ಆಫ್ರಿಕಾದಲ್ಲಿ ಮತ್ತೊಂದು ಚಿರತೆ ಸಾವು

ಶಿಯೋಪುರ್ (ಮಧ್ಯಪ್ರದೇಶ),ಜು.೧೨-ದಕ್ಷಿಣ ಆಫ್ರಿಕಾದಿಂದ ತಂದ ಚಿರತೆಗಳು ಭಾರತದ ವಾತಾವರಣಕ್ಕೆ ಹೊಂದಿಕೊಳ್ಳದೇ ಸಾವನ್ನಪ್ಪುತ್ತಿರುವ ಘಟನೆ ಹೆಚ್ಚಾಗುತ್ತಿವೆ. ಈಗಾಗಲೇ ೬ ಆಫ್ರಿಕಾ ಚಿರತೆಗಳು ಸಾವನ್ನಪ್ಪಿದ್ದು, ಈಗ ಮತ್ತೊಂದು ಗಂಡು ಚಿರತೆ ಸಾವನ್ನಪ್ಪಿದ್ದು, ಸಾವಿನ ಸಂಖ್ಯೆ ೭ಕ್ಕೆ ಏರಿಕೆಯಾಗಿದೆ.

ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿರುವ ಆಫ್ರಿಕಾ ಚಿರತೆಗಳಲ್ಲಿ ನಾಲ್ಕು ವರ್ಷದ ಗಂಡು ತೇಜಸ್ ಎಂಬ ಹೆಸರಿನ ಚಿರತೆ ಸಾವನ್ನಪ್ಪಿದೆ. ಫೆಬ್ರವರಿಯಲ್ಲಿ ದಕ್ಷಿಣ ಆಫ್ರಿಕಾದಿಂದ ತಂದು ಮಧ್ಯಪ್ರದೇಶದ ಶಿಯೋಪುರ್ ಜಿಲ್ಲೆಯ ಕುನೋ ರಾಷ್ಟ್ರೀಯ ಉದ್ಯಾನದಲ್ಲಿ ಬಿಡಲಾಗಿತ್ತು. ಇತರೆ ಚಿರತೆಗಳೊಂದಿಗಿನ ಕಾದಾಟದಲ್ಲಿ ಗಂಭೀರವಾಗಿ ಗಾಯಗೊಂಡು ಸಾವನ್ನಪ್ಪಿರಬಹುದು ಎಂದು ವನ್ಯಜೀವಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಜೆ.ಎಸ್. ಚೌಹಾಣ್ ಶಂಕೆ ವ್ಯಕ್ತಪಡಿಸಿದ್ದಾರೆ.

ಕುನೋ ಪಾರ್ಕ್‌ನ ನಿರ್ವಹಣೆಯ ಮೇಲ್ವಿಚಾರಕರು ತೇಜಸ್ ಚಿರತೆ ಗಾಯಗೊಂಡಿರುವುದನ್ನು ಗಮನಸಿ ಅದಕ್ಕೆ ಸೂಕ್ತ ಚಿಕಿತ್ಸೆ ನೀಡಲು ಮುಂದಾಗಿದ್ದಾರೆ. ಆದರೆ ಕಾದಾಟದಲ್ಲಿ ಚಿರತೆಗೆ ಗಂಭೀರ ಗಾಯಗಳಾಗಿದ್ದರಿಂದ ಚಿಕಿತ್ಸೆಗೆ ಸ್ಪಂದಿಸದೇ ಸಾವನ್ನಪ್ಪಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸದ್ಯಕ್ಕೆ ಚಿರತೆ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ವರದಿ ಬಂದ ಬಳಿಕ ನಿಖರ ಕಾರಣ ತಿಳಿಯಲಿದೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.

ಈ ಹಿಂದೆ ಜ್ವಾಲಾ ಎಂಬ ಹೆಸರಿನ ಚಿರತೆ ಈ ವರ್ಷದ ಮಾರ್ಚ್ನಲ್ಲಿ ನಾಲ್ಕು ಮರಿಗಳಿಗೆ ಜನ್ಮ ನೀಡಿತ್ತು. ಆದರೆ ಅವುಗಳಲ್ಲಿ ಮೂರು ಮೇ ತಿಂಗಳಲ್ಲಿ ಸಾವನ್ನಪ್ಪಿದ್ದವು. ಸಶಾ ಹೆಸರಿನ ಚಿರತೆ ಮಾರ್ಚ್ ೨೭ರಂದು ಕಿಡ್ನಿ ಸಂಬಂಧಿತ ಕಾಯಿಲೆಗೆ ಬಲಿಯಾದರೆ, ಉದಯ್ ಏಪ್ರಿಲ್ ೧೩ರಂದು ಕೊನೆಯುಸಿರೆಳೆದಿತ್ತು. ಮತ್ತೊಂದು ದಕ್ಷ ಹೆಸರಿನ ಚಿರತೆ ಮೇ ೯ರಂದು ಇತರೆ ಚಿರತೆಗಳ ಕಾದಾಟದಲ್ಲಿ ಗಾಯಗೊಂಡು ಅಸುನೀಗಿತ್ತು. ಇದರಿಂದಾಗಿ ಒಟ್ಟಾರೆ ಚಿರತೆಗಳ ಸಾವಿನ ಸಂಖ್ಯೆ ಏಳಕ್ಕೆ ಏರಿಕೆಯಾಗಿದೆ