
ಕಲಬುರಗಿ:ಸೆ.10: ಮನುಷ್ಯನಿಗೆ ವಿವಿಧ ಕಾರಣಗಳಿಂದ ಆತ್ಮಹತ್ಯೆ ಅಂತಹ ಆಲೋಚನೆ ಬರುತ್ತದೆ. ಅಂತಹ ಸಂದರ್ಭದಲ್ಲಿ ಕೇವಲ ಮನೋಶಾಸ್ತ್ರಜ್ಞರಷ್ಟೇ ಕಾರ್ಯ ಮಾಡಿದರೆ ಸಾಲದು. ಜೊತೆಗೆ ಆತನ ಕುಟುಂಬ, ಮಿತ್ರರು, ಬಂಧುಗಳು, ಸಮಾಜ ಆಪ್ತವಾಗಿ ಸಮಾಲೋಚನೆ ಮಾಡಿ, ಮಾನಸಿಕ ಸ್ಥೈರ್ಯ ತುಂಬಿದರೆ ಆ ವ್ಯಕ್ತಿ ಆತ್ಮಹತ್ಯೆ ಅಂತಹ ಆಲೋಚನೆಯಿಂದ ದೂರಸರಿಯುವ ಸಾಧ್ಯತೆ ಹೆಚ್ಚಾಗಿದೆ ಎಂದು ಉಪನ್ಯಾಸಕ, ಚಿಂತಕ ಎಚ್.ಬಿ.ಪಾಟೀಲ ಅಭಿಪ್ರಾಯಪಟ್ಟರು.
ನಗರದ ಖಾದ್ರಿ ಚೌಕ್‍ನಲ್ಲಿರುವ ‘ಸಕ್ಸಸ್ ಕಂಪ್ಯೂಟರ ತರಬೇತಿ ಕೇಂದ್ರ’ದಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಭಾನುವಾರ ಜರುಗಿದ ‘ವಿಶ್ವ ಆತ್ಮಹತ್ಯೆ ತಡೆ ದಿನಾಚರಣೆ’ಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಇಂದಿನ ಒತ್ತಡದ ಬದುಕಿನಲ್ಲಿ ಬಿಡುವಿಲ್ಲದ ನಿರಂತರ ಕಾರ್ಯ, ಕುಟುಂಬ ವ್ಯವಸ್ಥೆಯಲ್ಲಿನ ಬಿರುಕು, ಮಾನಸಿಕ ಮತ್ತು ದೈಹಿಕ ಒತ್ತಡ, ಖಿನ್ನತೆ, ಪಾಲಕರ ಒತ್ತಡ, ಸಾಲ, ನಿರುದ್ಯೋಗ, ಬಡತನ, ಮದ್ಯಪಾನ, ಧೂಮಪಾನ, ಅನಾರೋಗ್ಯ, ಮಾದಕ ವ್ಯಸನ, ಪ್ರೇಮ ವೈಫಲ್ಯ, ಪರಸ್ಪರ ಹೊಂದಾಣಿಕೆಯ ಕೊರತೆಯಂತಹ ಮುಂತಾದ ಕಾರಣಗಳಿಂದ ಆತ್ಮಹತ್ಯೆಗಳ ಪ್ರಮಾಣ ಹೆಚ್ಚಾಗಿವೆ. ಧನಾತ್ಮಕ ಚಿಂತನೆಯೇ ಆತ್ಮಹತ್ಯೆ ತಡೆಗೆ ಸೂಕ್ತ ಕ್ರಮ ಎಂದರು.
ಒಂದು ಸಮೀಕ್ಷೆಯ ಪ್ರಕಾರ, ನಮ್ಮ ದೇಶದಲ್ಲಿ ಪ್ರತಿ40 ಸೆಕೆಂಡಿಗೆ ಒಬ್ಬ, ಗಂಟೆಗೆ 15 ಜನರು, ವಿಶ್ವದಾದ್ಯಂತ ವರ್ಷಕ್ಕೆ 8 ಲಕ್ಷ ಜನರು ಆತ್ಮಹತ್ಯೆಗೆ ಒಳಗಾಗುತ್ತಿದ್ದಾರೆಂಬ ವಿಷಯ ಅತ್ಯಂತ ವಿಷಾದನೀಯ ಸಂಗತಿಯಾಗಿದೆ. ಆತ್ಮಹತ್ಯೆಗೆ ಮಹಿಳೆಯರು ಹೆಚ್ಚಾಗಿ ಪ್ರಯತ್ನಿಸುತ್ತಾರೆ. ಆದರೆ ಪುರುಷರ ಆತ್ಮಹತ್ಯೆ ಪ್ರಕರಣಗಳು ಹೆಚ್ಚಾಗಿವೆ. 15-20 ವಯಸ್ಸಿನ ಯುವಕರ ಪ್ರಮಾಣ ಹೆಚ್ಚಾಗಿದೆ. ಆತ್ಮಹತ್ಯೆ ಆಲೋಚನೆಯ ವ್ಯಕ್ತಿಯನ್ನು ಗುರ್ತಿಸುವುದು, ಆತನಿಗೆ ಸಮಾಲೋಚನೆ ಮಾಡಿ, ತಿಳಿಸಿ ಹೇಳುವುದು, ಮನೋರೋಗ ತಜ್ಞರನ್ನು ಸಂಪರ್ಕಿಸುವುದು, ಸದಾ ಕಾರ್ಯನಿರತರಾಗಿರುವುದು, ಯೋಗ, ಧ್ಯಾನ, ಸತ್ಸಂಗ ಮಾಡುವುದು, ಪಾಲಕ-ಪೋಷಕ ವರ್ಗವು ತಮ್ಮ ಮಕ್ಕಳ ಮೇಲೆ ಅತೀವ ಒತ್ತಡ ಹೇರದಿರುವುದು, ಮಾಧ್ಯಮಗಳು ಆತ್ಮಹತ್ಯೆಯ ಸುದ್ದಿಯನ್ನು ವೈಭವೀಕರಿಸದೆ, ಸಂಕ್ಷಿಪ್ತವಾಗಿ ನಿಧನ ವಾರ್ತೆ ತಿಳಿಯುವಂತೆ ಪ್ರಕಟಿಸುವುದು ಅಥವಾ ಪ್ರಸಾರ ಮಾಡುವುದು ಸೇರಿದಂತೆ ಮುಂತಾದ ಕ್ರಮಗಳನ್ನು ಕೈಗೊಂಡರೆ ಆತ್ಮಹತ್ಯೆಯ ಪ್ರಕರಣಗಳು ಬಹಳಷ್ಟು ಕಡಿಮೆಯಾಗಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷ ಅಸ್ಲಾಂ ಶೇಖ್, ಪ್ರಮುಖರಾದ ಬಸಯ್ಯಸ್ವಾಮಿ ಹೊದಲೂರ, ದೇವೇಂದ್ರಪ್ಪ ಗಣಮುಖಿ, ಸಾಹೇಬಗೌಡ್ ಶೇಗಜಿ ಸೇರಿದಂತೆ ಮತ್ತಿತರರಿದ್ದರು.