ಆಫ್ಘಾನ್‌ನಿಂದ ಭಾರತೀಯರು ತಾಯ್ನಾಡಿಗೆ

ನವದೆಹಲಿ, ಆ.೨೨- ತಾಲಿಬಾನ್ ಹಿಂಸಾಚಾರದಿಂದ ನಲುಗಿರುವ ಆಫ್ಘಾನಿಸ್ತಾನದಿಂದ ೧೬೮ ಮಂದಿ ಭಾರತೀಯರನ್ನು ಎರಡು ವಿಮಾನಗಳಲ್ಲಿ ನವದೆಹಲಿಗೆ ಕರೆತರಲಾಯಿತು. ಇದರಲ್ಲಿ ಇಬ್ಬರು ನೇಪಾಳಿ ಪ್ರಜೆಗಳೂ ಇದ್ದಾರೆ.
ಕಾಬೂಲ್‌ನಿಂದ ಸ್ಥಳಾಂತರಿಸಲಾದ ಭಾರತೀಯರನ್ನು ಹೊತ್ತ ಎರಡು ವಿಮಾನಗಳು ಇಂದು ಬೆಳಿಗ್ಗೆ ತಜಕಿಸ್ತಾನದ ರಾಜಧಾನಿ ದುಶಾನ್ ಬೆ ಮತ್ತು ಕತಾರ್ ನ ದೋಹಾದಿಂದ ರಾಷ್ಟ್ರ ರಾಜಧಾನಿ ನವದೆಹಲಿಗೆ ಬಂದಿಳಿದವು.
ಭಾರತೀಯ ವಾಯುಪಡೆಯ ಮೂರನೇ ವಿಶೇಷ ವಿಮಾನದಲ್ಲಿ ೧೦೭ ಮಂದಿ ಭಾರತೀಯರು ಸೇರಿದಂತೆ ೧೬೮ ಪ್ರಯಾಣಿಕರನ್ನು ಹೊತ್ತೊಯ್ದು ಕಾಬೂಲ್‌ನಿಂದ ನವದೆಹಲಿಗೆ ತೆರಳಿದೆ ಎಂದು ವಾಯುಪಡೆ ಅಧಿಕಾರಿಗಳು ಮಾಹಿತಿ ಹಂಚಿಕೊಂಡಿದ್ದಾರೆ.
ಇನ್ನೂ, ೧೬೮ ಮಂದಿ ಪೈಕಿ ದೇಶಕ್ಕೆ ೧೦೭ ಮಂದಿ ಭಾರತೀಯರಿದ್ದಾರೆ. ಇಬ್ಬರು ನೇಪಾಳಿ ಪ್ರಜೆಗಳು ಸೇರಿದಂತೆ ಇನ್ನೂ ೮೭ ಮಂದಿಯನ್ನು ತಜಕಿಸ್ತಾನದ ದುಶಾಂಬೆ ಮೂಲಕ ಈಗಾಗಲೇ ನವದೆಹಲಿಗೆ ಕರೆಸಿಕೊಳ್ಳಲಾಗಿದೆ. ಅಲ್ಲದೆ, ಕಳೆದ ಕೆಲವು ದಿನಗಳಲ್ಲಿ ೧೩೫ ಮಂದಿ ಭಾರತೀಯರನ್ನು ಅಮೆರಿಕ ಮತ್ತು ನ್ಯಾಟೊ ಪಡೆಗಳ ವಿಮಾನದ ಮೂಲಕ ಆಫ್ಘಾನಿಸ್ತಾನದಿಂದ ತೆರವುಗೊಳಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಮತ್ತೊಂದೆಡೆ, ಕಾಬೂಲ್‌ನಿಂದ ದೋಹಾಕ್ಕೆ ಕರೆದೊಯ್ಯಲಾಗಿರುವ ಭಾರತೀಯರು ಆಫ್ಘಾನಿಸ್ತಾನದಲ್ಲಿ ಕಾರ್ಯನಿರ್ವಹಿಸುತ್ತಿದ್ದ ವಿವಿಧ ವಿದೇಶಿ ಕಂಪನಿಗಳಲ್ಲಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ. ಜತೆಗೆ, ಭಾರತಕ್ಕೆ ಬರುತ್ತಿರುವವರ ಪೈಕಿ ಪ್ರಮುಖ ಸಿಖ್ ನಾಯಕರೂ ಸೇರಿದ್ದಾರೆ.
ಭಾರತಕ್ಕೆ ಅನುಮತಿ: ತನ್ನ ಪ್ರಜೆಗಳನ್ನು ಕಾಬೂಲ್ ನಿಂದ ವಾಪಸ್ ಕರೆಸಿಕೊಳ್ಳುವ ನಿಟ್ಟಿನಲ್ಲಿ ದಿನಕ್ಕೆ ೨ ವಿಮಾನಗಳ ಕಾರ್ಯಾಚರಣೆಗೆ ಭಾರತಕ್ಕೆ ಅನುಮತಿ ದೊರೆತಿದೆ.
ಆ.೧೫ ರಂದು ಆಫ್ಘಾನಿಸ್ತಾನ ತಾಲಿಬಾನ್ ವಶವಾದರೂ ಕಾಬೂಲ್ ನಲ್ಲಿರುವ ಹಮೀದ್ ಕರ್ಜೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ತಾಂತ್ರಿಕವಾಗಿ ಅಮೆರಿಕ ಹಾಗೂ ನ್ಯಾಟೋ ಪಡೆಗಳ ನಿಯಂತ್ರಣದಲ್ಲಿಯೇ ಇದೆ.ಈ ಹಿನ್ನೆಲೆಯಲ್ಲಿ ಅಮೆರಿಕ ಹಾಗೂ ನ್ಯಾಟೋ ಪಡೆಗಳು ಭಾರತಕ್ಕೆ ಅನುಮತಿ ನೀಡಿವೆ ಎಂದು ಎಎನ್‌ಐ ಮೂಲಗಳು ತಿಳಿಸಿವೆ.
ಅಮೆರಿಕ ಹಾಗೂ ನ್ಯಾಟೋ ಪಡೆಗಳು ನೀಡಿರುವ ಮಾಹಿತಿ ಅನ್ವಯ, ೨೫ ವಿಮಾನಗಳು ಕಾರ್ಯಾಚರಣೆ ನಡೆಸುತ್ತಿದ್ದು, ತಮ್ಮ ನಾಗರಿಕರ ಬಿಡುಗಡೆಗೆ ಮುಂದಾಗಿವೆ.
ತಾಲಿಬಾನ್ ನ ನಿಯಂತ್ರಣದಲ್ಲಿರುವ ಕಾಬೂಲ್ ನಿಂದ ೩೦೦ ಕ್ಕೂ ಹೆಚ್ಚು ಭಾರತೀಯರನ್ನು ರಕ್ಷಿಸಬೇಕಿದ್ದು ತಜಕಿಸ್ತಾನ ಹಾಗೂ ಕತಾರ್ ಮೂಲಕ ಭಾರತೀಯ ವಿಮಾನಗಳು ಕಾರ್ಯಾಚರಣೆ ನಡೆಸುತ್ತಿವೆ.
ಮತ್ತೊಂದೆಡೆ ಏರ್ ಇಂಡಿಯಾದ ವಿಮಾನವೊಂದು ೯೦ ಪ್ರಯಾಣಿಕರೊಂದಿಗೆ ಶೀಘ್ರವೇ ಭಾರತಕ್ಕೆ ತಲುಪಲಿದೆ. ಇನ್ನೂ, ಭಾರತ ಈಗಾಗಲೇ ತನ್ನ ರಾಯಭಾರಿ ಕಚೇರಿ ಅಧಿಕಾರಿಗಳು, ಸಿಬ್ಬಂದಿಗಳು ಸೇರಿ ೧೮೦ ಪ್ರಯಾಣಿಕರನ್ನು ಸುರಕ್ಷಿತವಾಗಿ ವಾಪಸ್ ಕರೆಸಿಕೊಂಡಿದೆ.
ಒಟ್ಟಾರೆ, ೩೦೦ಕ್ಕೂ ಹೆಚ್ಚು ಭಾರತೀಯರನ್ನು ಕಾಬೂಲ್‌ನಿಂದ ಕರೆದುಕೊಂಡು ಬರಬೇಕಾಗಿದೆ ಎಂದು ವರದಿಗಳು ಹೇಳಿವೆ.

ತಾಯ್ನಾಡಿಗೆ ಮರಳಿದ ಭಾರತೀಯರು..!
ಏರ್ ಇಂಡಿಯಾ ೧೯೫೬ ವಿಮಾನದಲ್ಲಿ ೧೬೮ ಭಾರತೀಯರು ತಜಕಿಸ್ತಾನದ ಮೂಲಕ ನವದೆಹಲಿಗೆ ಮರಳುತ್ತಿದ್ದಾರೆ. ಈ ವಿಮಾನದಲ್ಲಿ ಇಬ್ಬರು ನೇಪಾಳಿ ಪ್ರಜೆಗಳು ಇದ್ದಾರೆ ಎಂದು ಮೂಲಗಳು ತಿಳಿಸಿವೆ.
ಈ ಕುರಿತು ಪ್ರತಿಕ್ರಿಯಿಸಿದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ, ಆಫ್ಘಾನಿಸ್ತಾನದಿಂದ ಭಾರತೀಯರನ್ನು ಕರೆತರಲಾಗುತ್ತಿದೆ. ಏರ್ ಇಂಡಿಯಾ ೧೯೫೬ ವಿಮಾನದ ಮೂಲಕ ೧೬೮ ಭಾರತೀಯರು ತಜಕಿಸ್ತಾನದಿಂದ ನವದೆಹಲಿಗೆ ಹೊರಟಿದ್ದಾರೆ. ಇದರಲ್ಲಿ ಇಬ್ಬರು ನೇಪಾಳಿಯರು ಇದ್ದಾರೆ.
ತಜಕಿಸ್ತಾನದ ದುಶಾಂಬೆಯಲ್ಲಿರುವ ಭಾರತೀಯ ದೂತವಾಸ ನಿರೀಕ್ಷಿತ ಸಹಾಯ ಮತ್ತು ಸಲಹೆ ನೀಡಿದರು. ಹೆಚ್ಚಿನ ಸ್ಥಳಾಂತರ ಕಾರ್ಯ ಮುಂದುವರಿದಿದೆ ಎಂದು ಹೇಳಿದ್ದಾರೆ.

ಕೋವಿಡ್ ಪರೀಕ್ಷೆ
ಆಗಮಿಸಿದ ಎಲ್ಲಾ ಪ್ರಯಾಣಿಕರು ವಿಮಾನ ನಿಲ್ದಾಣದಲ್ಲೇ ಆರ್‌ಟಿ-ಪಿಸಿಆರ್ ಪರೀಕ್ಷೆಗೆ ಒಳಗಾಗಬೇಕಾಗುತ್ತದೆ ಎಂದು ಸರ್ಕಾರದ ಉನ್ನತ ಮೂಲಗಳು ತಿಳಿಸಿವೆ.

ಮೊಳಗಿದ ಘೋಷಣೆ..!
ಕಾಬೂಲ್‌ನಿಂದ ಸುರಕ್ಷಿತವಾಗಿ ಭಾರತಕ್ಕೆ ಹಿಂತಿರುಗಿದ ಸಂತ್ರಸ್ಥರೆಲ್ಲರೂ, ವಿಮಾನದಲ್ಲಿಯೇ ವಂದೇ ಮಾತರಂ, ಭಾರತ್ ಮಾತಾ ಕಿ ಜೈ ಘೋಷಣೆಗಳನ್ನು ಮೊಳಗಿಸಿದ್ದಾರೆ.