ಆಫ್ಘಾನ್‌ಸ್ತಾನದಲ್ಲಿ ೮೦ಕ್ಕೂ ಹೆಚ್ಚಿನ ಶಾಲಾ ಬಾಲಕಿಯರಿಗೆ ವಿಷಾಹಾರ

ಕಾಬೂಲ್, ಜೂ.೫- ಕೆಲ ತಿಂಗಳ ಹಿಂದೆ ಬಾಲಕಿಯರ ಶಿಕ್ಷಣವನ್ನು ಮೊಟಕುಗೊಳಿಸುವ ಉದ್ದೇಶದಿಂದ ಇರಾನ್‌ನಲ್ಲಿ ದುಷ್ಕರ್ಮಿಗಳು ಮಕ್ಕಳ ಮೇಲೆ ವಿಷಾನೀಲ ಪ್ರಯೋಗಿಸಿದ್ದರು. ಸದ್ಯ ಇದೇ ರೀತಿಯ ಘಟನೆಗಳು ಇದೀಗ ಉತ್ತರ ಅಫ್ಘಾನಿಸ್ತಾನದಲ್ಲಿ ನಡೆದಿದೆ. ಎರಡು ಪ್ರತ್ಯೇಕ ಘಟನೆಗಳಲ್ಲಿ ಪ್ರಾಥಮಿಕ ಶಾಲೆಯ ಬಾಲಕಿಯರ ಮೇಲೆ ವಿಷ ಪ್ರಯೋಗಿಸಿದ ಪರಿಣಾಮ ೮೦ಕ್ಕೂ ವಿದ್ಯಾರ್ಥಿಗಳು ಗಂಭೀರ ರೀತಿಯಲ್ಲಿ ಅಸ್ವಸ್ಥಗೊಂಡ ಘಟನೆ ನಿನ್ನೆ ನಡೆದಿದೆ.
ಸಂಚರಕ್ ಜಿಲ್ಲೆಯಲ್ಲಿ ಸುಮಾರು ೮೦ ವಿದ್ಯಾರ್ಥಿನಿಯರು ವಿಷ ಸೇವಿಸಿದ್ದಾರೆ ಎಂದು ಪ್ರಾಂತೀಯ ಶಿಕ್ಷಣ ಇಲಾಖೆಯ ಮುಖ್ಯಸ್ಥ ಮುಹಮ್ಮದ್ ರಹಮಾನಿ ಹೇಳಿದ್ದಾರೆ. ನಸ್ವಾನ್-ಎ-ಕಬೋದ್ ಆಬ್ ಶಾಲೆಯಲ್ಲಿ ೬೦ ವಿದ್ಯಾರ್ಥಿಗಳು ಮತ್ತು ನಸ್ವಾನ್-ಎ-ಫೈಜಾಬಾದ್ ಶಾಲೆಯಲ್ಲಿ ೧೭ ವಿದ್ಯಾರ್ಥಿಗಳು ವಿಷ ಸೇವಿಸಿದ್ದಾರೆ ಎಂದು ಅವರು ಹೇಳಿದರು. ಇಲಾಖಾ ತನಿಖೆಯು ಮುಂದುವರಿದಿದ್ದು, ದಾಳಿಗಳನ್ನು ನಡೆಸಲು ಯಾರೋ ಮೂರನೇ ವ್ಯಕ್ತಿಗೆ ದ್ವೇಷದಿಂದ ಹಣ ನೀಡಿದ್ದಾರೆ ಎಂದು ಪ್ರಾಥಮಿಕ ವಿಚಾರಣೆಯಿಂದ ತಿಳಿದು ಬಂದಿದೆ ಎಂದು ರಹಮಾನಿ ಹೇಳಿದ್ದಾರೆ. ೨೦೨೧ರಲ್ಲಿ ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಆಡಳಿತ ಬಂದ ಬಳಿಕ ಮಹಿಳಾ ಹಾಗೂ ಬಾಲಕಿಯರ ಶಿಕ್ಷಣಕ್ಕೆ ಬ್ರೇಕ್ ಹಾಕಲಾಗಿದೆ. ಅದೂ ಅಲ್ಲದೆ ಮಹಿಳೆಯರು ಉದ್ಯೋಗಕ್ಕೆ ಹೋಗುವುದನ್ನು ಕೂಡ ನಿಲ್ಲಿಸಲಾಗಿದೆ. ಸದ್ಯ ಉತ್ತರ ಅಫ್ಘಾನಿಸ್ತಾನದ ಸರ್ ಎ ಪುಲ್ ಪ್ರಾಂತ್ಯದ ಎರಡು ಕಡೆ ಬಾಲಕಿಯರ ಶಿಕ್ಷಣಕ್ಕೆ ಬ್ರೇಕ್ ಹಾಕುವ ಉದ್ದೇಶದಿಂದ ಮಕ್ಕಳಿಗೆ ವಿಷಾಹಾರ ಮಾಡಲಾಗಿರುವುದು ಸಹಜವಾಗಿಯೇ ಆತಂಕ ಮೂಡಿಸಿದೆ. ತಾಲಿಬಾನ್ ಅಧಿಕಾರಕ್ಕೆ ಬಂದ ಬಳಿಕ ಮಹಿಳಾ-ಬಾಲಕಿಯರ ಶಿಕ್ಷಣಕ್ಕೆ ಬ್ರೇಕ್ ನೀಡಿದ್ದರೂ ವಿಷಾಹಾರ ಮಾಡಿದ ಘಟನೆ ಇದೇ ಮೊದಲ ಬಾರಿಗೆ ಎನ್ನಲಾಗಿದೆ. ಆರನೇ ತರಗತಿಯ ಬಳಿಕ ಬಾಲಕಿಯರು ಶಿಕ್ಷಣ ಪಡೆಯುವಂತಿಲ್ಲ ಎಂದು ಈಗಾಗಲೇ ತಾಲಿಬಾನ್ ಆದೇಶ ಹೊರಡಿಸಿದೆ. ಆದರೆ ವಿಷಾಹಾರ ನಡೆಸಿದ ವ್ಯಕ್ತಿಯು ಕೇವಲ ವೈಯಕ್ತಿಕ ದ್ವೇಷದಿಂದ ಕೃತ್ಯ ಎಸಗಿದ್ದಾನೆ ಎಂದು ಶಿಕ್ಷಣಾಧಿಕಾರಿ ಪ್ರತಿಕ್ರಿಯೆ ನೀಡಿದರೂ, ಹೆಚ್ಚಿನ ಮಾಹಿತಿ ನೀಡಿಲ್ಲ.