ಚಿತ್ರದುರ್ಗ. ಜೂ.14; ನಗರದ ಎಸ್‌ಜೆಎಂ ತಾಂತ್ರಿಕ ಮಹಾವಿದ್ಯಾಲಯದಲ್ಲಿ ವಿಶ್ವಪರಿಸರ ದಿನಾಚರಣೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಕರ್ನಾಟಕ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ನಿವೃತ್ತ ಮುಖ್ಯಾಧಿಕಾರಿ ಡಿ.ಆರ್. ಕುಮಾರಸ್ವಾಮಿ ಮಾತನಾಡಿ, ನಾವು ಸಮಾಜಕ್ಕಾಗಿ ಏನನ್ನಾದರೂ ಒಳಿತನ್ನು ಮಾಡಬೇಕು. ರಾಮಕೃಷ್ಣ ಪರಮಹಂಸರು, ಸ್ವಾಮಿ ವಿವೇಕಾನಂದರು, ಏಸುಕ್ರಿಸ್ತರಂತಹ ಮಹನೀಯರು ತಮಗಾಗಿ ಬದುಕದೆ ಸಮಾಜದ ಹಿತಕ್ಕಾಗಿ, ಒಳಿತಿಗಾಗಿ ಬದುಕಿದರು. ಪರಿಸರ ದಿನಾಚರಣೆ ಕೇವಲ ಒಂದು ದಿನಕ್ಕೆ ಮಾತ್ರ ಸೀಮಿತವಾಗಬಾರದು ಅದು ನಿತ್ಯ ನಿರಂತರವಾಗಿರಬೇಕು. ಆಮ್ಲಜನಕದ ಮಹತ್ವವನ್ನು ಜನತೆ ಅರಿತಾಗ ಮಾತ್ರ ಪರಿಸರ ಸಂರಕ್ಷಣೆ ಕುರಿತು ಜನರಲ್ಲಿ ಜಾಗೃತಿ ಮೂಡುತ್ತದೆ. ನಾವು ನಮ್ಮ ಹುಟ್ಟುಹಬ್ಬ ಆಚರಣೆ, ವಿವಾಹ ವಾರ್ಷಿಕೋತ್ಸವ ಆಚರಣೆ ಹೀಗೆ ಹಲವು ಸಂಭ್ರಮದ ಸಂತಸಗಳನ್ನು ಕೇಕ್ ಕತ್ತರಿಸಿ ಆಚರಿಸುವುದರ ಬದಲು ಗಿಡ ನೆಟ್ಟು ಆಚರಿಸಿದಲ್ಲಿ ನಮ್ಮ ಸಂಭ್ರಮಾಚರಣೆ ಅರ್ಥಪೂರ್ಣವಾಗುತ್ತದೆ. ಈ ನಿಟ್ಟಿನಲ್ಲಿ ಯುವಜನತೆ ಗಮನ ಹರಿಸಬೇಕಾಗಿದೆ ಎಂದು ತಿಳಿಸಿದರು.ಪ್ರಾಚಾರ್ಯ ಡಾ.ಭರತ್ ಪಿ ಬಿ ಮಾತನಾಡಿ, ಜಿಲ್ಲಾ ಜೈವಿಕ ಇಂಧನ ಮಾಹಿತಿ ಮತ್ತು ಪ್ರಾತ್ಯಕ್ಷಿಕೆ ಕೇಂದ್ರವನ್ನು ಹೊಂದಿದ್ದು, ಜೈವಿಕ ಇಂಧನವನ್ನು ಉತ್ಪಾದನೆ ಮಾಡುತ್ತಾ ಬಂದಿದೆ. ಜೈವಿಕ ಇಂಧನ ಸಸ್ಯಗಳಾದ ಸಿಮರೂಬ, ಹೊಂಗೆ, ಬೇವು, ಜತ್ರೋಪ ಇನ್ನಿತರ ಸಸ್ಯಗಳನ್ನು ನೆಟ್ಟು ಜೈವಿಕ ಇಂಧನ ಅಭಿವೃದ್ಧಿಗೆ ಒತ್ತು ನೀಡಿದ್ದೇವೆ. ವಿದ್ಯಾರ್ಥಿಗಳು ಪರಿಸರದ ಮೇಲೆ ಕಾಳಜಿಯನ್ನು ಪ್ರಾರಂಭದಿAದಲೂ ಬೆಳಸಿಕೊಳ್ಳಬೇಕು. ಪರಿಸರ ಸಂರಕ್ಷಣೆಗೆ ಕಟಿಬದ್ಧರಾಗಬೇಕು ಎಂದು ತಿಳಿಸಿದರು.ಸ್ಪೀಚ್ ಸಂಸ್ಥೆಯ ಕಾರ್ಯದರ್ಶಿ ಶೇಷಪ್ಪ ಮಾತನಾಡಿ, ನಾವು ನಮ್ಮ ಸಂಸ್ಥೆಯ ವತಿಯಿಂದ 2011ನೇ ಸಾಲಿನಿಂದ ಸಸಿ ನೆಡುವ ಕಾರ್ಯಕ್ರಮವನ್ನು ಆಯೋಜಿಸುತ್ತಿದ್ದು, ಪ್ರತಿದಿನ ಸಸಿ ನೆಡುತ್ತಾ ಬಂದಿದ್ದೇವೆ. ರ‍್ಯಾಯ ಇಂಧನ ಅಭಿವೃದ್ಧಿ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಜೈವಿಕ ಸಸ್ಯಗಳನ್ನು ನೆಡಲು ಪ್ರಾಮುಖ್ಯತೆ ನೀಡುತ್ತಿದ್ದೇವೆ. ನಾವು ನೆಟ್ಟ ಗಿಡ ಬೆಳೆದು ಮರವಾಗಿ ನಿಂತಾಗ ಮನಸ್ಸಿಗೆ ಖುಷಿ ಕೊಡುತ್ತದೆ. ಯುವಜನತೆ ಅನಗತ್ಯ ಖರ್ಚುಗಳಿಗೆ ಕಡಿವಾಣ ಹಾಕಿ ಸ್ವಲ್ಪ ಹಣವನ್ನು ಗಿಡ ನೆಡಲು ವಿನಿಯೋಗಿಸಬೇಕು. ಹವಾಮಾನ ಬದಲಾವಣೆ, ಬಿಸಿಲಿನ ತಾಪಮಾನ ನಿಯಂತ್ರಣ ಮಾಡಲು ನಾವು ಪರಿಸರ ಸಂರಕ್ಷಣೆಗೆ ಶ್ರಮ ಪಡಬೇಕು. ಆ ಮೂಲಕ ನಮ್ಮ ಪರಿಸರವನ್ನು ಉಳಿಸಿ ಮುಂದಿನ ಪೀಳಿಗೆಗೆ ಕೊಂಡೊಯ್ಯಬೇಕು. ನಮ್ಮ ಹಿಂದಿನ ಪೀಳಿಗೆಯ ಶ್ರಮದ ಫಲವಾಗಿ ನಾವು ಕೆರೆ-ಕಟ್ಟೆಗಳನ್ನು, ಗಿಡ-ಮರಗಳನ್ನು ಕಾಣುತ್ತಿದ್ದೇವೆ. ಯುವಜನತೆ ಪರಿಸರ ರಕ್ಷಣೆ ಕುರಿತು ತಮ್ಮ ಜವಾಬ್ದಾರಿ ಅರಿತು ಮುಂಬರುವ ದಿನಗಳಲ್ಲಿ ಗಿಡ ನೆಡುವುದರ ಕಡೆಗೆ ಆಸಕ್ತಿ ತೋರಬೇಕು ಎಂದು ನುಡಿದರು.ವೇದಿಕೆಯಲ್ಲಿ ನಾನಾ ವಿಭಾಗಗಳ ಮುಖ್ಯಸ್ಥರುಗಳಾದ ಡಾ. ಬಿ.ಜಿ.ಕುಮಾರಸ್ವಾಮಿ, ಡಾ. ಎನ್ ಜಗನ್ನಾಥ್, ಡಾ.ಶ್ರೀಶೈಲ ಜೆ ಎಂ ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.ಕಾರ್ಯಕ್ರಮದಲ್ಲಿ ಪ್ರೊ. ಸುಷ್ಮಿತಾ ದೇಬ್ ನಿರೂಪಿಸಿ, ಪ್ರೊ. ಅನುಷಾ ವಿ ಸ್ವಾಗತಿಸಿ, ಪ್ರೊ.ಮೀನಾಕ್ಷಿ ಎಂ ವಂದಿಸಿದರು.