
ಬೆಂಗಳೂರು,ಆ.೧೮:ಲೋಕಸಭಾ ಚುನಾವಣೆಯಲ್ಲಿ ಹೆಚ್ಚು ಸ್ಥಾನ ಗೆಲ್ಲಲು ಕಾಂಗ್ರೆಸ್ ಆಪರೇಷನ್ ಹಸ್ತಕ್ಕೆ ತಯಾರಿ ನಡೆಸಿರುವುದು ಜಗಜ್ಜಾಹೀರಾಗಿರುವ ಬೆನ್ನಲ್ಲೆ ಬೇರೆ ಪಕ್ಷಗಳಿಂದ ಕಾಂಗ್ರೆಸ್ ಸೇರ್ಪಡೆಯಾಗುವ ಶಾಸಕರು, ನಾಯಕರುಗಳ ಬಗ್ಗೆ ಯಾವುದೇ ಅಪಸ್ವರ ಎತ್ತದಂತೆ ಕಾಂಗ್ರೆಸ್ ನಾಯಕರು ಹಾಗೂ ಮುಖಂಡರುಗಳುಗಳಿಗೆ ಕೆಪಿಸಿಸಿ ಅಧ್ಯಕ್ಷ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಹೆಚ್ಚಿನ ಸ್ಥಾನ ಗೆಲ್ಲಬೇಕು. ಹಾಗಾಗಿ ಬೇರೆ ಪಕ್ಷಗಳ ಮುಖಂಡರು ಕಾಂಗ್ರಸ್ ಸೇರ್ಪಡೆಯಾಗಲು ಮುಂದೆ ಬಂದಿದ್ದಾರೆ. ಕಾಂಗ್ರೆಸ್ ಸೇರ್ಪಡೆಯಾಗುವ ಬಿಜೆಪಿ ಮತ್ತು ಜೆಡಿಎಸ್‌ನ ಯಾವುದೇ ಶಾಸಕರು ಹಾಗೂ ನಾಯಕರ ವಿರುದ್ಧ ಹೇಳಿಕೆ ನೀಡಿ ಅವರಿಗೆ ಘಾಸಿಯಾಗುವ ಮಾತುಗಳನ್ನು ಆಡಬೇಡಿ ಎಂದು ಡಿ.ಕೆ.ಶಿವಕುಮಾರ್ ಕಾಂಗ್ರೆಸ್ ನಾಯಕರು ಹಾಗೂ ಕಾರ್ಯಕರ್ತರಿಗೆ ಫರ್ಮಾನು ಹೊರಡಿಸಿದ್ದಾರೆ.
ಲೋಕಸಭಾ ಚುನಾವಣೆ ಹೊತ್ತಿಗೆ ರಾಜ್ಯದಲ್ಲಿ ಆಪರೇಷನ್ ಹಸ್ತ ನಡೆಯುವುದು ನಿಶ್ಚಿತವಾಗಿದ್ದು, ಈ ಹಿಂದೆ ಕಾಂಗ್ರೆಸ್ ತೊರೆದು ಸಮ್ಮಿಶ್ರ ಸರ್ಕಾರ ಪತನಕ್ಕೆ ಕಾರಣವಾಗಿ ಬಿಜೆಪಿ ಸೇರಿದ್ದ ವಲಸಿಗ ಶಾಸಕರಗಳು ಮತ್ತೆ ಕೈನತ್ತ ಮುಖಮಾಡಿದ್ದು, ಆಪರೇಷನ್ ಹಸ್ತ ನಡೆಸಿ ಇವರನ್ನೆಲ್ಲ ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳಲು ಕಾಂಗ್ರೆಸ್ ಮುಖಂಡರುಗಳು ಸದ್ದಿಲ್ಲದೆ ಕಾರ್ಯಾಚರಣೆಯನ್ನು ನಡೆಸಿದ್ದಾರೆ. ಕಾಂಗ್ರೆಸ್ ಸೇರುವ ಈ ನಾಯಕರ ವಿರುದ್ಧ ಮುಖಂಡರುಗಳು ಹೇಳಿಕೆಗಳನ್ನುನೀಡಿದರೆ ಈ ಶಾಸಕರುಗಳಿಗೆ ಇರುಸು-ಮುರುಸು ಆಗಬಹುದು. ಹಾಗಾಗಿ, ಕೈ ಸೇರಲು ಮುಂದಾಗಿರುವ ಯಾರ ವಿರುದ್ಧವೂ ಬಹಿರಂಗವಾಗಿ ಮಾತನಾಡಬೇಕು ಎಂದು ಡಿ.ಕೆ ಶಿವಕುಮಾರ್ ಎಲ್ಲ ಕಾಂಗ್ರೆಸ್ ನಾಯಕರುಗಳಿಗೆ ಸಂದೇಶ ನೀಡಿದ್ದಾರೆ.
ಕಾಂಗ್ರೆಸ್ ಹೈಕಮಾಂಡ್ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಹೆಚು ಸ್ಥಾನ ಗೆಲ್ಲಬೇಕು. ಅದಕ್ಕಾಗಿ ರಾಜಕೀಯವಾಗಿ ಏನೆಲ್ಲ ಮಾಡಬೇಕೋ ಅದನ್ನು ಮಾಡಿ ಎಂದು ಸೂಚನೆ ನೀಡಿದೆ. ಹೈಕಮಾಂಡ್‌ನ ಸೂಚನೆ ಮೇರೆಗೆ ಹೆಚ್ಚು ಸ್ಥಾನ ಗೆಲ್ಲಲು ನಮ್ಮದೇ ಆದ ರಾಜಕೀಯ ತಂತ್ರಗಳನ್ನು ರೂಪಿಸಿದ್ದೇವೆ. ಆಪರೇಷನ್ ಹಸ್ತಕೂಡ ಈ ತಂತ್ರದ ಭಾಗವಾಗಿದೆ. ಅದರಂತೆ ಬಿಜೆಪಿ ಹಾಗೂ ಜೆಡಿಎಸ್‌ನ ಹಲವು ಶಾಸಕರು ಕಾಂಗ್ರೆಸ್ ಸೇರಲು ಮುಂದೆ ಬಂದಿದ್ದಾರೆ. ಈ ಬಗ್ಗೆ ಚರ್ಚೆಗಳು ನಡೆದಿದೆ. ಇನ್ನೂ ಯಾರನ್ನು ಸೇರಿಸಿಕೊಳ್ಳಬೇಕು ಎಂಬ ಬಗ್ಗೆ ಸ್ಪಷ್ಟ ತೀರ್ಮಾನಗಳಾಗಿಲ್ಲ. ಹಾಗಾಗಿ ಯಾವುದೇ ಕಾಂಗ್ರೆಸ್ ಕಾರ್ಯಕರ್ತರು, ನಾಯಕರುಗಳು ಇವರ ಕಾಂಗ್ರೆಸ್ ಸೇರ್ಪಡೆಗೆ ವಿರೋಧಿಸುವ ಹೇಳಿಕೆ ನೀಡಬೇಡಿ. ಲೋಕಸಭಾ ಚುನಾವಣೆ ಗೆಲುವು ಪಕ್ಷಕ್ಕೆ ಅತ್ಯಂತ ಮಹತ್ವದ್ದು ಎಂದು ಡಿ.ಕೆ ಶಿವಕುಮಾರ್ ಎಲ್ಲ ನಾಯಕರುಗಳಿಗೆ ಕಿವಿಮಾತು ಹೇಳಿದ್ದಾರೆ.
ಡಿ.ಕೆ ಶಿವಕುಮಾರ್‌ರವರ ಈ ಸೂಚನೆ ಮೇರೆಗೆ ಕಾಂಗ್ರೆಸ್‌ನ ಸಚಿವರು ಹಾಗೂ ಮುಖಂಡರುಗಳು ಆಪರೇಷನ್ ಹಸ್ತದಡಿ ಕಾಂಗ್ರೆಸ್ ಸೇರಲು ಬಯಸುವ ಎಲ್ಲರಿಗೂ ಸ್ವಾಗತ ಎಂಬ ಹೇಳಿಕೆಗಳನ್ನು ನೀಡುತ್ತಿದ್ದಾರೆ.ಯಾರು ಇದುವರೆಗೂ ಆಪರೇಷನ್ ಹಸ್ತಕ್ಕೆ ಬಹಿರಂಗವಾಗಿ ವಿರೋಧ ವ್ಯಕ್ತಪಡಿಸಿಲ್ಲ.
ಪಕ್ಷದ ಹಿತದೃಷ್ಟಿ ಲೋಕಸಭಾ ಚುನಾವಣೆಯ ಗೆಲುವನ್ನು ಗಮನದಲ್ಲಿಟ್ಟುಕೊಂಡು ಎಲ್ಲ ನಾಯಕರೂ ಆಪರೇಷನ್ ಹಸ್ತದ ಬಗ್ಗೆ ಮೌನವಹಿಸಿ ರಾಜಕೀಯವಾಗಿ ಗೆಲುವಿಗೆ ಏನ್ನೆಲ್ಲ ಮಾಡಲು ಸಾಧ್ಯವೊ ಅದೆಲದ್ದಕ್ಕೂ ಒಪ್ಪಿಗೆ ನೀಡಿದ್ದಾರೆ ಎಂದು ಕಾಂಗ್ರೆಸ್ ಮೂಲಗಳು ಹೇಳಿವೆ.
ಬೆಂಬಲಿಗರ ಜತೆ ಎಸ್‌ಟಿಎಸ್, ಹೆಬ್ಬ್ಕಾರ್ ಚರ್ಚೆ
ಕಾಂಗ್ರೆಸ್ ತೊರೆದು ಬಿಜೆಪಿ ಸೇರಿ ಸಚಿವರಾಗಿ ಈಗ ಶಾಸಕರಾಗಿರುವ ಎಸ್.ಟಿ ಸೋಮಶೇಖರ್,ಶಿವರಾಂ ಹೆಬ್ಬಾರ್,ಗೋಪಾಲಯ್ಯ,ಮುನಿರತ್ನ ಸೇರಿದಂತೆ ೫-೬ ಬಿಜೆಪಿ ಶಾಸಕರು ಹಾಗೂ ೮-೧೦ ಜೆಡಿಎಸ್ ಶಾಸಕರು ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಸೇರುವ ಸಾಧ್ಯತೆಗಳು ಹೆಚ್ಚಿದ್ದು, ಶಾಸಕರುಗಳಾದ ಶಿವರಾಂ ಹೆಬ್ಬಾರ್ ಮತ್ತು ಎಸ್.ಟಿ. ಸೋಮಶೇಖರ್ ಈಗಾಗಲೇ ತಮ್ಮ ಕ್ಷೇತ್ರಗಳಲ್ಲಿ ಬೆಂಬಲಿಗರ ಸಭೆ ನಡೆಸಿ ಕಾಂಗ್ರೆಸ್ ಸೇರ್ಪಡೆ ನಡೆಸಿ ಅಭಿಪ್ರಾಯಗಳನ್ನು ಆಲಿಸಿದ್ದಾರೆ.
ಈ ಬೆಂಬಲಿಗರ ಸಭೆಯಲ್ಲಿ ಪಾಲ್ಗೊಂಡಿದ್ದ ಬಹುತೇಕರು ಕಾಂಗ್ರೆಸ್ ಸೇರುವಂತೆ ಎಸ್.ಟಿ. ಸೋಮಶೇಖರ್ ಹಾಗೂ ಶಿವರಾಂ ಹೆಬ್ಬಾರ್ ಮೇಲೆ ಒತ್ತಡ ಹೇರಿದ್ದರೆ. ಹಾಗಾಗಿ ಇವರುಗಳು ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಸೇರುವುದು ಖಚಿತ ಎಂದು ಹೇಳಲಾಗುತ್ತಿದೆ.
ಶಾಸಕ ಸೋಮಶೇಖರ್ ಕರೆದಿದ್ದ ಬೆಂಬಲಿಗರ ಸಭೆಯಲ್ಲಿ ನೆಲಮಂಗಲದ ಕಾಂಗ್ರೆಸ್ ಶಾಸಕ ಶ್ರೀನಿವಾಸ್ ಸಹ ಭಾಗಿಯಾಗಿರುವುದು ಆಪರೇಷನ್ ಹಸ್ತನಡೆಯುವುದನ್ನು ಖಚಿತ ಪಡಿಸಿದೆ.
ಹಲವು ಶಾಸಕರು ಕಾಂಗ್ರೆಸ್‌ಗೆ
ರಾಜ್ಯದಲ್ಲಿ ಆಪರೇಷನ್ ಹಸ್ತ ನಡೆಯುವುದು ನಿಶ್ಚಿತವಾಗಿರುವಾಗಲೇ ಕೃಷಿ ಸಚಿವ ಚೆಲುವರಾಯಸ್ವಾಮಿ, ಬಿಜೆಪಿ ಹಾಗೂ ಜೆಡಿಎಸ್‌ನಿಂದ ಹಲವು ಹಾಲಿ ಶಾಸಕರು ಮಾಜಿ ಶಾಸಕರು ಕಾಂಗ್ರೆಸ್ ಸೇರಲಿದ್ದಾರೆ ಎಂಬ ಹೇಳಿಕೆ ನೀಡಿದ್ದಾರೆ.
ಮಂಡ್ಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಚೆಲುವರಾಯಸ್ವಾಮಿ,೧೫ ರಿಂದ೨೦ ಹಾಲಿ ಹಾಗೂ ಮಾಜಿ ಶಾಸಕರು ಕಾಂಗ್ರೆಸ್ ಸೇರಲು ಸಿದ್ಧರಾಗಿದ್ದಾರೆ.ಕೆಲವೇ ದಿನಗಳಲ್ಲಿ ಎಲ್ಲವೂ ಅಂತಿಮವಾಗಲಿದೆ. ಯಾರು ಕಾಂಗ್ರೆಸ್ ಸೇರುತ್ತಾರೆ ಎಂಬುದನ್ನು ಈಗಲೇ ಬಹಿರಂಗಪಡಿಸುವುದಿಲ್ಲ.ಮುಂದಿನ ದಿನಗಳಲ್ಲಿ ಎಲ್ಲವೂ ಗೊತ್ತಾಗಲಿದೆ. ಒಂದಂತೂ ನಿಜ ಹಾಲಿ ಬಿಜೆಪಿ ಹಾಗೂ ಜೆಡಿಎಸ್ ಶಾಸಕರು ಇಷ್ಟರಲ್ಲೇ ಕಾಂಗ್ರೆಸ್ ಸೇರುತ್ತಾರೆ ಎಂದರು.