
ನ್ಯೂಯಾರ್ಕ್, ಏ.೭- ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಸರ್ಕಾರ ಬಲವಂತವಾಗಿ ಅಧಿಕಾರ ವಶಪಡಿಸಿಕೊಂಡ ಬಳಿಕ ಸದ್ಯ ನಡೆಯುತ್ತಿರುವ ಅವ್ಯವಸ್ಥೆ ಎಲ್ಲರಿಗೂ ತಿಳಿದಿದೆ. ಸದ್ಯ ಈ ಅವ್ಯವಸ್ಥೆಗೆ ಡೊನಾಲ್ಡ್ ಟ್ರಂಪ್ ಅಧಿಕಾರಾವಧಿಯಲ್ಲಿ ತೆಗೆದುಕೊಂಡಿದ್ದ ನಿರ್ಣಯಗಳೇ ಕಾರಣ ಎಂದು ಅಮೆರಿಕಾ ಅಧ್ಯಕ್ಷ ಜೋ ಬೈಡೆನ್ ಆಡಳಿತ ಆರೋಪಿಸಿದೆ.
ಬೈಡೆನ್ ಆಡಳಿತ ಹೊರತಂದ ೧೨ ಪುಟಗಳ ಸಾರಾಂಶದಲ್ಲಿ ಹತ್ತು ಹಲವು ವಿಚಾರಗಳ ಬಗ್ಗೆ ಉಲ್ಲೇಖಿಸಲಾಗಿದೆ. ೨೦೨೦ರಲ್ಲಿ ತಾಲಿಬಾನ್ ಜೊತೆ ಅಮೆರಿಕಾ ಮಾಡಿಕೊಂಡ ಒಪ್ಪಂದವನ್ನು ಕೂಡ ತೀವ್ರವಾಗಿ ಖಂಡಿಸಲಾಗಿದೆ. ಅದೂ ಅಲ್ಲದೆ ನಾಗರಿಕರ ಸ್ಥಳಾಂತರವನ್ನು ಕೂಡ ಸರ್ಕಾರ ಮೊದಲು ಮಾಡಬೇಕಿತ್ತು ಎಂದು ತಿಳಿಸಿದೆ. ಕಳೆದ ಹಲವು ವರ್ಷಗಳಿಂದ ಅಫ್ಘಾನ್ ನೆಲದಲ್ಲಿ ಝಂಡಾ ಊರಿದ್ದ ಅಮೆರಿಕಾ ಪಡೆಗಳು ೨೦೨೧ರ ಆಗಸ್ಟ್‌ನಲ್ಲಿ ತನ್ನೆಲ್ಲಾ ಸೈನಿಕರನ್ನು ಹಿಂದಕ್ಕೆ ಪಡೆದುಕೊಂಡಿತ್ತು. ಸೈನಿಕರನ್ನು ಅಮೆರಿಕಾ ಹಿಂದಕ್ಕೆ ಪಡೆದುಕೊಂಡ ಬಳಿಕ ಅಫ್ಘಾನಿಸ್ತಾನದಲ್ಲಿ ಅಕ್ಷರಶಃ ತಾಲಿಬಾನ್ ಪಡೆಗಳು ಅಟ್ಟಹಾಸವನ್ನೇ ನಡೆಸಿದ್ದು, ಸಿಕ್ಕ ಸಿಕ್ಕ ಕಡೆಗಳಲ್ಲಿ ಕಚೇರಿಗಳ ಮೇಲೆ ದಾಳಿ ನಡೆಸಿ, ಆಸ್ತಿ-ಪಾಸ್ತಿಗಳನ್ನು ತಮ್ಮ ವಶಕ್ಕೆ ಪಡೆದುಕೊಂಡಿದ್ದರು. ಈ ನಡುವೆ ಅಮೆರಿಕಾ ಸೈನಿಕರಿಗೆ ಸಹಾಯ ನೀಡಿದ್ದ ೧.೨೦ ಲಕ್ಷಕ್ಕೂ ಅಧಿಕ ಅಫ್ಘಾನ್ ನಾಗರಿಕರ ನೆರವಿಗೆ ಕೂಡ ಬಾರದೇ ಇದ್ದದ್ದು ಬೈಡೆನ್ ಆಡಳಿತಕ್ಕೆ ಸಂಕಷ್ಟ ತಂದಿತ್ತು. ಆತುರದಲ್ಲಿ ನಡೆದ ನಿರ್ಧಾರದಿಂದ ೧.೨೦ ಲಕ್ಷ ಅಫ್ಘಾನ್ ನಾಗರಿಕರನ್ನು ಸ್ಥಳಾಂತರಿಸುವ ಕಾರ್ಯದ ವೇಳೆ ೧೩ ಅಮೆರಿಕನ್ ಯೋಧರು ಹಾಗೂ ೨೦೦ಕ್ಕೂ ಅಧಿಕ ಅಫ್ಗಾನರು ಕೊಲ್ಲಲ್ಪಟ್ಟರು. ಇನ್ನು ಅಮೆರಿಕಾದ ಅಫ್ಘಾನ್ ನೆಲದಿಂದ ತೆರಳುವ ರಾಜ್ಯ ಇಲಾಖೆ ಹಾಗೂ ಪೆಂಟಗಾನ್ (ಮಿಲಿಟರಿ) ತೆಗೆದುಕೊಂಡ ನಿರ್ಧಾರಕ್ಕೆ ಕಾರಣಗಳು ಹಾಗೂ ಕ್ರಮಗಳ ಪರಿಶೀಲನೆಯ ಬಗೆಗಿನ ವರದಿಯನ್ನು ಇದೀಗ ಖಾಸಗಿಯಾಗಿ ಯುಎಸ್ ಕಾಂಗ್ರೆಸ್‌ಗೆ ಕಳುಹಿಸಲಾಗಿದೆ. ಸದ್ಯ ಈ ವರದಿಯನ್ನು ಅತ್ಯಂತ ಗೌಪ್ಯವಿಡಲಾಗಿದ್ದರೂ ಅದರ ತೀರ್ಮಾನಗಳ ಸಾರಾಂಶವನ್ನು ಬೈಡೆನ್ ಅವರ ಕೆಲವೊಂದು ಸೂಚನೆಯಂತೆ ಶ್ವೇತಭವನದ ರಾಷ್ಟ್ರೀಯ ಭದ್ರತಾ ಮಂಡಳಿಯು ಅಧ್ಯಕ್ಷರು ಇದೀಗ ಸಾರ್ವಜನಿಕರಿಗೆ ಲಭ್ಯವಾಗುವಂತೆ ಮಾಡಲಾಗಿದೆ. ಅಫ್ಘಾನ್ ಸರ್ಕಾರವು ಪತನಗೊಂಡ ಬಳಿಕ ಕಾಬೂಲ್ ವಿಮಾನ ನಿಲ್ದಾಣದಲ್ಲಿ ಬೃಹತ್ ಜನಸಮೂಹವು ತಾಲಿಬಾನ್‌ನಿಂದ ಪಲಾಯನ ಮಾಡಲು ಪ್ರಯತ್ನಿಸುತ್ತಿದ್ದ ದೃಶ್ಯಗಳು ಜಾಗತಿಕವಾಗಿ ಎಲ್ಲರ ಗಮನ ಸೆಳೆದಿತ್ತು. ಅದೂ ಅಲ್ಲದೆ ಆಗಸ್ಟ್ ೨೬ರಂದು ಇಬ್ಬರು ಆತ್ಮಹತ್ಯೆ ಬಾಂಬರ್‌ಗಳು ವಿಮಾನ ನಿಲ್ದಾಣದಲ್ಲಿ ನಡೆಸಿದ ದಾಳಿಯಲ್ಲಿ ೧೭೦ ಆಫ್ಘನ್ನರು ಮತ್ತು ೧೩ ಅಮೆರಿಕಾ ಸೈನಿಕರು ಸಾವನ್ನಪ್ಪಿದರು.