ಆಮಿಷಗಳಿಗೆ ಒಳಗಾಗಬೇಡಿ: ಗ್ರಾ.ಪಂ. ಸದಸ್ಯರಿಗೆ ಪರಂ ಕರೆ

ಕೊರಟಗೆರೆ, ಜ. ೯- ನೂತನ ಗ್ರಾಮ ಪಂಚಾಯಿತಿ ಸದಸ್ಯರು ಇತರ ಪಕ್ಷಗಳ ಸುಳ್ಳು ಆಮಿಷಗಳಿಗೆ ಒಳಗಾಗಿ ಕುದುರೆ ವ್ಯಾಪಾರಕ್ಕೆ ಬಲಿಯಾಗದೆ ಸ್ವಸಾಮರ್ಥ್ಯದಿಂದ ಅಧಿಕಾರ ಹಿಡಿದು ಗ್ರಾಮಗಳ ಅಭಿವೃದ್ದಿಗೆ ಶ್ರಮಿಸಬೇಕು ಎಂದು ಮಾಜಿ ಉಪಮುಖ್ಯಮಂತ್ರಿ ಹಾಗೂ ಶಾಸಕ ಡಾ.ಜಿ.ಪರಮೇಶ್ವರ್ ಕರೆ ನೀಡಿದರು.
ಪಟ್ಟಣದ ಮಾರುತಿ ಕಲ್ಯಾಣ ಮಂಟಪದಲ್ಲಿ ಗ್ರಾಮ ಪಂಚಾಯ್ತಿ ಚುನಾವಣೆಯಲ್ಲಿ ನೂತನವಾಗಿ ಆಯ್ದೆಯಾಗಿರುವ ಕಾಂಗ್ರೆಸ್ ಬೆಂಬಲಿತ ಸದಸ್ಯರಿಗೆ ಏರ್ಪಡಿಸಿದ್ದ ಸನ್ಮಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಮಹಾತ್ಮ ಗಾಂಧಿಜೀಯರವರ ಗ್ರಾಮ ಸ್ವರಾಜ್ಯದ ಕನಸನ್ನು ಮಾಜಿ ಪ್ರಧಾನಮಂತ್ರಿ ದಿ. ರಾಜೀವ್ ಗಾಂಧಿರವರು ನನಸು ಮಾಡಿದ್ದು, ಅದರೊಂದಿಗೆ ಮಹಿಳೆಯರಿಗೆ ಶೇ. ೫೦ ಮೀಸಲಾತಿ ನೀಡದ ಅವರ ಆಶಯ ನೂತನ ಸದಸ್ಯರು ಕಾರ್ಯಗತ ಮಾಡಬೇಕು ಎಂದರು.
ಕೊರಟಗೆರೆ ವಿಧಾನಸಭಾ ಕ್ಷೇತ್ರದಲ್ಲಿ ೬೦೨ ಗ್ರಾಮ ಪಂಚಾಯಿತಿ ಸದಸ್ಯರ ಆಯ್ಕೆಯಲ್ಲಿ ಕಾಂಗ್ರೆಸ್ ಪಕ್ಷದ ಬೆಂಬಲಿತ ಸದಸ್ಯ ೩೬೦ ಸದಸ್ಯರಿಗೂ ಹೆಚ್ಚು ಮಂದಿ ಆಯ್ಕೆಯಾಗಿದ್ದಾರೆ. ಅದರಂತೆ ಜಿಲ್ಲೆಯಲ್ಲೂ ಶೇ. ೭೦ ರಷ್ಟು ಕಾಂಗ್ರೆಸ್ ಬೆಂಬಲಿತ ಸದಸ್ಯರು ಆಯ್ಕೆಯಾಗಿದ್ದರೂ ಬಿಜೆಪಿ ಪಕ್ಷದ ನಾಯಕರು ತಮ್ಮ ಪಕ್ಷ ಹೆಚ್ಚಿನ ಸ್ಥಾನ ಪಡೆದಿರುವುದಾಗಿ ಸುಳ್ಳು ಪ್ರಚಾರ ಮಾಡುತ್ತಿದ್ದಾರೆ ಎಂದು ದೂರಿದರು.
ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದ್ದ ಸಮಯದಲ್ಲಿ ಅಭಿವೃದ್ಧಿ ಹಾಗೂ ನೀರಾವರಿ ಯೋಜನೆಗಳಿಗೆ ಸಾವಿರಾರು ಕೋಟಿ ಅನುದಾನ ಬಿಡುಗಡೆ ಮಾಡಿದ್ದು, ಬಿಜೆಪಿ ಪಕ್ಷ ಅಧಿಕಾರಕ್ಕೆ ಬಂದ ತಕ್ಷಣ ಅನುದಾನಗಳನ್ನು ವಾಪಸ್ ಪಡೆದಿದ್ದು, ತಕ್ಷಣ ತುಮಕೂರು ಜಿಲ್ಲೆ ಸೇರಿದಂತೆ ಕೋಲಾರ, ಚಿಕ್ಕಬಳ್ಳಾಪುರ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಗಳ ಜನತೆಗೆ ಅನುಕೂಲವಾಗು ಎತ್ತಿನಹೊಳೆ ನೀರಾವರಿ ಯೋಜನೆಗೆ ಕಾಂಗ್ರೆಸ್ ಸರ್ಕಾರ ಬಿಡುಗಡೆ ಮಾಡಿದ್ದ ೧೩.೫ ಸಾವಿರ ಕೋಟಿ ರೂ.ಗಳನ್ನು ಹಣ ತಕ್ಷಣ ಬಿಡುಗಡೆ ಮಾಡಬೇಕು ಹಾಗೂ ಯೋಜನೆಯಲ್ಲಿ ಮುಳುಗಡೆಯಾಗುವ ರೈತರ ಜಮೀನುಗಳಿಗೆ ಸರಿಸಮಾನವಾದ ಬೆಲೆ ನೀಡಬೇಕು ಎಂದು ಆಗ್ರಹಿಸಿದರು.
ಬಿಜೆಪಿ ಸರ್ಕಾರ ತಾರತಮ್ಯ ಮಾಡಿದರೆ ಯೋಜನೆಗೆ ರೈತರು ಒಂದು ಎಕರೆ ಜಮೀನು ನೀಡುವುದಿಲ್ಲ ಎಂದು ಎಚ್ಚರಿಸಿದ ಅವರು, ಬಿಜೆಪಿ ಪಕ್ಷ ಕಾಂಗ್ರೆಸ್ ಪಕ್ಷದಬಗ್ಗೆ ಮಾತನಾಡುವ ಮೊದಲು ಕಾಂಗ್ರೆಸ್ ಪಕ್ಷದ ಇತಿಹಾಸ ಓದಬೇಕು. ಇತಿಹಾಸದಲ್ಲಿ ಕಾಂಗ್ರೆಸ್ ಪಕ್ಷ ಬಡ ಜನತೆಯ ಹಿತಕಾಪಾಡಲು ಹಲವು ಜನೋಪಯೋಗಿ ಯೋಜನೆಗಳನ್ನು ಅನುಷ್ಠಾನಗೊಳಿಸಿತ್ತು. ಆದರೆ ಬಿಜೆಪಿ ಪಕ್ಷ ರೈತರ ಹಿತಕಾಯದೆ ರೈತರಿಗೆ ಮಾರಕವಾಗಿರುವ ಭೂ ಕಾಯ್ದೆ ವಾಪಸ್ ಪಡೆಯದೆ ಕೇವಲ ಶ್ರೀಮಂತ ಪಕ್ಷವಾಗಿದೆ. ಕಾಂಗ್ರೆಸ್ ಪಕ್ಷದಲ್ಲಿ ಜಿಲ್ಲೆಯ ಎಲ್ಲಾ ನಾಯಕರು ಒಗ್ಗಟ್ಟಾಗಿ ಕಾಂಗ್ರೆಸ್ ಪಕ್ಷದ ಸಂಘಟನೆ ಮಾಡುತ್ತಿರುವುದಾಗಿ ತಿಳಿಸಿದರು.
ಮಾಜಿ ಶಾಸಕ ಹಾಗೂ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೆ.ಎನ್. ರಾಜಣ್ಣ ಮಾತನಾಡಿ, ನೂತನವಾಗಿ ಆಯ್ಕೆಯಾಗಿರುವ ಗ್ರಾಮ ಪಂಚಾಯಿತಿ ಸದಸ್ಯರಿಗೆ ಅಭಿನಂದನಾ ಕಾರ್ಯಕ್ರಮ ಇತರ ಜಿಲ್ಲೆಗಳಿಗೆ ಮಾದರಿಯಾಗಿದ್ದು, ಎಲ್ಲಾ ತಾಲೂಕು ಕೇಂದ್ರಗಳಲ್ಲೂ ಕಾರ್ಯಕ್ರಮ ಹಮ್ಮಿಕೊಳ್ಳಬೇಕಾಗಿದೆ ಎಂದ ಅವರು, ಕ್ಷೇತ್ರದಲ್ಲಿ ಕಾಂಗ್ರಸ್ ಬೆಂಬಲಿತ ಹೆಚ್ಚು ಅಭ್ಯರ್ಥಿಗಳು ಸ್ವಶಕ್ತಿಯಿಂದ ಗೆಲುವು ಸಾಧಿಸಿರುವುದು ಶ್ಲಾಘನೀಯ ಎಂದರು.
ರಾಜ್ಯದಲ್ಲಿ ನಡೆದ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸುಳ್ಳನ್ನೆ ತಮ್ಮ ಬಂಡವಾಳ ಮಾಡಿಕೊಂಡಿರುವ ಬಿಜೆಪಿ ಪಕ್ಷದ ಅಪಪ್ರಚಾರದಿಂದ ಕಾಂಗ್ರೆಸ್ ಪಕ್ಷಕ್ಕೆ ಸ್ವಲ್ಪ ಹಿನ್ನೆಡೆಯಾಗಿರಬಹುದು. ಆದರೆ ದೇಶ ಆರ್ಥಿಕವಾಗಿ ಸದೃಢವಾಗಲು ಕಾಂಗ್ರೆಸ್ ಪಕ್ಷವೇ ಕಾರಣ. ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದ್ದ ಸಮಯದಲ್ಲಿ ತಂತ್ರಜ್ಞಾನ ಸೇರಿದಂತೆ ಅನೇಕ ಬೃಹತ್ ಕೈಗಾರಿಕೆಗಳ ಸ್ಥಾಪನೆ ಮಾಡಿದ ಹಿನ್ನೆಲೆಯಾಗಿದ್ದು, ದೇಶದ ಜನತೆ ಸತ್ಯವನ್ನು ಅರಿತು ಮುಂದಿನ ೨೦೨೩ ರ ಚುನಾವಣೆಯಲ್ಲಿ ಮತ್ತೆ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ಬರುವುದು ಸತ್ಯ ಎಂದು ಭವಿಷ್ಯ ನುಡಿದರು.
ಕಾಂಗ್ರೆಸ್ ಪಕ್ಷದ ಬೆಂಬಲದಿಂದ ಪ್ರಧಾನ ಮಂತ್ರಿ ಹಾಗೂ ರಾಜ್ಯದಲ್ಲಿ ಮುಖ್ಯಮಂತ್ರಿ ಸೇರಿದಂತೆ ಉನ್ನತ ಪದವಿಗಳನ್ನು ಪಡೆದು ಕಾಂಗ್ರೆಸ್ ಪಕ್ಷವನ್ನು ಟೀಕೆ ಮಾಡಿ ಬಿಜೆಪಿ ಪಕ್ಷದೊಂದಿಗೆ ಒಳ ಒಪ್ಪಂದ ಮಾಡಿಕೊಂಡು ಚುನಾವಣೆ ಸಮಯದಲ್ಲಿ ಜಾತ್ಯಾತೀತ ಪಕ್ಷ ಎಂದು ಹೇಳಿಕೊಂಡು ನಂತರ ಕುಟುಂಬವಾದಿ ಪಕ್ಷವಾಗಿ ಮಾಡಿಕೊಂಡಿರುವ ಜೆಡಿಎಸ್ ಪಕ್ಷಕ್ಕೆ ಮುಂದಿನ ದಿನಗಳಲ್ಲಿ ಜನತೆ ಬುದ್ದಿ ಕಲಿಸುವರು ಎಂದ ಅವರು, ಕಾಂಗ್ರೆಸ್ ಪಕ್ಷ ಗೋಹತ್ಯ ಸೇರಿದಂತೆ ಜನ ವಿರೋಧಿ ಕಾಯ್ದೆಗಳನ್ನು ವಿರೋಧಿಸಬೇಕು ಎಂದು ಕಾರ್ಯಕರ್ತರಿಗೆ ಕರೆ ನೀಡಿದರು.
ಮಾಜಿ ಸಚಿವ ಟಿ.ಬಿ. ಜಯಚಂದ್ರ ಮಾತನಾಡಿ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ಗ್ರಾಮಗಳ ಅಭಿವೃದ್ದಿಗಾಗಿ ನೇರ ಗ್ರಾಮ ಪಂಚಾಯ್ತಿಗಳಿಗೆ ಅನುದಾನ ಬರುತ್ತಿದ್ದು, ನೂತನ ಸದಸ್ಯರು ಸಮರ್ಪಕವಾಗಿ ಗ್ರಾಮದ ಅಭಿವೃದ್ದಿಗೆ ಬಳಸಿ ಯೋಜನೆಗಳನ್ನು ಜನತೆಗೆ ತಲುಪಿಸಬೇಕು ಎಂದರು.
ಸಮಾವೇಶದಲ್ಲಿ ಶಾಸಕರಾದ ವೆಂಕಟರವಣಪ್ಪ, ಡಾ.ರಂಗನಾಥ್, ಮಾಜಿ ಶಾಸಕರಾದ ರಫೀಕ್‌ಅಹಮದ್, ಷಡಕ್ಷರಿ, ಷಫಿ ಅಹಮದ್, ಮಾಜಿ ವಿಧಾನ ಪರಿಷತ್ ಸದಸ್ಯ ರಮೇಶ್‌ಬಾಬು, ಯುವ ಮುಖಂಡ ಸಂತೋಷ್‌ಜಯಚಂದ್ರ, ಮಾಜಿ ಜಿ.ಪಂ.ಸದಸ್ಯ ಜಾಲಿಗಿರಿ ಕೃಷ್ಣಮೂರ್ತಿ, ತೆಂಗು ಮತ್ತು ನಾರು ಅಭಿವೃದ್ದಿ ನಿಗಮದ ಮಾಜಿ ಅಧ್ಯಕ್ಷ ಜಿ. ವೆಂಕಟಾಚಲಯ್ಯ, ಕೆ.ಪಿ.ಸಿ.ಸಿ ಕಾರ್ಯದರ್ಶಿ ವೇಣುಗೋಪಾಲ್, ದಿನೇಶ್, ತಾ.ಪಂ.ಅಧ್ಯಕ್ಷ ಟಿ.ಸಿ.ರಾಮಯ್ಯ, ಉಪಾಧ್ಯಕ್ಷ ವೆಂಕಟಪ್ಪ, ಪ.ಪಂ.ಸದಸ್ಯ ಎ.ಡಿ.ಬಲರಾಮಯ್ಯ, ಕೆ.ಎಸ್.ಓಬಳರಾಜು, ಡಿಸಿಸಿ ಬ್ಯಾಂಕ್ ನಿರ್ದೇಶಕ ಹನುಮಾನ್, ಬ್ಲಾಕ್ ಕಾಂಗ್ರೆಸ್ ನಗರಾಧ್ಯಕ್ಷ ಕೋಡ್ಲಹಳ್ಳಿ ಅಶ್ವತ್ಥನಾರಾಯಣ್, ಗ್ರಾಮಾಂತರ ಅಧ್ಯಕ್ಷ ಅರಕೆರೆ ಶಂಕರ್, ಎಂ.ಎನ್.ಮಂಜುನಾಥ್‌ಗೌಡ, ಮಹಿಳಾ ಕಾಂಗ್ರೆಸ್ ಅಧ್ಯಕ್ಷ ಜಯಮ್ಮ, ಸೀಬಿರಂಗಮ್ಮ, ಕವಿತಾ ಮತ್ತಿತರರು ಉಪಸ್ಥಿತರಿದ್ದರು.