ಆಪ್ ನಾಯಕರನ್ನು ಕೋರ್ಟಿಗೆ ಎಳೆಯುತ್ತೇನೆ

ನವದೆಹಲಿ,ಮೇ.೨೧- ತಮ್ಮ ವಿರುದ್ಧ ಭ್ರಷ್ಟಾಚಾರ ಪ್ರಕರಣದಲ್ಲಿ ಎಫ್‌ಐಆರ್ ದಾಖಲಾಗಿದೆ ಎಂದು ಆರೋಪಿಸುವ ಮೂಲಕ ಸುಳ್ಳು ಆರೋಪ ಮಾಡುತ್ತಿರುವ ಎಎಪಿ ನಾಯಕರನ್ನು ನ್ಯಾಯಾಲಯದ ಕಟಕಟೆಗೆ ಎಳೆಯುವುದಾಗಿ ಎಎಪಿ ರಾಜ್ಯಸಭಾ ಸದಸ್ಯೆ ಸ್ವಾತಿ ಮಲಿವಾಲ್ ಗುಡುಗಿದ್ದಾರೆ.
ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಆಪ್ತ ಬಿಭವ್ ಕುಮಾರ್ ವಿರುದ್ಧ ಹಲ್ಲೆ ಆರೋಪ ಮಾಡಿರುವ ಪಕ್ಷದ ರಾಜ್ಯಸಭಾ ಸದಸ್ಯೆ ಸ್ವಾತಿ ಮಾಲಿವಾಲ್ ವಿರುದ್ದ ಪಕ್ಷದ ನಾಯಕರು ಭ್ರಷ್ಟಾಚಾರದ ಪ್ರಕರಣ ದಾಖಲಾಗಿದೆ. ಇದರಿಂದ ಬಚಾವ್ ಆಗಲು ಬಿಜೆಪಿ ಜೊತೆ ಕೈಜೋಡಿಸಿದ್ದಾರೆ ಎನ್ನುವ ಎಎಪಿ ನಾಯಕರ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು ಬಂಧನಕ್ಕೊಳಗಾಗಿರುವ ಬಿಭವ್ ಕುಮಾರ್ ವಿರುದ್ಧ ದೂರು ಕೊಟ್ಟ ಬಳಿಕ ಎಎಪಿ ಪಕ್ಷದಲ್ಲಿ ನನ್ನ ಸ್ಟೇಟಸ್ ‘ಲೇಡಿ ಸಿಂಗಂ’ನಿಂದ ‘ಬಿಜೆಪಿ ಏಜೆಂಟ್’ ಎಂದು ಅವರು ದೂರಿದ್ದಾರೆ.
‘ಬಿಭವ್ ಕುಮಾರ್ ವಿರುದ್ಧ ದೂರು ನೀಡುವುದಕ್ಕೂ ಮುನ್ನ ನಾನು ಅವರ ಪ್ರಕಾರ ‘ಲೇಡಿ ಸಿಂಗಂ’ ಆಗಿದ್ದೆ. ನಾನು ‘ಬಿಜೆಪಿ ಏಜೆಂಟ್’ . ನೀವು ಹರಡುವ ಪ್ರತಿಯೊಂದು ಸುಳ್ಳಿಗೂ ನಾನು ನಿಮ್ಮನ್ನು ನ್ಯಾಯಾಲಯಕ್ಕೆ ಎಳೆಯುತ್ತೇನೆ’ ಎಂದು ವಾಗ್ದಾಳಿ ನಡೆಸಿದ್ದಾರೆ.
‘ನನ್ನ ವಿರುದ್ಧ ಭ್ರಷ್ಟಾಚಾರ ಪ್ರಕರಣದಲ್ಲಿ ಎಫ್‌ಐಆರ್ ದಾಖಲಾಗಿದೆ ಎಂದು ದೆಹಲಿ ಸಚಿವರು ಸುಳ್ಳು ಸುದ್ಧಿ ಹಬ್ಬಿಸುತ್ತಿದ್ದಾರೆ. ಭ್ರಷ್ಟಾಚಾರ ಆರೋಪ ಇರುವುದರಿಂದ ಬಿಜೆಪಿ ಸೂಚನೆ ಮೇರೆಗೆ ಇವೆಲ್ಲವನ್ನೂ ಮಾಡುತ್ತಿದ್ದೇನೆ ಎಂದು ಆರೋಪಿಸುತ್ತಿದ್ದಾರೆ. ಇದರಲ್ಲಿ ಯಾವುದೇ ಹುರುಳಿಲ್ಲ ಎಂದು ತಿರುಗೇಟು ನೀಡಿದರು.
ಎಫ್‌ಐಆರ್ ವಿಷಯ ೮ ವರ್ಷಗಳ ಹಳೆಯದು. ೨೦೧೬ರಲ್ಲಿ ದಾಖಲಾಗಿತ್ತು, ಮುಖ್ಯಮಂತ್ರಿ ಮತ್ತು ಲೆಫ್ಟಿನೆಂಟ್ ಗವರ್ನರ್ ಇಬ್ಬರೂ ನನ್ನನ್ನು ಎರಡು ಬಾರಿ ಮಹಿಳಾ ಆಯೋಗದ ಅಧ್ಯಕ್ಷರನ್ನಾಗಿ ನೇಮಕ ಮಾಡಿದ್ದರು. ಈ ಪ್ರಕರಣ ಸಂಪೂರ್ಣ ನಕಲಿಯಾಗಿದ್ದು, ಯಾವುದೇ ಹಣದ ವಹಿವಾಟು ನಡೆದಿಲ್ಲ ಎಂದಿರುವ ಹೈಕೋರ್ಟ್, ಪ್ರಕರಣಕ್ಕೆ ಒಂದೂವರೆ ವರ್ಷ ತಡೆ ನೀಡಿದೆ ಎಂದು ಹೇಳಿದ್ದಾರೆ.