ಆಮ್ಲಜನಕ ಅಭಾವ : 24 ರೋಗಿಗಳ ಸಾವು


ಚಾಮರಾಜನಗರ, ಮೇ. ೩-ಗಡಿ ಜಿಲ್ಲೆ ಚಾಮರಾಜನಗರ ಜಿಲ್ಲಾ ಆಸ್ಪತ್ರೆಯಲ್ಲಿ ಆಮ್ಲಜನಕ ಸಿಗದೆ ೨೪ ಮಂದಿ ಸಾವನ್ನಪ್ಪಿರುವ ಮನಕಲಕುವ ಘಟನೆ ಸಂಭವಿಸಿದೆ. ತಮ್ಮವರನ್ನು ಕಳೆದುಕೊಂಡ ಕುಟಂಬ ಸದಸ್ಯರ ಆಕ್ರಂದನ ಮುಗಿಲು ಮುಟ್ಟಿದೆ.
ಕೊರೊನಾ ಸೋಂಕಿತರು ಮೃತಪಟ್ಟಿರುವ ವಿಷಯವನ್ನು ಆರೋಗ್ಯಾಧಿಕಾರಿಗಳು ಖಚಿತ ಪಡಿಸಿದ್ದಾರೆ. ಆಕ್ಸಿಜನ್ ಕೊರತೆಗೆ ಜಿಲ್ಲಾ ಉಸ್ತುವಾರಿ ಸಚಿವ ಸುರೇಶ್ ಕುಮಾರ್ ಹಾಗೂ ಜಿಲ್ಲಾಡಳಿತದ ವೈಫಲ್ಯದ ವಿರುದ್ದ ಜನರು ಆಕ್ರೋಶ ಹೊರಹಾಕಿದ್ದಾರೆ.
ಭಾನುವಾರ ರಾತ್ರಿ ಏಕಾಏಕಿ ಆಕ್ಸಿಜನ್ ಕೊರತೆ ಉಂಟಾಗಿ ರೋಗಿಗಳು ನರಳಾಡಿದ್ದಾರೆ. ಮೃತಪಟ್ಟವರಲ್ಲಿ ಸೋಂಕು ತಗುಲಿದವರು, ಕೋವಿಡ್ ಅಲ್ಲದ ರೋಗಿಗಳು ಸಾವನ್ನಪ್ಪಿದ್ದಾರೆ.
ಸಕಾಲದಲ್ಲಿ ಆಕ್ಸಿಜನ್ ಲಭ್ಯವಾಗದೆ ತಕ್ಷಣ ಆಕ್ಸಿಜನ್ ಪೂರೈಸುವಂತೆ ರೋಗಿಗಳು ಅಂಗಲಾಚಿದ್ದಾರೆ. ಕಡೆಗೆ ಆಮ್ಲಜನಕ ದೊರೆಯದೆ ಜಿಲ್ಲಾ ಆಸ್ಪತ್ರೆಯು ಈ ಘೋರ ಘಟನೆಗೆ ಸಾಕ್ಷಿಯಾಯಿತು.
ಜಿಲ್ಲಾ ಆಸ್ಪತ್ರೆಯಲ್ಲಿ ೫೦ ವೆಂಟಿಲೇಟರ್‌ಗಳು, ೫೦ ಆಕ್ಸಿಜನ್ ಬೆಡ್‌ಗಳು ಇವೆ. ಈಗ ಆಮ್ಲಜನಕ ಕೊರತೆಯಾಗಿರುವುದರಿಂದ ರೋಗಿಗಳ ನರಳಾಟ ಹೇಳತೀರದಾಗಿದೆ.
ಆಕ್ಸಿಜನ್ ಖಾಲಿಯಾದ ನಂತರ, ಕೋವಿಡೇತರ ರೋಗಿಗಳ ಸಂಬಂಧಿಕರು ಬೀಸಣಿಕೆ, ಪೇಪರ್ ಹಾಗೂ ಟವಲ್ ನಿಂದ ಗಾಳಿ ಬೀಸುತ್ತಿದ್ದ ದೃಶ್ಯಗಳು ಕಂಡುಬಂದವು. ಆದರೆ ರೋಗಿಗಳ ಸಾವನ್ನು ತಡೆಯಲು ಆಗಲೇಇಲ್ಲ.
ಆಕ್ಸಿಜನ್ ಪೂರೈಕೆಯಾಗದೆ ೫೦ಕ್ಕೂ ಹೆಚ್ಚು ಕೊರೊನಾ ಸೋಂಕಿತರ ಪರಿಸ್ಥಿತಿ ಚಿಂತಾಜನಕವಾಗಿದೆ.
ರಾಜ್ಯದಲ್ಲಿ ಕೊರೊನಾ ಸೋಂಕು ಮಿತಿ ಮೀರಿದ್ದರೂ ಆಕ್ಸಿಜನ್ ಸಮರ್ಪಕ ರೀತಿಯಲ್ಲಿ ಪೂರೈಸದಿರುವುದು ತೀವ್ರ ಆತಂಕಕ್ಕೆ ಕಾರಣವಾಗಿದೆ.
ರಾಜ್ಯದಲ್ಲಿ ಆಕ್ಸಿಜನ್ ಕೊರತೆ ಇಲ್ಲ ಎಂದು ಆರೋಗ್ಯ ಸಚಿವ ಡಾ.ಸುಧಾಕರ್ ಹಲವು ಬಾರಿ ಸ್ಪಷ್ಟಪಡಿಸಿದ್ದಾರೆ. ಆದರೆ ಚಾಮರಾಜನಗರ ಜಿಲ್ಲಾ ಆಸ್ಪತ್ರೆಯಲ್ಲಿ ಆಕ್ಸಿಜನ್ ಕೊರತೆ ಎದುರಾಗಿರುವುದು ಪರಿಸ್ಥಿತಿಯ ಭೀಕರತೆಗೆ ಕಾರಣವಾಗಿದೆ.
ಬಡವರು ಜಿಲ್ಲಾ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಜಿಲ್ಲಾ ಆಸ್ಪತ್ರೆಯಲ್ಲೇ ಆಕ್ಸಿಜನ್ ಕೊರತೆ ಎದುರಾಗಿರುವುದು ಜಿಲ್ಲಾ ಉಸ್ತುವಾರಿ ಸಚಿವರ ನಿರ್ಲಕ್ಷಕ್ಕೆ ಕೈಗನ್ನಡಿಯಾಗಿದೆ.
ಆಕ್ಸಿಜನ್ ಕೊರತೆಯಿಂದಾಗಿದ ೨೪ ಮಂದಿ ಸಾವನ್ನಪ್ಪಿದ್ದ ಸುದ್ದಿ ತಿಳಿಯುತ್ತಿದ್ದಂತೆ ಸಂಬಂಧಿಕರ ಚೀರಾಟ, ಆಕ್ರಂದನ ಮುಗಿಲೇಗಿರಿತು. ಅವರನ್ನು ಯಾರಿಂದಲೂ ಸಂತೈಸಲು ಸಾಧ್ಯವಾಗಲಿಲ್ಲ. ತಮ್ಮವರನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ ಎಂಬ ವ್ಯಥೆ ಎದ್ದು ಕಂಡಿತು.
ಎಲ್ಲಕ್ಕಿಂತ ಹೆಚ್ಚಾಗಿ ಆಕ್ಷಿಜನ್ ಕೊರತೆ ಎದುರಾಗುತ್ತಿದ್ದಂತೆ ಜಿಲ್ಲಾ ಆರೊಗ್ಯಧಿಕಾರಿಯಾಗಲೀ, ಜಿಲ್ಲಾ ಉಸ್ತುವಾರಿ ಸಚಿವರಾಲಿ ಪರ್ಯಾಯ ವ್ಯವಸ್ಥೆ ಮಾಡಬೇಕಾಗಿತ್ತು ಇದಾವುದು ಮಾಡದೆ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಕೋವಿಡ್ ರೋಗಿಗಳು ಸಾವನ್ನಪ್ಪಿದ್ದಾರೆ ಎಂದರೆ ಇದಕ್ಕೆ ಯಾರು ಹೊಣೆ.
ಆಕ್ಸಿಜನ್ ಒದಗಿಸುವಂತೆ ರೋಗಿಗಳ ಕುಟುಂಬ ಸದಸ್ಯರು ಆಸ್ಪತ್ರೆ ಮುಂದೆ ರೋಧಿಸುತ್ತಿರುವುದು ಮನಕಲಕುವಂತಿದೆ. ಆದರೆ ವೈದ್ಯರು ಅಸಹಾಯಕರಾಗಿ ಮೂಕ ಪ್ರೇಕ್ಷರಾಗಿ ಕೈಚೆಲ್ಲಿದ್ದಾರೆ.
ಘಟನೆ ಬಗ್ಗೆ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಜಿಲ್ಲಾಧಿಕಾರಿಗಳಿಗೆ ಕರೆ ಮಾಡಿ ಮಾಹಿತಿ ಪಡೆದುಕೊಂಡಿದ್ದಾರೆ. ಆಕ್ಸಿಜನ್ ವೈಫಲ್ಯತೆ ಬಗ್ಗೆ ಜಿಲ್ಲಾಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ. ರೋಗಿಗಳ ಸಾವಿನ ಬಗ್ಗೆ ಸಮಗ್ರ ಮಾಹಿತಿ ನೀಡುವಂತೆ ಸೂಚಿಸಿರುವ ಮುಖ್ಯಮಂತ್ರಿಗಳು, ಈ ಘಟನೆಯ ಹೂಣೆ ಯಾರು ಹೂತ್ತು ಕೊಳ್ಳುತ್ತಾರೆ ಎಂದು ಪ್ರಶ್ವಿಸಿದ್ದಾರೆ.
ಇದೇ ವೇಳೆ ಆಸ್ಪತ್ರೆ ಮುಂದೆ ನೂರಾರು ಜನರು ಜಮಾಯಿಸಿದ್ದು, ಪರಿಸ್ಥಿತಿ ನಿಭಾಯಿಸಲು ಪೊಲೀಸರು ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದಾರೆ.