ಆಭರಣ ಕದ್ದು ಹೂತಿಟ್ಟ ನಾಲ್ವರ ಸೆರೆ

ಬೆಂಗಳೂರು,ಅ.೧೦- ಶಾಂತಿನಗರದಲ್ಲಿರುವ ಜೈನ ಮಂದಿರಕ್ಕೆ ಟೈಲ್ಸ್ ಕೆಲಸ ಮಾಡಲು ಬಂದು ಹೊಂಚು ಹಾಕಿ ಮಂದಿರದಲ್ಲಿದ್ದ ಲಕ್ಷಾಂತರ ಮೌಲ್ಯದ ಬೆಳ್ಳಿ ಆಭರಣಗಳನ್ನು ದೋಚಿ ಪರಾರಿಯಾಗಿದ್ದ ರಾಜಸ್ತಾನ ಮೂಲದ ನಾಲ್ವರು ಖತರ್ನಾಕ್ ಕಳ್ಳರನ್ನು ಅಶೋಕನಗರ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ರಾಜಸ್ಥಾನ ಮೂಲದ ಜೋಶಿರಾಮ್, ರೇಷ್ಮರಾಮ್ ಸೇರಿ ನಾಲ್ವರು ಬಂಧಿತ ಆರೋಪಿಗಳಾಗಿದ್ದು ಬಂಧಿತರಿಂದ ೧೯,೭೫ ಲಕ್ಷ ಮೌಲ್ಯದ ೧೪ ಕೆ.ಜಿ ಬೆಳ್ಳಿಯ ಆಭರಣಗಳನ್ನು ಜಪ್ತಿ ಮಾಡಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಕೃತ್ಯದಲ್ಲಿ ಆರು ಮಂದಿ ಪಾಲ್ಗೊಂಡಿರುವುದು ತನಿಖೆಯಲ್ಲಿ ಪತ್ತೆಯಾಗಿದ್ದು, ತಲೆಮರೆಸಿಕೊಂಡಿರುವ ಇನ್ನಿಬ್ಬರು ಆರೋಪಿಗಳ ಪತ್ತೆ ಕಾರ್ಯವನ್ನು ಕೈಗೊಳ್ಳಲಾಗಿದೆ ಎಂದರು.
ಶಾಂತಿನಗರದಲ್ಲಿ ರುವ ಆದಿನಾಥ ಜೈನ ಮಂದಿರದಲ್ಲಿ ಕೆಲ ತಿಂಗಳ ಟೈಲ್ಸ್ ಕೆಲಸಕ್ಕೆ ಬಂದಿದ್ದ ಜೋಶಿರಾಮ್ ಹಾಗೂ ರೇಷ್ಮರಾಮ್ ಸೇರಿ ನಾಲ್ವರು ಶಾಂತಿನಗರದ ಜೈನ್ ಟೆಂಪಲ್ ಗೆ ಬಂದಿದ್ದರು.
ಟೈಲ್ಸ್ ಕೆಲಸ ಮುಗಿಸಿಕೊಂಡ ಆರೋಪಿಗಳು ಜೈನಮಂದಿರದಲ್ಲಿ ಅಳವಡಿಸಲಾಗಿದ್ದ ಬೆಳ್ಳಿ ಆಭರಣಗಳನ್ನು ಕಂಡು ಹಳೆಯ ಕಾಲದ ಅಭರಣವಾಗಿದ್ದು ಹೆಚ್ಚು ಬೆಲೆಬಾಳಲಿದೆ ಎಂದು ಭಾವಿಸಿಕೊಂಡಿದ್ದರು.
ಎರಡು ತಿಂಗಳ ಬಳಿಕ ವ್ಯವಸ್ಥಿತವಾಗಿ ಸಂಚು ರೂಪಿಸಿಕೊಂಡು ಇತ್ತೀಚೆಗೆ ತಮ್ಮ ಕೈಚಳಕ ತೋರಿದ್ದರು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಸಿಸಿಟಿವಿ ಸೇರಿದಂತೆ ಇನ್ನಿತ್ನರ ಸಾಕ್ಷ್ಯಧಾರಗಳೇ ಆಧಾರದ ಮೇರೆಗೆ ಟೈಲ್ಸ್ ಹಾಕಲು ಬಂದಿದ್ದ ಕಾರ್ಮಿಕರೇ ಕೃತ್ಯವೆಸಗಿರುವುದು ಖಚಿತವಾಗಿತ್ತು.
ಬಂಧನ ಭೀತಿಯಿಂದ ಆರೋಪಿಗಳು ಕಳ್ಳತನ ಮಾಡಿ ರಾಜಸ್ತಾನಕ್ಕೆ ಹೋಗಿದ್ದರು. ಅಲ್ಲದೆ ಬೆಳ್ಳಿ ಆಭರಣಗಳನ್ನ ಮಣ್ಣಿನಲ್ಲಿ ಹೂತ್ತಿಟ್ಟಿದ್ದರು.ಈ ಸಂಬಂಧಿಸಿದಂತೆ ಆದಿನಾಥ ಜೈನ ಮಂದಿರದ ಆಡಳಿತ ಮಂಡಳಿಯವರು ನೀಡಿದ ದೂರು ಆಧರಿಸಿ ಕಾರ್ಯಾಚರಣೆ ನಡೆಸಿದ ಆಶೋಕನಗರ ಪೊಲೀಸ್ ಇನ್ಸ್‌ಪೆಕ್ಟರ್ ರವಿ ಕೆ.ಬಿ ಮತ್ತವರ ಸಿಬ್ಬಂದಿ ರಾಜಸ್ತಾನಕ್ಕೆ ತೆರಳಿ ನಾಲ್ವರು ಆರೋಪಿಗಳನ್ನು ಸದೆಬಡಿಯುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ದಯಾನಂದ ತಿಳಿಸಿದರು.