ಆಫ್ಘಾನ್‌ನಲ್ಲಿ ಮತ್ತೆ ಭೂಕಂಪನ ಅಪಾರ ಹಾನಿ, ಸಾವು- ನೋವು ಹೆಚ್ಚಳ

ಕಾಬೂಲ್, ಜೂ.೨೩- ನಿನ್ನೆ ಆಫ್ಘಾನಿಸ್ತಾನದಲ್ಲಿ ಸಂಭವಿಸಿದ ಪ್ರಬಲ ೬.೧ ತೀವ್ರತೆಯ ಭೂಕಂಪಕ್ಕೆ ಮೃತರ ಸಂಖ್ಯೆ ಈಗಾಗಲೇ ಸಾವಿರ ಮೀರಿದ್ದು, ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಇದರ ನಡುವೆ ಗುರುವಾರ ಮುಂಜಾನೆ ಮತ್ತೊಂದು ಭಾರೀ ಭೂಕಂಪ ಸಂಭವಿಸಿದ್ದು, ಜನತೆಗೆ ಮತ್ತೆ ಸಂಕಷ್ಟ ತಂದಿದೆ. ಇನ್ನು ಅತ್ತ ನೆರವು ನೀಡುವಂತೆ ವಿಶ್ವಸಮುದಾಯಕ್ಕೆ ತಾಲಿಬಾನ್ ಮನವಿ ಮಾಡಿದೆ.
ನಿನ್ನೆ ಬೆಳಗ್ಗೆ ಪ್ರಬಲ ೬.೧ ತೀವ್ರತೆಯ ಭೂಕಂಪದಿಂದಾಗಿ ಈಗಾಗಲೇ ಮೃತರ ಸಂಖ್ಯೆ ಸಾವಿರ ಮೀರಿದ್ದು, ಈ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಅದೂ ಅಲ್ಲದೆ ೧,೫೦೦ಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಗಾಯಾಳುಗಳ ಇದ್ದು, ಆಸ್ಪತ್ರೆಗಳ ಮೇಲೆ ಒತ್ತಡ ಬಿದ್ದಿದೆ. ಇದೆಲ್ಲೆದರ ನಡುವೆ ಇದೀಗ ಇಂದು ಮುಂಜಾನೆ ಮತ್ತೆ ಆಫ್ಘಾನ್‌ನ ಫೈಝಾಬಾದ್‌ನ ದಕ್ಷಿಣ ನೈಋತ್ಯ ಭಾಗದಲ್ಲಿ ೪.೩ ತೀವ್ರತೆಯ ಭೂಕಂಪನವಾಗಿದೆ. ಇನ್ನು ನಿನ್ನೆಯ ಭೂಕಂಪದಿಂದಾಗಿ ಆಫ್ಘಾನ್ ಜನತೆ ಅಕ್ಷರಶಃ ತತ್ತರಿಸಿದ್ದು, ಪರಿಹಾರಕ್ಕಾಗಿ ವಿಶ್ವ ಸಮುದಾಯದ ನಿರೀಕ್ಷೆಯಲ್ಲಿದ್ದಾರೆ. ಆಫ್ಘಾನಿಸ್ತಾನದ ಪರ್ವತ ಪ್ರದೇಶಗಳು ಹಾಗೂ ಹಿಂದೂಕುಶ್ ಪರ್ವತಗಳ ಉದ್ದಕ್ಕೂ ದಕ್ಷಿಣ ಏಷ್ಯಾದ ದೊಡ್ಡ ಪ್ರದೇಶವು ದೀರ್ಘಕಾಲದಿಂದ ವಿನಾಶಕಾರಿ ಭೂಕಂಪಕ್ಕೆ ಒಳಗಾಗಿದೆ. ಭೂಕಂಪಕ್ಕೆ ಸಂಬಂಧಿಸಿದಂತೆ ಆಫ್ಘಾನ್ ದೀರ್ಘಾವಧಿಯ ಇತಿಹಾಸವನ್ನು ಹೊಂದಿದೆ. ಆದರೆ ಈಗ ಸಂಭವಿಸಿರುವ ಭೂಕಂಪ ಆಫ್ಘಾನ್‌ನಲ್ಲಿ ೨ ದಶಕದಲ್ಲಿ ಸಂಭವಿಸಿದ ಅತ್ಯಂತ ಭೀಕರ ಭೂಕಂಪವಾಗಿದೆ. ನಿನ್ನೆಯ ಭೂಕಂಪದಲ್ಲಿ ಪೂರ್ವ ಆಫ್ಘಾನ್‌ನ ಪಕ್ಟಿಕಾ ಪ್ರಾಂತ್ಯದಲ್ಲಿ ಹೆಚ್ಚು ಹಾನಿ ಸಂಭವಿಸಿದ್ದು, ೨೫೫ಕ್ಕೂ ಹೆಚ್ಚು ಜನ ಮೃತಪಟ್ಟಿದ್ದಾರೆ. ಇದೆಲ್ಲದರ ನಡುವೆ ಇಂದು ಮುಂಜಾನೆ ಮತ್ತೊಂದು ಬಾರಿ ಭೂಮಿ ಕಂಪಿಸಿದ್ದು, ನಾಗರಿಕರು ಮತ್ತೆ ಬೆಚ್ಚಿಬೀಳುವಂತೆ ಮಾಡಿದೆ.
ಆಫ್ಘಾನ್ ಭೂಕಂಪದ ಕಿರುಇತಿಹಾಸ:
೧೯೯೧: ಹಿಂದುಕುಷ್‌ನಲ್ಲಿ ಸಂಭವಿಸಿದ ಭೂಕಂಪನದಿಂದ ಆಫ್ಘಾನ್, ಪಾಕಿಸ್ತಾನ ಮತ್ತು ಸೋವಿಯತ್ ಯೂನಿಯನ್‌ನಾದ್ಯಂತ ೮೪೮ ಮಂದಿ ಮೃತ್ಯು.
೧೯೯೭: ಆಫ್ಘಾನ್ ಮತ್ತು ಇರಾನ್ ನಡುವಿನ ಗಡಿಭಾಗದ ಖಯೇನ್‌ನಲ್ಲಿ ಸಂಭವಿಸಿದ ೭.೨ ತೀವ್ರತೆಯ ಭೂಕಂಪದಲ್ಲಿ ಉಭಯ ದೇಶಗಳ ೧,೫೦೦ಕ್ಕೂ ಅಧಿಕ ಮಂದಿ ಮೃತ್ಯು.
೧೯೯೮: ಈಶಾನ್ಯದ ತಖಾರ್ ಪ್ರಾಂತದಲ್ಲಿ ಸಂಭವಿಸಿದ ಭೂಕಂಪದಲ್ಲಿ ಕನಿಷ್ಟ ೨,೩೦೦ ಮೃತ್ಯು. ಇದೇ ವಲಯದಲ್ಲಿ ಸಂಭವಿಸಿದ ಮತ್ತೊಂದು ಭೂಕಂಪದಲ್ಲಿ ೪,೭೦೦ ಮೃತ್ಯು.
೨೦೦೨: ಹಿಂದುಕುಷ್‌ನಲ್ಲಿ ಮಾರ್ಚ್‌ನಲ್ಲಿ ಅವಳಿ ಭೂಕಂಪ. ಒಟ್ಟು ೧,೧೦೦ ಮೃತ್ಯು.
೨೦೧೫: ಹಿಂದುಕುಷ್ ವಲಯದಲ್ಲಿ ೭.೫ ತೀವ್ರತೆಯ ಭೂಕಂಪ. ಭಾರತ, ಆಫ್ಘಾನ್ ಮತ್ತು ಪಾಕಿಸ್ತಾನದಲ್ಲಿ ಒಟ್ಟು ೩೯೯ ಮೃತ್ಯು.
೨೦೨೨: ಪಶ್ಚಿಮದ ಪ್ರಾಂತ ಬದ್ಗೀಸ್‌ನಲ್ಲಿ ಭೂಕಂಪ. ಕನಿಷ್ಟ ೨೬ ಮಂದಿ ಮೃತಪಟ್ಟರು.
೨೦೨೨: ಜೂನ್ ೨೨ರಂದು ನಡೆದ ಭೂಕಂಪದಲ್ಲಿ ಸಾವಿರಕ್ಕೂ ಅಧಿಕ ಮೃತ್ಯು.