ಆಪ್ ಶಾಸಕ ಅಮಾನತುಲ್ಲಾ ಬಂಧನ

ನವದೆಹಲಿ, ಸೆ.೧೭-ಆಮ್ ಆದ್ಮಿ ಪಕ್ಷದ ದೆಹಲಿ ಶಾಸಕ ಅಮಾನತುಲ್ಲಾ ಖಾನ್ ಅವರನ್ನು ಭ್ರಷ್ಟಾಚಾರ ನಿಗ್ರಹ ದಳ ಬಂಧಿಸಿದೆ.

ನಿನ್ನೆ ದೆಹಲಿ ಭ್ರಷ್ಟಾಚಾರ ನಿಗ್ರಹ ದಳ ಖಾನ್ ಅವರ ಮನೆ ಮತ್ತು ಇತರ ಸ್ಥಳಗಳ ಮೇಲೆ ದಾಳಿ ನಡೆಸಿತ್ತು. ಈ ವೇಳೆ ಖಾನ್ ಸಹಚರರಿಂದ ಪರವಾನಿಗೆ ಇಲ್ಲದ ಆಯುಧ ಹಾಗೂ ೧೨ ಲಕ್ಷ ರೂ. ವಶಪಡಿಸಲಾಗಿದ್ದು, ಇದರ ಆಧಾರದ ಮೇಲೆ ಅವರನ್ನು ಬಂಧಿಸಲಾಗಿದೆ ಎಂದು ವರದಿಯಾಗಿದೆ.

ದೆಹಲಿ ವಕ್ಫ್ ಬೋರ್ಡ್ ನೇಮಕಾತಿಯಲ್ಲಿ ನಡೆದಿರುವ ಅಕ್ರಮಗಳ ಬಗ್ಗೆ ಎಸಿಬಿ ತನಿಖೆ ನಡೆಸುತ್ತಿದ್ದು, ಎರಡು ವರ್ಷಗಳ ಹಿಂದಿನ ಭ್ರಷ್ಟಾಚಾರ ಪ್ರಕರಣದಲ್ಲಿ ವಿಚಾರಣೆಗಾಗಿ ಎಸಿಬಿ ಗುರುವಾರ ಖಾನ್‌ಗೆ ನೋಟಿಸ್ ಜಾರಿ ಮಾಡಿತ್ತು.

ಭ್ರಷ್ಟಾಚಾರ ತಡೆ ಕಾಯ್ದೆಯಡಿ ೨೦೨೦ ರಲ್ಲಿ ದಾಖಲಾದ ಪ್ರಕರಣದಲ್ಲಿ ಓಖ್ಲಾ ಕ್ಷೇತ್ರದ ಶಾಸಕ ಖಾನ್ ಅವರನ್ನು ಶುಕ್ರವಾರ ಮಧ್ಯಾಹ್ನ ೧೨ ಗಂಟೆಗೆ ವಿಚಾರಣೆಗೆ ಕರೆಯಲಾಗಿತ್ತು.

ದೆಹಲಿ ವಕ್ಫ್ ಬೋರ್ಡ್ ಅಧ್ಯಕ್ಷ ಖಾನ್ ಅವರು ನೋಟಿಸ್ ಕುರಿತು ಟ್ವೀಟ್ ಮಾಡಿದ್ದು, ಹೊಸ ವಕ್ಫ್ ಬೋರ್ಡ್ ಕಚೇರಿಯನ್ನು ಸ್ಥಾಪಿಸಿರುವುದರಿಂದ ತನಗೆ ಸಮನ್ಸ್ ನೀಡಲಾಗಿದೆ ಎಂದು ಹೇಳಿದ್ದರು.