ಆಮಿಷಗಳಿಗೆ ಒಳಗಾಗದೆ ನೈತಿಕ ಮತದಾನ ಮಾಡಿ

ಚನ್ನಮ್ಮನ ಕಿತ್ತೂರು,ಮಾ30: ಯಾವುದೇ ಆಸೆ ಆಮಿಷಗಳಿಗೆ ಒಳಗಾಗದೆ ನೈತಿಕ ಮತದಾನ ಮಾಡಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬಲಪಡಿಸಲು ಸಹಕರಿಸಬೇಕು ಎಂದು ತಾಪಂ ಸಹಾಯಕ ನಿರ್ದೇಶಕ ಸುರೇಶ ನಾಗೋಜಿ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಸ್ವೀಪ್ ಸಮಿತಿ, ತಾಲ್ಲೂಕು ಪಂಚಾಯಿತಿ ಹಾಗೂ ತಾಲೂಕು ಸ್ವೀಪ್ ಸಮಿತಿ ಸಹಯೋಗದಲ್ಲಿ ಮತದಾರರಿಗೆ ಮತದಾನದ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮದ ಅಂಗವಾಗಿ ಕಿತ್ತೂರು ತಾಲೂಕಿನ ವಿವಿಧ ಗ್ರಾಮಗಳಲ್ಲಿ ವಿಶೇಷ ಚೇತನರಿಂದ ತಾಪಂ ಆವರಣದಲ್ಲಿ ಬೈಕ್ ರ್ಯಾಲಿಗೆ ಚಾಲನೆ ನೀಡಿ ಮಾತನಾಡಿದ ಅವರು ಮತದಾನದ ಶೇಕಡಾವಾರು ಪ್ರಮಾಣ ಹೆಚ್ಚಾಗಬೇಕಿದೆ. ಮತದಾನ ಮಾಡುವುದು ಎಲ್ಲರ ಆದ್ಯ ಕರ್ತವ್ಯ ಆದ್ದರಿಂದ ನಾವೆಲ್ಲರೂ ತಪ್ಪದೇ ಮತ ಚಲಾಯಿಸಬೇಕೆಂದು ತಿಳಿಸಿದರು.
ಸಹಾಯಕ ನಿರ್ದೇಶಕರು ಲಿಂಗರಾಜ ಹಲಕರ್ಣಿಮಠ ಮಾತನಾಡಿ, ಮತದಾರರು ಪ್ರಾಮಾಣಿಕ, ನ್ಯಾಯಸಮ್ಮತ, ನಿಷ್ಪಕ್ಷಪಾತವಾಗಿ ಮತದಾನ ಮಾಡಬೇಕು. ಇದು ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಿದೆ. ಪ್ರತಿಯೊಬ್ಬರೂ ತಪ್ಪದೇ ಮತದಾನ ಮಾಡಬೇಕು ಅಂದಾಗ ಮಾತ್ರ ಸುಭದ್ರ ಪ್ರಜಾಪ್ರಭುತ್ವ ರಾಷ್ಟ್ರ ನಿರ್ಮಾಣವಾಗಲು ಸಾಧ್ಯ ಎಂದು ಹೇಳಿದರು.
ಈ ಸಂದರ್ಭದಲ್ಲಿ ಲಚ್ಚಪ್ಪ ಗೋಡಚಿ, ರಾಜೇಶ್ವರಿ ಪಟ್ಟಣಶೆಟ್ಟಿ, ಎಸ್.ಬಿ. ಜವಳಿ, ಯಲ್ಲಪ್ಪ ಹುಲಮನಿ, ಪ್ರಕಾಶ ಗುಂಡಗಾವಿ, ಅನ್ನಪೂರ್ಣ ವಕ್ಕುಂದ, ಲಕ್ಷ್ಮೀ ವಾಲಿಕಾರ, ಮಡಿವಾಳಿ ಚಿನ್ನನವರ, ಮಂಜುನಾಥ ಗುಂಡಿ, ನಾಗೇಂದ್ರ ಪೂಜಾರ, ಟಿಪ್ಪುಸುಲ್ತಾನ ಕಾದ್ರೊಳ್ಳಿ, ನಯನ ಚನ್ನಪ್ಪಗೌಡರ, ತಾಪಂ ಕಚೇರಿ ಸಿಬ್ಬಂದಿ, ತಾಲೂಕಿನ ಗ್ರಾ.ಪಂ. ನ ಗ್ರಾಮೀಣ ಪುನರ್ವಸತಿ ಕಾರ್ಯಕರ್ತರು ಮತ್ತು ವಿಶೇಷ ಚೇತನರು ಹಾಜರಿದ್ದರು.