ಆಮ್ಲಜನಕ ಕೊರತೆಯಿಂದ ಸಾವನ್ನಪ್ಪಿಲ್ಲ ಸುರೇಶ್ ಸ್ಪಷ್ಟನೆ

ಬೆಂಗಳೂರು, ಮೇ ೩- ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ೨೪ ಗಂಟೆಗಳಲ್ಲಿ ೨೪ ಮಂದಿ ಆಮ್ಲಜನಕ ಕೊರತೆಯಿಂದ ಮೃತಪಟ್ಟಿದ್ದಾರೆ ಎಂಬ ವರದಿಗಳನ್ನು ತಳ್ಳಿ ಹಾಕಿರುವ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಸುರೇಶ್‌ಕುಮಾರ್, ಆಮ್ಲಜನಕ ಕೊರತೆಯಿಂದ ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ೨೪ ಮಂದಿ ಮೃತಪಟ್ಟಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಆಸ್ಪತ್ರೆಯಲ್ಲಿ ೨೪ ಮಂದಿ ಯಾವ ಕಾರಣದಿಂದ ಮೃತಪಟ್ಟಿದ್ದಾರೆ ಎಂಬ ಬಗ್ಗೆ ವೈದ್ಯರಿಂದ ವರದಿ ಕೇಳಿದ್ದೇನೆ. ವರದಿ ಬಂದ ನಂತರ ಈ ದುರಂತಕ್ಕೆ ಕಾರಣರಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದರು.
ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ನಿನ್ನೆ ಮಧ್ಯರಾತ್ರಿ ಆಕ್ಸಿಜನ್ ಕೊರತೆಯಾಗಿದೆ. ಆಕ್ಸಿಜನ್ ಕೊರತೆಯ ಮಾಹಿತಿ ತಿಳಿದ ಕೂಡಲೇ ೮೦ ಸಿಲಿಂಡರ್ ಆಮ್ಲಜನಕ ವ್ಯವಸ್ಥೆ ಮಾಡಲಾಗಿದೆ. ಜತೆಗೆ ೬ ಸಾವಿರ ಲೀಟರ್ ಲಿಕ್ವಿಡ್ ಟ್ಯಾಂಕ್ ಇದೆ ಎಂದರು.
ಚಾಮರಾಜನಗರದಲ್ಲಿ ೨೪ ಮಂದಿ ಮೃತಪಟ್ಟಿರುವುದು ಆಮ್ಲಜನಕದ ಕೊರತೆಯಿಂದಲ್ಲ ಎಂದು ಅವರು ಹೇಳಿದರು.
ಮೈಸೂರಿನಿಂದ ಚಾಮರಾಜನಗರಕ್ಕೆ ಬರಬೇಕಾದ ಆಮ್ಲಜನಕ ಬಾರದೇ ಇರುವುದರಿಂದ ಸಮಸ್ಯೆಯಾಗಿತ್ತು. ಮೈಸೂರಿನಲ್ಲಿ ಕೋವಿಡ್ ರೋಗಿಗಳ ಸಂಖ್ಯೆ ಹೆಚ್ಚಿದೆ ಎಂದು ಚಾಮರಾಜನಗರಕ್ಕೆ ಕೊಡಬೇಕಾದ ಆಮ್ಲಜನಕ ಕೊಡದೇ ಇದ್ದದ್ದು ಸರಿಯಲ್ಲ ಎಂದು ಪರೋಕ್ಷವಾಗಿ ಮೈಸೂರು ಜಿಲ್ಲಾಧಿಕಾರಿ ವಿರುದ್ಧ ಆರೋಪ ಮಾಡಿದರು.
ಪ್ರತಿ ಸಾವು ದುಃಖ ತರುತ್ತದೆ. ಜನ ಸಹ ಕಾಯಿಲೆ ಗಂಭೀರವಾದ ನಂತರ ಆಸ್ಪತ್ರೆಗೆ ಏನೂ ಮಾಡಲು ಸಾಧ್ಯವಿಲ್ಲ. ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ಗಂಭೀರ ಸಮಸ್ಯೆಯಿಂದ ಬಳಲುತ್ತಿರುವವರು ಮೃತಪಟ್ಟಿದ್ದಾರೆ. ಎಲ್ಲರೂ ಆಕ್ಸಿಜನ್ ಕೊರತೆಯಿಂದ ಮೃತಪಟ್ಟಿದ್ದಾರೆ ಎಂಬುದು ಸರಿಯಲ್ಲ ಎಂದರು.
ಎರಡು-ಮೂರು ದಿನಗಳ ಹಿಂದೆ ಜಿಲ್ಲೆಗೆ ನಾನು ಭೇಟಿ ಕೊಟ್ಟಿದ್ದೆ. ಎಲ್ಲ ವ್ಯವಸ್ಥೆಯನ್ನು ಮಾಡಲಾಗಿತ್ತು ಎಂದು ಅವರು ಹೇಳಿದರು.