ಆಪ್ ಪಕ್ಷದಿಂದ ಕನ್ನಡ ರಾಜ್ಯೋತ್ಸವ

ಧಾರವಾಡ, ನ 2- ಆಮ್ ಆದ್ಮಿ ಪಕ್ಷ ಧಾರವಾಡ ಘಟಕದ ವತಿಯಿಂದ ಕನ್ನಡ ರಾಜ್ಯೋತ್ಸವವನ್ನು ಇಲ್ಲಿನ ಗಾಂಧಿನಗರದಲ್ಲಿನ ಪಕ್ಷದ ಕಚೇರಿಯಲ್ಲಿ ಭುವನೇಶ್ವರಿ ದೇವಿ ಭಾವಚಿತ್ರಕ್ಕೆ ಪುಷ್ಪಾರ್ಪಣೆ ಸಲ್ಲಿಸುವ ಮೂಲಕ ಆಚರಿಸಲಾಯಿತು.
ನಂತರ ಪಕ್ಷದ ಜಿಲ್ಲಾಧ್ಯಕ್ಷ ಸಂತೋಷ ನರಗುಂದ ಮಾತನಾಡಿ, `ಕನ್ನಡ ಭಾಷೆ ತುಂಬಾ ವಿಸ್ತಾರತೆ ಪಡೆದುಕೊಂಡಿದೆ. ಪ್ರತಿಯೊಬ್ಬರೂ ಕನ್ನಡ ಉಳಿಸಿ ಬೆಳೆಸಲು ಮುಂದಾಗಬೇಕು. ಕನ್ನಡ ಭಾಷೆ ಪ್ರಾಚೀನತೆ ಪಡೆದುಕೊಳ್ಳುವ ಜತೆಗೆ ಶಾಸ್ತ್ರೀಯ ಸ್ಥಾನಮಾನ ಗಳಿಸಿಕೊಂಡ ಹೆಗ್ಗಳಿಕೆ ಪಾತ್ರವಾಗಿದೆ. ಇಲ್ಲಿನ ಸಾಹಿತ್ಯ ಕೃಷಿ ಪ್ರಪಂಚದ ಇತರೆ ಭಾಷೆಗಳಿಗಿಂತಲೂ ವಿಭಿನ್ನ ರೀತಿಯಲ್ಲಿದೆ. ಆದ್ದರಿಂದ ಪ್ರತಿಯೊಬ್ಬ ಕನ್ನಡಿಗನೂ ಸಹ ಕನ್ನಡ ನಾಡು, ನುಡಿಯ ಉಳಿವಿಗಾಗಿ ಶ್ರಮಿಸಬೇಕು ಎಂದರು.
ಕದಂಬರು, ಚಾಲುಕ್ಯರು, ರಾಷ್ಟ್ರಕೂಟರು ಮತ್ತು ವಿಜಯನಗರ ಸಾಮ್ರಾಜ್ಯಗಳು ಉತ್ತರ ಕರ್ನಾಟಕದ ಹೆಮ್ಮೆಯ ಪ್ರತೀಕವಾಗಿವೆ. ಈಗ ಆ ಸಂಪ್ರದಾಯವನ್ನು ಮುಂದುವರೆಸಲು ಮತ್ತು ವಿಶ್ವದರ್ಜೆಯ ಉತ್ತರ ಕರ್ನಾಟಕ ಮತ್ತು ಹು-ಧಾ ನಿರ್ಮಿಸಲು ಸಮಯ ಬಂದಿದೆ. ಕರ್ನಾಟಕವನ್ನು ಈಗಾಗಲೇ ಹಲವಾರು ಗಣ್ಯರು ವಿಶ್ವದರ್ಜೆಯ ಕರ್ನಾಟಕ ಮಾಡಲು ಹಲವಾರು ಜನರು ಶ್ರಮಿಸಿದ್ದಾರೆ. ಅದರಂತೆ ನಾವು ಕೂಡಾ ಹುಬ್ಬಳ್ಳಿ ಧಾರವಾಡ ನಗರವನ್ನು ವಿಶ್ವ ದರ್ಜೆಯ ನಗರವನ್ನಾಗಿ ಮಾಡಲು ಮುಂದಾಗಬೇಕಾಗಿದೆ. ಇದಕ್ಕೆ ನಮಗೆ ವಿಶ್ವೇಶ್ವರಯ್ಯ, ಜಕನಾಚಾರಿ, ಕೆಂಪೇಗೌಡರು ಸ್ಪೂರ್ತಿದಾಯಕರಾಗಿದ್ದಾರೆ ಎಂದರು. ರಾಜ್ಯೋತ್ಸವ ಆಚರಣೆ ನಂತರ ಪಕ್ಷಕ್ಕೆ ಹಲವಾರು ಜನರನ್ನು ಸೇರ್ಪಡೆ ಮಾಡಿಕೊಳ್ಳಲಾಯಿತು.
ಈ ಸಂದರ್ಭದಲ್ಲಿ ಪಕ್ಷದ ಕಾರ್ಯಕಾರಿ ಸಮಿತಿಯ ಸದಸ್ಯರಾದ ವಿಕಾಸ ಸೊಪ್ಪಿನ, ಅನಂತಕುಮಾರ ಭಾರತೀಯ, ಶಶಿಕುಮಾರ್ ಸುಳ್ಳದ, ಶಿವಕುಮಾರ ಅಗಡಿ, ವಿವಿಧ ಘಟಕದ ಮುಖಂಡರಾದ ಡೇನಿಯಲ್ ಐಕೋಸ್ ಸೇರಿದಂತೆ ಮುಂತಾದವರು ಇದ್ದರು.