ಆಪ್ತರಿಗೆ ಮಂತ್ರಿಗಿರಿ, ಸಿದ್ದು, ಡಿಕೆಶಿ ಲಾಬಿ

ನವದೆಹಲಿ,ಮೇ೨೫:ಸಂಪುಟ ವಿಸ್ತರಣೆಗೆ ಸಂಬಂಧಿಸಿದಂತೆ ದೆಹಲಿಯಲ್ಲಿಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಇವರುಗಳು ಇಂದು ವರಿಷ್ಠರ ಜತೆ ಸಭೆ ನಡೆಸಿದ್ದಾರೆ. ಈ ಸಭೆಯಲ್ಲಿ ಸಚಿವರ ಪಟ್ಟಿ ಬಹುತೇಕ ಅಂತಿಮಗೊಳ್ಳುವ ಸಾಧ್ಯತೆ ಇದೆ. ಇನ್ನೆರೆಡು ಮೂರು ದಿನಗಳಲ್ಲಿ ನೂತನ ಸಚಿವರ ಪ್ರಮಾಣವಚನ ನಡೆಯಲಿದೆ.ಸಂಪುಟ ವಿಸ್ತರಣೆ ಸಂಬಂಧ ಹೈಕಮಾಂಡ್ ನಾಯಕರ ಜತೆ ಚರ್ಚೆ ನಡೆಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನಿನ್ನೆಯೇ ದೆಹಲಿಗೆ ತೆರಳಿ ತಡರಾತ್ರಿಯವರೆಗೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಜತೆ ಪ್ರತ್ಯೇಕವಾಗಿ ಚರ್ಚೆ ನಡೆಸಿದ್ದು, ಇಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ ವೇಣುಗೋಪಾಲ್ ಅವರ ದೆಹಲಿ ನಿವಾಸದಲ್ಲೂ ಸಭೆ ನಡೆಯಿತು. ಇದಾದ ನಂತರ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ ಸಭೆ ನಡೆದಿದ್ದು, ಈ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಎಐಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಕೆ.ಸಿ ವೇಣುಗೋಪಾಲ್, ರಣದೀಪ್‌ಸಿಂಗ್ ಸುರ್ಜೇವಾಲಾ ಭಾಗಿಯಾಗಿದ್ದು, ಯಾರನ್ನು ಸಚಿವರನ್ನಾಗಿಸಬೇಕು, ಯಾರಿಗೆ ಯಾವ ಖಾತೆ ನೀಡಬೇಕು ಎಂಬ ಬಗ್ಗೆ ಚರ್ಚೆಗಳನ್ನು ನಡೆಸಿದರು. ಬಹುತೇಕ ಸಚಿವರ ಹೆಸರುಗಳು ಇಂದು ಅಂತಿಮವಾಗಲಿದೆ.ಸಚಿವ ಸಂಪುಟದಲ್ಲಿ ತಮ್ಮ ಬೆಂಬಲಿಗರಿಗೆ ಸಚಿವ ಸ್ಥಾನ ದೊರಕಿಸಿ ’ಮೇಲುಗೈ’ ಸಾಧಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಪ್ರಯತ್ನ ನಡೆಸಿದ್ದಾರೆ. ಹಾಗಾಗಿ. ಸಚಿವರ ಪಟ್ಟಿಗೆ ಅಂತಿಮ ರೂಪ ನೀಡುವುದು ತಡವಾಗಿದೆ.
ಸಚಿವ ಸ್ಥಾನಕ್ಕಾಗಿ ಒಂದೆಡೆ ಹಿರಿಯ ಶಾಸಕರು ಲಾಬಿ ನಡೆಸಿದ್ದರೆ, ಮತ್ತೊಂದೆಡೆ ಹೊಸ ಮುಖಗಳಿಗೆ ಅವಕಾಶ ಸಿಗಬೇಕು ಎಂದು ಹಿರಿಯ ಶಾಸಕರು ಹೈಕಮಾಂಡ್ ಮೇಲೆ ಒತ್ತಡ ಹೇರಿದ್ದಾರೆ. ಇದರ ಜತೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ತಮ್ಮ ಆಪ್ತರಿಗೆ ಸಚಿವ ಸ್ಥಾನ ದೊರಕಿಸಲು ಹರಸಾಹಸ ನಡೆಸಿದ್ದು, ಇಬ್ಬರು ತಮ್ಮ ಬೆಂಬಲಿಗರಿಗೆ ಆದಷ್ಟು ಸಚಿವ ಸ್ಥಾನ ಸಿಗುವಂತೆ ನೋಡಿಕೊಂಡು ಸಂಪುಟದಲ್ಲಿ ತಮ್ಮ ಬಲ ಹೆಚ್ಚಿಸಿಕೊಳ್ಳಲು ಜಿದ್ದಿಗೆ
ಬಿದ್ದಿದ್ದಾರೆ. ಹಾಗಾಗಿ, ಸಚಿವರ ಪಟ್ಟಿ ತಯಾರಿಕೆ ವರಿಷ್ಠರಿಗೆ ಸವಾಲಾಗಿದೆ.ದೆಹಲಿಯಲ್ಲಿರುವ ಸಚಿವಾಕಾಂಕ್ಷಿ ಶಾಸಕರುಗಳು ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ವರಿಷ್ಠರನ್ನು ಭೇಟಿ ಮಾಡಿ ತಮಗೆ ಸಚಿವಸ್ಥಾನ ನೀಡುವಂತೆ ಲಾಬಿ ನಡೆಸಿದ್ದಾರೆ. ಸಚಿವ ಸ್ಥಾನದ ಮೇಲೆ ಕಣ್ಣಿಟ್ಟಿರುವ ಲಕ್ಷ್ಮಣಸವದಿ, ಕೃಷ್ಣಭೈರೇಗೌಡ, ದಿನೇಶ್ ಗುಂಡೂರಾವ್, ಲಕ್ಷ್ಮಿ ಹೆಬ್ಬಾಳ್ಕರ್, ವಿನಯ್‌ಕುಲಕರ್ಣಿ, ವಿಜಯಾನಂದ ಕಾಶ್ಯಪನವರ್ ಸೇರಿದಂತೆ ಹಲವು ಶಾಸಕರು ವರಿಷ್ಠರನ್ನು ಭೇಟಿ ಮಾಡಿದ್ದರು.
ನಿನ್ನೆ ರಾತ್ರಿ ಭೇಟಿ-ಚರ್ಚೆ
ನಿನ್ನೆ ದೆಹಲಿಗೆ ತೆರಳಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಇಬ್ಬರು ಹೈಕಮಾಂಡ್‌ನ್ನು ಭೇಟಿ ಮಾಡಿದರು. ಸಿದ್ದರಾಮಯ್ಯ ಭೇಟಿಗೂ ಮೊದಲೇ ಶಿವಕುಮಾರ್ ಮತ್ತು ಸಂಸದ ಡಿ.ಕೆ ಸುರೇಶ್ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಪ್ರಧಾನ ಕಾರ್ಯದರ್ಶಿ ಕೆ.ಸಿ ವೇಣುಗೋಪಾಲ್‌ರವರನ್ನು ಭೇಟಿ ಮಾಡಿ ಚರ್ಚಿಸಿದರು. ಇದಾದ ಬೆನ್ನಲ್ಲೆ ಸಿದ್ದರಾಮಯ್ಯ ಸಹ ನಿನ್ನೆ ತಡರಾತ್ರಿ ಖರ್ಗೆ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದರಾದರೂ ಯಾವುದೇ ತೀರ್ಮಾನಗಳು ಆಗಲಿಲ್ಲ.ಇಂದು ಬೆಳಿಗ್ಗೆ ದೆಹಲಿಯ ಲೋಧಿ ರಸ್ತೆಯಲ್ಲಿರುವ ಕೆ.ಸಿ ವೇಣುಗೋಪಾಲ್ ಮನೆಯಲ್ಲಿ ಇಬ್ಬರು ನಾಯಕರ ಜತೆ ಚರ್ಚೆಗಳು ನಡೆದಿದ್ದು, ಸಚಿವರ ಪಟ್ಟಿ ಕಸರತ್ತುಗಳು ಮುಂದುವರೆದಿವೆ.ರಾತ್ರಿಯ ವೇಳೆಗೆ ಎಲ್ಲವೂ ಅಂತಿಮವಾಗಲಿದೆ. ಒಂದು ವೇಳೆ ಇಂದು ಸಚಿವರ ಪಟ್ಟಿ ಅಂತಿಮವಾಗದಿದ್ದರೆ ನಾಳೆ ಪಟ್ಟಿ ಅಂತಿಮವಾಗುವುದು ನಿಶ್ಚಿತ ಎಂದು ಕಾಂಗ್ರೆಸ್ ಮೂಲಗಳು ಹೇಳಿವೆ.
ಸಚಿವಾಕಾಂಕ್ಷಿಗಳು ದೆಹಲಿಯಲ್ಲಿ ಬೀಡು, ಹೆಚ್ಚಿದ ಪೈಪೋಟಿ
ದೆಹಲಿಯಲ್ಲಿ ನಡೆದಿರುವ ಸಂಪುಟ ವಿಸ್ತರಣೆ ಕಸರತ್ತುಗಳು ಪೂರ್ಣವಾದರೆ ಇನ್ನು ೨-೩ ದಿನಗಳಲ್ಲಿ ೨೦ ಸಚಿವರು ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಈಗಾಗಲೇ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿ ಸೇರಿದಂತೆ ಒಟ್ಟು ೧೦ ಸಚಿವರಿದ್ದು, ಉಳಿದಂತೆ ೨೪ ಸ್ಥಾನಗಳು ಖಾಲಿ ಇವೆ. ಈ ಪೈಕಿ ೨೦ ಸಚಿವರನ್ನು ಸಂಪುಟಕ್ಕೆ ಸೇರ್ಪಡೆ ಮಾಡಿಕೊಂಡು ೪ ಸ್ಥಾನಗಳನ್ನು ಖಾಲಿ ಬಿಡುವ ತೀರ್ಮಾನವನ್ನು ಹೈಕಮಾಂಡ್ ಮಾಡಿದೆಯಾದರೂ ಸಚಿವ ಸ್ಥಾನಕ್ಕಾಗಿ ಇರುವ ಪೈಪೋಟಿ ನೋಡಿದರೆ ೨೨ ಸ್ಥಾನಗಳನ್ನು ಭರ್ತಿ ಮಾಡಿದರೂ ಅಚ್ಚರಿ ಇಲ್ಲ.ಸಚಿವ ಸ್ಥಾನಕ್ಕಾಗಿ ಲಾಬಿ ನಡೆಸಿರುವ ಶಾಸಕರುಗಳು ದೆಹಲಿಯಲ್ಲಿ ಬೀಡುಬಿಟ್ಟು ತಮ್ಮ ಗಾಡ್‌ಫಾದರ್‌ಗಳ ಮೂಲಕ ಪ್ರಯತ್ನ ನಡೆಸಿದ್ದಾರೆ. ಯಾರಿಗೆಲ್ಲ ಸಚಿವ ಸ್ಥಾನ ಸಿಗುತ್ತದೆ ಎಂಬುದು ಕುತೂಹಲ ಮೂಡಿಸಿದೆ.