ಆಪ್‌ಗೆ ರಾಷ್ಟ್ರೀಯ ಸ್ಥಾನಮಾನ ಲಭಿಸಿದ್ದು ಪವಾಡ

ನವದೆಹಲಿ,ಏ.೧೧-ಅತ್ಯಂತ ಕಡಿಮೆ ಅವಧಿಯಲ್ಲಿ ಆಮ್ ಆದ್ಮಿ ಪಕ್ಷಕ್ಕೆ ರಾಷ್ಟ್ರೀಯ ಪಕ್ಷ ಸ್ಥಾನಮಾನ ಲಭಿಸಿರುವುದು ಪವಾಡ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಹೇಳಿದ್ದಾರೆ.
ಕೇಂದ್ರ ಚುನಾವಣಾ ಆಯೋಗದಿಂದ ರಾಷ್ಟ್ರೀಯ ಪಕ್ಷ ಎಂದು ಘೋಷಣೆ ಹೊರ ಬೀಳಿತ್ತಿದ್ದಂತೆ ಟ್ವಿಟರ್‌ನಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಇದರ ಶ್ರೇಯ ಜನರಿಗೇ ಸಲ್ಲಬೇಕು, ಅವರ ನಿರೀಕ್ಷೆಗಳನ್ನು ಈಡೇರಿಸುವ ಶಕ್ತಿಯನ್ನು ತಮ್ಮ ಪಕ್ಷಕ್ಕೆ ನೀಡುವಂತೆ ದೇವರಲ್ಲಿ ಮನವಿ ಮಾಡುವುದಾಗಿ ಹೇಳಿದರು.
ಇಷ್ಟೊಂದು ಕಡಿಮೆ ಅವಧಿಯಲ್ಲಿ ರಾಷ್ಟ್ರೀಯ ಪಕ್ಷದ ಸ್ಥಾನಮಾನ ನೀಡಿರುವುದು ಪವಾಡಕ್ಕಿಂತ ಬೇರೇನು ಅಲ್ಲ, ಇದಕ್ಕಾಗಿ ಕೊಟ್ಯಂತರ ಜನರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಜನರ ಆಶೋತ್ತರಗಳನ್ನು ಈಡೇರಿಸುವ ದೊಡ್ಡ ಜವಾಬ್ದಾರಿ ನಮ್ಮ ಮೇಲಿದೆ ಎಂದಿದ್ದಾರೆ.
೨೦೧೨ರಲ್ಲಿ ಅಸ್ಥಿತ್ವಕ್ಕೆ ಬಂದ ಆಮ್ ಆದ್ಮಿ ಪಕ್ಷ ೧೦ ವರ್ಷಗಳ ಅವಧಿಯಲ್ಲೇ ರಾಷ್ಟ್ರೀಯ ಪಕ್ಷ ಸ್ಥಾನಮಾನ ಪಡೆದುಕೊಂಡಿದೆ.
ದೆಹಲಿ ಮತ್ತು ಪಂಜಾಬ್‌ನಲ್ಲಿ ಆಪ್ ಸರ್ಕಾರ ಅಸ್ಥಿತ್ವದಲ್ಲಿದೆ, ಗುಜರಾತ್‌ನಲ್ಲೂ ಗೆಲ್ಲಲು ನಡೆಸಿದ್ದ ಪ್ರಯತ್ನಗಳು ವಿಫಲವಾಗಿದ್ದವು. ಹೀಗಾಗಿ ಗುಜರಾತ್‌ನಲ್ಲಿ ಐವರು ಮತ್ತು ಗೋವಾದಲ್ಲಿ ಇಬ್ಬರು ಶಾಸಕರನ್ನು ಆಪ್ ಹೊಂದಿದೆ.