ಆಮ್ಲಜನಕ ಕೊರತೆಯಿಲ್ಲ ವಿಪಕ್ಷಗಳಿಗೆ ಸುಧಾಕರ್ ಸವಾಲು

ಬೆಂಗಳೂರು, ಏ. ೨೪- ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಯಾವುದೇ ಆಸ್ಪತ್ರೆಗಳಲ್ಲಿ ಆಮ್ಲಜನಕದ ಕೊರತೆ ಇಲ್ಲ. ಕೊರತೆ ಇದ್ದರೆ ವಿರೋಧ ಪಕ್ಷಗಳು ತೋರಿಸಲಿ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ಸವಾಲು ಹಾಕಿದ್ದಾರೆ.
ಸದಾಶಿವನಗರದ ತಮ್ಮ ನಿವಾಸದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ೨ನೇ ಅಲೆಯ ವೈರಸ್ ಮೊದಲನೆ ಅಲೆಗಿಂತ ಭಿನ್ನವಾಗಿದೆ. ಇದು ರೂಪಾಂತರ ವೈರಸ್ ಆಗಿದ್ದು, ಇಡೀ ವೈದ್ಯ ಜಗತ್ತಿಗೆ ಸವಾಲಾಗಿ ದಾರಿ ತಪ್ಪಿಸುವಂತಹ ವೈರಸ್ ಆಗಿದೆ ಎಂದರು.
ಈ ವೈರಸ್‌ನ ಗುಣಲಕ್ಷಣಗಳ ಬಗ್ಗೆ ಸಂಶೋಧನೆಗಳು ನಡೆಯುತ್ತಿವೆ. ಈ ವೈರಸ್ ಹೆಚ್ಚು ವೇಗವಾಗಿ ಹರಡುತ್ತಿದೆ. ಹಾಗೂ ತೀಕ್ಷ್ಣವಾಗಿದೆ. ಹೆಚ್ಚು ಜನ ಉಸಿರಾಟದ ತೊಂದರೆಗೆ ಸಿಲುಕಿದ್ದಾರೆ. ಮೊದಲನೇ ಅಲೆಯಲ್ಲಿ ಇಷ್ಟು ಸಮಸ್ಯೆ ಇರಲಿಲ್ಲ ಎಂದು ಅವರು ಹೇಳಿದರು.
ಭಾರತದಲ್ಲಿ ಕಾಣಿಸಿಕೊಂಡಿರುವ ೨ನೇ ಅಲೆಯ ವೈರಸ್‌ಗೆ ವಿದೇಶಗಳಲ್ಲಿ ಭಾರತದ ರೂಪಾಂತರ ವೈರಸ್ ಎಂದೇ ಹೆಸರಿಡಲಾಗಿದೆ. ಈ ವೈರಸ್ ಬ್ರಿಟನ್, ಬ್ರಿಜಿಲ್ ವೈರಸ್‌ಗಿಂತ ಭಿನ್ನವಾಗಿದೆ. ವೇಗವಾಗಿ ಹರಡುತ್ತಿದೆ ಎಂದರು.
೨ನೇ ಅಲೆಯ ವೈರಸ್ ವೈದ್ಯ ಜಗತ್ತಿಗೆ ಸವಾಲಾಗಿದ್ದರು ಮರಣ ಪ್ರಮಾಣ ೦.೫ರ ಮಿತಿಯಲ್ಲೇ ಇದೆ. ಈ ವೈರಸ್‌ನಿಂದ ಮರಣ ಹೊಂದುವವರ ಸಂಖ್ಯೆ ಕಡಿಮೆ ಇದೆ. ಆದರೆ ಹರಡುವಿಕೆ ಜಾಸ್ತಿಯಾಗಿದೆ ಎಂದರು.
ವೈರಸ್‌ಗಲ್ಲಿ ತುತ್ತಾಗಿರುವವರಲ್ಲಿ ಶೇ. ೩-೪ ಮಂದಿಗೆ ಮಾತ್ರ ಉಸಿರಾಟದ ತೊಂದರೆ ಕಾಣಿಸಿಕೊಳ್ಳುತ್ತಿದಂತೆ ಉಳಿದವರಿಗೆ ಮನೆಯಲ್ಲೇ ಚಿಕಿತ್ಸೆ ನೀಡುವಷ್ಟು ವೈರಸ್ ಮೈಲ್ಡ್ ಆಗಿದೆ ಎಂದರು
ಹೆಚ್ಚು ಸೋಂಕಿತರಿಗೆ ಉಸಿರಾಟದ ತೊಂದರೆ ಕಾಣಿಸಿಕೊಂಡ ಕಾರಣ ಆಮ್ಲಜನಕ ಬಳಕೆ ಹೆಚ್ಚಿದೆ. ಸದ್ಯ ರಾಜ್ಯದಲ್ಲಿ ಆಮ್ಲಜನಕದ ಕೊರತೆ ಇಲ್ಲ. ರಾಜ್ಯಕ್ಕೆ ಮೇ ತಿಂಗಳ ಆರಂಭದಿಂದಲೇ ೧೪೧೪ ಟನ್ ಆಮ್ಲಜನಕ ಅಶ್ಯಕತೆ ಇದೆ ಇಷ್ಟು ಪ್ರಮಾಣದ ಆಮ್ಲಜನಕವನ್ನು ಪೂರೈಸಿ ಎಂದು ಪ್ರಧಾನಿಗಳಿಗೆ ನಿನ್ನೆ ಮುಖ್ಯಮಂತ್ರಿ ಮನವಿ ಮಾಡಿದ್ದಾರೆ ಎಂದರು.
ಈ ವೈರಸ್‌ನ ಗುಣಲಕ್ಷಣಗಳನ್ನು ಗಮನಿಸಿಯೇ ಏಮ್ಸ್‌ನ ನಿರ್ದೇಶಕ ಡಾ. ಬುಲೆರಿಯಾ ೨ನೇ ಅಲೆಯ ವೈರಾಣು ಚೆಸ್ ರೀತಿಯಲ್ಲಿ ಆಟವಾಡುತ್ತಿದೆ ಎಂದು ಹೇಳಿದ್ದಾರೆ. ವೈರಸ್ ಸಂಪೂರ್ಣ ಬದಲಾಗಿದೆ ಎಂದರು.
ರಾಜ್ಯದ ಎಲ್ಲ ಸಣ್ಣ, ದೊಡ್ಡ ಆಸ್ಪತ್ರೆಗಳಲ್ಲೂ ಸದ್ಯಕ್ಕೆ ಆಮ್ಲಜನಕದ ಕೊರತೆ ಇಲ್ಲ. ಇದುವರೆಗೂ ೫೫೦ಸಟನ್ ಆಮ್ಲಜನಕವನ್ನು ಚಿಕಿತ್ಸೆಗೆ ಬಳಸಲಾಗಿದೆ ಎಂದರು.
೨ಸಾವಿರ ಐಸಿಯು ಬೆಡ್
ಬೆಂಗಳೂರಿನಲ್ಲಿ ಸದ್ಯಕ್ಕೆ ೨ ಸಾವಿರ ಐಸಿಯು ಬೆಡ್‌ಗಳ ಅವಶ್ಯಕತೆ ಇದ್ದು, ದೊಡ್ಡ ದೊಡ್ಡ ಆಸ್ಪತ್ರೆಗಳ ಆವರಣದಲ್ಲಿ ಮೇಕ್ ಶಿಫ್ಟ್ ಆಸ್ಪತ್ರೆಗಳನ್ನು ನಿರ್ಮಿಸಲಾಗುತ್ತಿದೆ. ಇನ್ನು ೧೫ ದಿನಗಳೊಳಗೆ ೨ ಸಾವಿರ ಐಸಿಯುಗಳ ಬೆಡ್‌ನ ಮೇಕ್‌ಶಿಫ್ಟ್ ಆಸ್ಪತ್ರೆಗಳನ್ನು ಸ್ಥಾಪಿಸಲಾಗುವುದು ಎಂದರು.
ಇದು ಯುದ್ಧದ ಸಂದರ್ಭ ಸಮರೋಪಾದಿಯಲ್ಲಿ ಎಲ್ಲರೂ ಒಗ್ಗಟ್ಟಾಗಿ ಪರಿಸ್ಥಿತಿಯನ್ನು ಎದುರಿಸಬೇಕಿದೆ. ಹಾಗಾಗಿ ರೋಗ ಲಕ್ಷಣಗಳ ಇಲ್ಲದವರನ್ನು ಆಸ್ಪತ್ರೆಗೆ ದಾಖಲು ಮಾಡಿಕೊಳ್ಳದಂತೆ ಸೂಚನೆ ನೀಡಿದ್ದೇವೆ. ಉಸಿರಾಟದ ತೊಂದರೆ ಸೇರಿದಂತೆ ತೀವ್ರತರ ತೊಂದರೆ ಇರುವವರನ್ನು ಮಾತ್ರ ಆಸ್ಪತ್ರೆಗೆ ದಾಖಲು ಮಾಡಲಾಗುತ್ತದೆ. ಉಳಿದವರನ್ನು ಮನೆಯಲ್ಲೇ ಐಸೊಲೇಷನ್ ಮಾಡಿ ಟೆಲಿಕಾಲಿಂಗ್ ಮೂಲಕ ಚಿಕಿತ್ಸೆಯ ಮಾರ್ಗದರ್ಶನ ಮಾಡಲಾಗುತ್ತಿದೆ ಎಂದರು.
ಯಾವುದೇ ಪ್ರಭಾವಕ್ಕೆ ಮಣಿದು ರಾಜಕಾರಣಿಗಳು, ಅಧಿಕಾರಿಗಳು, ಉದ್ಯಮಿಗಳನ್ನು ಸೋಂಕಿನ ಲಕ್ಷಣಗಳಿಲ್ಲದಿದ್ದರೂ ಆಸ್ಪತ್ರೆಗೆ ದಾಖಲು ಮಾಡಿದರೆ ಅಂತಹ ಆಸ್ಪತ್ರೆಗಳ ವಿರುದ್ಧ ಕ್ರಮ ಜರುಗಿಸುವ ಎಚ್ಚರಿಕೆಯನ್ನು ಅವರು ನೀಡಿದರು.
ಎರಡನೇ ಕೊರೊನಾ ಅಲೆಯಲ್ಲಿ ಗುಣಮುಖರಾಗುವ ಸೋಂಕಿತರ ಸಂಖ್ಯೆ ಹೆಚ್ಚಿದೆ. ಶೇ. ೮೨ ರಷ್ಟು ಸೋಂಕಿತರು ಗುಣಮುಖರಾಗಿದ್ದಾರೆ. ಇದುವರೆಗೂ ೧೦ ಲಕ್ಷಕ್ಕೂ ಹೆಚ್ಚು ಮಂದಿ ರಾಜ್ಯದಲ್ಲಿ ಕೊರೊನಾ ಸೋಂಕಿನಿಂದ ಗುಣಮುಖರಾಗಿದ್ದಾರೆ ಎಂದು ಅವರು ಹೇಳಿದರು.
ರಾಜ್ಯ ಸರ್ಕಾರ ಕೊರೊನಾ ತಡೆಗೆ ಚಿಕಿತ್ಸೆಗೆ ಎಲ್ಲ ಕ್ರಮಗಳನ್ನು ಕೈಗೊಂಡಿದೆ. ಎಲ್ಲರೂ ಸಹ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಅನಗತ್ಯವಾಗಿ ಓಡಾಡುವುದು, ಗುಂಪು ಸೇರುವುದನ್ನು ಕಡಿಮೆ ಮಾಡಿದರೆ ವೈರಸ್‌ನ್ನು ನಿಯಂತ್ರಿಸಲು ಸಾಧ್ಯ ಎಂದರು.