ಆಮ್ಲಜನಕಕ್ಕೆ ಸೋಂಕಿತರ ಪರದಾಟ ೪೦೭ ಮಂದಿ ಸೋಂಕಿತರು ಸಾವು

ನವದೆಹಲಿ, ಮೇ ೦೩: ರಾಷ್ಟ್ರ ರಾಜಧಾನಿಯಲ್ಲಿ ಕೊರೊನಾದಿಂದ ಉಸಿರಾಟದ ತೀವ್ರ ಸಮಸ್ಯೆ ಎದುರಿಸುತ್ತಿರುವ ರೋಗಿಗಳು ಆಮ್ಲಜನಕ ದೊರೆಯದೆ ಒಂದು ಆಸ್ಪತ್ರೆಯಿಂದ ಮತ್ತೊಂದು ಆಸ್ಪತ್ರಗೆ ಎಡತಾಕುವುದು ಮುಂದುವರಿದಿದೆ.
ಭಾನುವಾರ ಸಂಜೆಗೆ ಕೊನೆಗೊಂಡ ೨೪ ಗಂಟೆಗಳ ಅವಧಿಯಲ್ಲಿ ಪರೀಕ್ಷೆಗೆ ಒಳಪಟ್ಟಿರುವ ೭೧,೯೯೭ ಜನರ ಪೈಕಿ ೨೦,೩೯೪ ಜನರಲ್ಲಿ ಸೋಂಕು ದೃಢಪಟ್ಟಿದೆ.
ಕಳೆದ ೧೫ ದಿನಗಳ ಅವಧಿಯಲ್ಲಿ ಇದೇ ಮೊದಲ ಬಾರಿಗೆ ಪರೀಕ್ಷೆಗೆ ಒಳಪಟ್ಟವರಲ್ಲಿ ಸೋಂಕಿಗೆ ಒಳಗಾದವರ ಪ್ರಮಾಣ ಶೇ ೩೦ಕ್ಕಿಂತ ಕಡಿಮೆ ಪ್ರಮಾಣಕ್ಕೆ ಇಳಿದಿದೆ. ಶನಿವಾರ ಶೇ ೩೧.೬೧ರಷ್ಟು ಜನರಲ್ಲಿ ಸೋಂಕು ಪತ್ತೆಯಾಗಿತ್ತು.
೨೪,೪೪೪ ಜನ ಗುಣಮುಖರಾಗಿದ್ದಾರೆ. ಈ ಸಂಖ್ಯೆಯು ಸೋಂಕಿತರಿಗಿಂತ ಹೆಚ್ಚಿನ ಪ್ರಮಾಣದಲ್ಲಿ ದಾಖಲಾಗಿರುವುದು ಸ್ವಲ್ಪ ಮಟ್ಟಿನ ಸಮಾಧಾನಕ್ಕೆ ಕಾರಣವಾಗಿದೆ. ಶನಿವಾರದಿಂದ ಹೊಸದಾಗಿ ಸೊಂಕಿಗೆ ಒಳಗಾಗುತ್ತಿರುವವರ ಸಂಖ್ಯೆಗಿಂತ ಗುಣಮುಖರಾದವರ ಸಂಖ್ಯೆಯಲ್ಲಿ ಹೆಚ್ಚಳ ಕಂಡು ಬರುತ್ತಿರುವುದೂ ಆತಂಕ ತಗ್ಗಲು ಕಾರಣವಾಗಿದೆ.
ಆದರೆ, ಇದೇ ಅವಧಿಯಲ್ಲಿ ಸಾವಿನ ಪ್ರಮಾಣದಲ್ಲಿ ಸಾಕಷ್ಟು ಪ್ರಮಾಣದ ಸುಧಾರಣೆ ಸಾಧ್ಯವಾಗದೆ, ಒಟ್ಟು ೪೦೭ ಜನ ಮೃತಪಟ್ಟಿದ್ದಾರೆ. ನಗರದಲ್ಲಿ ಇದುವರೆಗೆ ಕೊರೊನಾಗೆ ಜೀವ ಕಳೆದುಕೊಂಡವರ ಸಂಖ್ಯೆ ೧೬,೯೬೬ಕ್ಕೆ ತಲುಪಿದೆ.