದು ದೆಹಲಿ ಸರ್ಕಾರಕ್ಕೆ ಸೂಚಿಸಿತು.

ಅಲ್ಲದೆ ‘ಆಮ್ಲಜನಕ ಪೂರೈಕೆಗೆ ಅಡ್ಡಿ ಉಂಟುಮಾಡುವ ಯಾರೊಬ್ಬರನ್ನೂ ಬಿಡುವುದಿಲ್ಲ. ಅಂತಹ ಸ್ಥಳೀಯ ಅಧಿಕಾರಿಗಳ ಬಗ್ಗೆ ಕೇಂದ್ರ ಸರ್ಕಾರಕ್ಕೂ ಮಾಹಿತಿ ನೀಡಿ. ಅವರನ್ನು ಗಲ್ಲಿಗೇರಿಸುತ್ತೇವೆ. ಕೇಂದ್ರವೂ ಅವರ ವಿರುದ್ಧ ಕ್ರಮ ಕೈಗೊಳ್ಳುತ್ತದೆ ಎಂದು ನ್ಯಾಯಾಲಯ ಹೇಳಿತು.

ದೇಶಾದ್ಯಂತ ಕೊರೋನಾ ಸೋಂಕಿನ 2ನೇ ಅಲೆಯಿಂದಾಗಿ ಆಸ್ಪತ್ರೆಗೆ ದಾಖಲಾಗುತ್ತಿರುವ ಸೋಂಕಿತರ ಸಂಖ್ಯೆ ಗಣನೀಯವಾಗಿ ಏರಿಕೆಯಾಗುತ್ತಿದ್ದು, ಇದರ ನಡುವೆಯೇ ಆಕ್ಸಿಜನ್ ಇಲ್ಲದೇ ಸಾವನ್ನಪ್ಪುತ್ತಿರುವ ಸೋಂಕಿತರ ಸಂಖ್ಯೆ ಕೂಡ ಗಣನೀಯವಾಗಿ ಹೆಚ್ಚಳವಾಗುತ್ತಿದೆ.

ಈ‌ ಕಾರಣಕ್ಕಾಗಿ ಕೇಂದ್ರ ಸರ್ಕಾರ ದೇಶಾದ್ಯಂತ ಆಕ್ಸಿಜನ್ ಪೂರೈಕೆಗಾಗಿ ಕ್ರಮಕೈಗೊಂಡಿದ್ದು, ಇದರ ನಿರ್ವಹಣೆಗಾಗಿ ಸಮಿತಿಯೊಂದನ್ನೂ ಕೂಡ ರಚಿಸಿದೆ.

ಏತನ್ಮಧ್ಯೆ ಆಕ್ಸಿಜನ್ ಹೊತ್ತ ಟ್ಯಾಂಕರ್ ಗಳು ಇದೀಗ ದೇಶಾದ್ಯಂತ ಪೂರೈಕೆ ಮಾಡುತ್ತಿದ್ದು, ಕೆಲ ಟ್ಯಾಂಕರ್ ಗಳಿಗೆ ಅಧಿಕಾರಿಗಳು ಅಡ್ಡಿ ಪಡಿಸುತ್ತಿದ್ದಾರೆ ಎಂಬ ಆರೋಪಗಳು ಕೇಳಿ ಬಂದ ಹಿನ್ನಲೆಯಲ್ಲಿ ದೆಹಲಿ ಹೈಕೋರ್ಟ್ ತಾಕೀತು ಮಾಡಿದೆ.