ಆಪರೇಷನ್ ಹಸ್ತ ಚುರುಕು

ಬೆಂಗಳೂರು,ಸೆ.೩:ಮುಂದಿನ ಲೋಕಸಭಾ ಚುನಾವಣೆ ಹೊತ್ತಿಗೆ ಆಪರೇಷನ್ ಹಸ್ತ ನಡೆಸಿ ಶತಾಯ-ಗತಾಯ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಹೆಚ್ಚು ಸ್ಥಾನಗಳನ್ನು ಗೆಲ್ಲಿಸಿಕೊಳ್ಳುವ ಉಮೇದಿನಲ್ಲಿರುವ ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹಲವು ಬಿಜೆಪಿ ಹಾಗೂ ಜೆಡಿಎಸ್ ಶಾಸಕರುಗಳಿಗೆ ಗಾಳ ಹಾಕಿದ್ದು, ಕೆಲವರ ಜತೆ ಚರ್ಚೆ ಸಹ ನಡೆಸಿದ್ದಾರೆ.
ಮುಂದಿನ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಮತಗಳನ್ನು ಹೆಚ್ಚಿಸಿಕೊಂಡು ಬಿಜೆಪಿ ಹಾಗೂ ಜೆಡಿಎಸ್‌ನ ಬಲ ತಗ್ಗಿಸಲು ಈಗಿನಿಂದಲೇ ಕಾಯತಂತ್ರಗಳನ್ನು ರೂಪಿಸಿರುವ ಡಿ.ಕೆ. ಶಿವಕುಮಾರ್, ಆಪರೇಷನ್ ಹಸ್ತಕ್ಕೂ ಮುಂದಾಗಿದ್ದು, ಹಲವು ಬಿಜೆಪಿ ಹಾಗೂ ಜೆಡಿಎಸ್ ಶಾಸಕರನ್ನು ಪಕ್ಷಕ್ಕೆ ಸೆಳೆಯುವ ನಿಟ್ಟಿನಲ್ಲಿ ಮಾತುಕತೆಗಳನ್ನು ನಡೆಸಿದ್ದಾರೆ. ಈಗಾಗಲೇ ಬಿಜೆಪಿ ಶಾಸಕರುಗಳಾದ ಎಸ್.ಟಿ ಸೋಮಶೇಖರ್, ಶಿವರಾಂ ಹೆಬ್ಬಾರ್ ಸೇರಿದಂತೆ ಹಲವರು ಲೋಕಸಭಾ ಚುನಾವಣೆಯ ಹೊತ್ತಿಗೆ ಕಾಂಗ್ರೆಸ್ ಸೇರಲಿದ್ದಾರೆ ಎಂಬ ಸುದ್ದಿಗಳು ಹರಿದಾಡುತ್ತಿರುವಾಗಲೇ ಡಿ.ಕೆ ಶಿವಕುಮಾರ್ ನಿನ್ನೆ ಬಿಜೆಪಿಯ ಮಾಜಿ ಶಾಸಕರುಗಳಾದ ಬಿ.ಸಿ ಪಾಟೀಲ್, ರಾಜುಗೌಡ ಸೇರಿದಂತೆ ಹಲವು ಬಿಜೆಪಿ ಮುಖಂಡರುಗಳ ಜತೆ ಚರ್ಚೆ ನಡೆಸಿ ಕಾಂಗ್ರೆಸ್ ಪಕ್ಷಕ್ಕೆ ಇವರುಗಳನ್ನು ಸೇರ್ಪಡೆ ಮಾಡಿಕೊಳ್ಳುವ ಬಗ್ಗೆ ಮಾತುಕತೆ ನಡೆಸಿದ್ದಾರೆ.
ನಿನ್ನೆ ರಾತ್ರಿ ನಟ ಸುದೀಪ್ ಅವರು ತಮ್ಮ ಹುಟ್ಟುಹಬ್ಬಕ್ಕಾಗಿ ಔತಣಕೂಟವನ್ನು ಆಯೋಜಿಸಿದ್ದು, ಈ ಔತಣ ಕೂಟದಲ್ಲಿ ಭಾಗಿಯಾಗಿದ್ದ ಬಿ.ಸಿ. ಪಾಟೀಲ್, ರಾಜುಗೌಡ ಸೇರಿದಂತೆ ಹಲವು ನಾಯಕರುಗಳ ಜತೆ ಡಿ.ಕೆ ಶಿವಕುಮಾರ್ ಚರ್ಚೆ ನಡೆಸಿ ಲೋಕಸಭಾ ಚುನಾವಣೆ ಹೊತ್ತಿಗೆ ಪಕ್ಷಕ್ಕೆ ಸೇರಿಕೊಳ್ಳಿ ಎಂಬ ಆಹ್ವಾನವನ್ನು ನೀಡಿದ್ದಾರೆ ಎನ್ನಲಾಗಿದೆ.
ನಟ ಸುದೀಪ್ ಅವರ ಹುಟ್ಟುಹಬ್ಬದ ಪಾರ್ಟಿಯಲ್ಲಿ ಡಿ.ಕೆ ಶಿವಕುಮಾರ್ ಜತೆ ಬಿಜೆಪಿ ನಾಯಕರುಗಳ ಗೌಪ್ಯ ಚರ್ಚೆ ಬಹಿರಂಗಗೊಂಡಿದ್ದು, ಲೋಕಸಭಾ ಚುನಾವಣೆ ಹೊತ್ತಿಗೆ ಹಲವು ಬಿಜೆಪಿಯ ಹಾಲಿ ಶಾಸಕರು ಹಾಗೂ ಮಾಜಿ ಸಚಿವರುಗಳು, ಶಾಸಕರುಗಳು ಕಾಂಗ್ರೆಸ್ ಸೇರುವ ಸಾಧ್ಯತೆಗಳು ಹೆಚ್ಚಿವೆ.
ನಟ ಸುದೀಪ್‌ರವರ ಬರ್ತಡೆ ಪಾರ್ಟಿಯಲ್ಲಿ ಡಿ.ಕೆ. ಶಿವಕುಮಾರ್, ಮಾಜಿ ಸಚಿವರುಗಳಾದ ಬಿ.ಸಿ ಪಾಟೀಲ್, ರಾಜುಗೌಡ ಅವರ ಜತೆ ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಚರ್ಚೆ ನಡೆಸಿದ್ದು, ಚರ್ಚೆಯ ಚಿತ್ರಗಳು ವೈರಲ್ ಆಗಿವೆ.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿ.ಸಿ ಪಾಟೀಲ್ ಮತ್ತು ರಾಜುಗೌಡ ಇವರಿಬ್ಬರು ಸೋಲನುಭವಿಸಿದ್ದರು. ಡಿ.ಕೆ ಶಿವಕುಮಾರ್ ಈಗಾಗಲೇ ಬಿಜೆಪಿ ಹಾಗೂ ಜೆಡಿಎಸ್‌ನ ಹಲವು ಹಾಲಿ ಹಾಗೂ ಮಾಜಿ ಶಾಸಕರುಗಳ ಜತೆ ಸಂಪರ್ಕದಲ್ಲಿದ್ದು, ಜನವರಿ ಇಲ್ಲವೆ ಫೆಬ್ರವರಿ ಹೊತ್ತಿಗೆ ಬಿಜೆಪಿಯಿಂದ ೭-೮ ಶಾಸಕರು ಹಾಗೂ ಮಾಜಿ ಶಾಸಕರು, ಕೆಲ ಹಾಲಿ ಸಂಸದರು ಹಾಗೆಯೇ ಜೆಡಿಎಸ್‌ನಿಂದ ೮-೧೦ ಹಾಲಿ ಶಾಸಕರು, ಕೆಲ ಮಾಜಿ ಶಾಸಕರು ಹಾಗೂ ಮಾಜಿ ಸಂಸದರೊಬ್ಬರು ಕಾಂಗ್ರೆಸ್ ಸೇರಲಿದ್ದಾರೆ ಎಂದು ಕಾಂಗ್ರೆಸ್ ಮೂಲಗಳು ಹೇಳಿವೆ.
ರಾಜ್ಯದಲ್ಲಿ ಬಿಜೆಪಿ ಬಲವನ್ನು ತಗ್ಗಿಸಲು ಕಾಂಗ್ರೆಸ್ ಏನೆಲ್ಲ ಸಾಧ್ಯವೋ ಅದನ್ನೆಲ್ಲ ಮಾಡುತ್ತಿದ್ದು, ಡಿ.ಕೆ ಶಿವಕುಮಾರ್ ಅವರಂತೂ ಅವಕಾಶ ಸಿಕ್ಕಾಗಲೆಲ್ಲ ಬಿಜೆಪಿ ಮತ್ತು ಜೆಡಿಎಸ್‌ನ ನಾಯಕರುಗಳಿಗೆ ಗಾಳ ಹಾಕುತ್ತಿದ್ದು, ನಿನ್ನೆ ಸಹ ನಟ ಸುದೀಪ್ ಬರ್ತಡೆ ಪಾರ್ಟಿಯಲ್ಲೂ ಡಿ.ಕೆ. ಶಿವಕುಮಾರ್ ಅನ್ಯ ಪಕ್ಷದ ನಾಯಕರುಗಳನ್ನು ಕಾಂಗ್ರೆಸ್‌ಗೆ ಸೆಳೆಯುವ ಕೆಲಸವನ್ನು ಮಾಡಿದ್ದು, ಬಹುಮಟ್ಟಿಗೆ ಶಿವಕುಮಾರ್‌ರವರ ಮಾತುಗಳಿಗೆ ಬಿಜೆಪಿಯ ನಾಯಕರುಗಳು ಸಮ್ಮತಿ ಸೂಚಿಸಿದ್ದು, ಸಮಯ ನೋಡಿಕೊಂಡು ಕಾಂಗ್ರೆಸ್ ಸೇರುವ ಭರವಸೆಯನ್ನು ನೀಡಿದ್ದಾರೆ ಎನ್ನಲಾಗಿದೆ.

ಕಾಂಗ್ರೆಸ್ ಸೇರುವುದು ಊಹಾ-ಪೋಹ: ಬಿ.ಸಿ ಪಾಟೀಲ್
ತಮ್ಮ ಕಾಂಗ್ರೆಸ್ ಸೇರ್ಪಡೆ ಬಗ್ಗೆ ಪ್ರತಿಕ್ರಿಯಿಸಿರುವ ಮಾಜಿ ಸಚಿವ ಬಿ.ಸಿ ಪಾಟೀಲ್, ನಾನು ಬಿಜೆಪಿಯಲ್ಲಿ ಇರುತ್ತೇನೆ, ನಿನ್ನೆ ಸುದೀಪ್‌ರವರ ಬರ್ತಡೆ ಪಾರ್ಟಿಯಲ್ಲಿ ಡಿ.ಕೆ ಶಿವಕುಮಾರ್‌ರವರನ್ನು ಭೇಟಿ ಮಾಡಿರುವುದ ನಿಜ. ಅವರ ಜತೆ ಯಾವುದೇ ರಾಜಕೀಯ ಚರ್ಚೆ ನಡೆಸಿಲ್ಲ ಎಂದರು.
ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಹಾವೇರಿ ಲೋಕಸಭಾ ಕ್ಷೇತ್ರದ ಟಿಕೆಟ್ ಬಯಸಿದ್ದೀರಾ ಎಂಬ ಪ್ರಶ್ನೆಗೆ ಪಕ್ಷ ಟಿಕೆಟ್ ನೀಡಿದರೆ ನಿಲ್ಲುತ್ತೇನೆ. ಇಲ್ಲದಿದ್ದರೆ ಪಕ್ಷ ಹೇಳಿದ ಅಭ್ಯರ್ಥಿ ಪರ ಕೆಲಸ ಮಾಡುತ್ತೇನೆ. ಬಿಜೆಪಿ ಬಿಡಲ್ಲ ಎಂದರು.

ಪಕ್ಷದಲ್ಲಿ ಅಸಮಾಧಾನ ಇರೋದು ಸತ್ಯ ಆದರೆ ಪಕ್ಷ ಬಿಡಲ್ಲ:ರಾಜುಗೌಡ
ಆಪರೇಷನ್ ಹಸ್ತ ಆಗೋಕೆ ನನಗೆ ಕ್ಯಾನ್ಸರೂ ಆಗಿಲ್ಲ, ಗಡ್ಡೆಯೂ ಇಲ್ಲ ನಾನು ಬಿಜೆಪಿ ಬಿಡಲ್ಲ, ಬಿಜೆಪಿ ನನಗೆ ಸ್ಥಾನಮಾನ ನೀಡಿದೆ ಎಂದಿರುವ ಮಾಜಿ ಸಚಿವ ರಾಜುಗೌಡ ಪಕ್ಷದಲ್ಲಿ ಅಸಮಾಧಾನ, ಬೇಸರ ಇರೋದು ಸತ್ಯ ಎಂದಿದ್ದಾರೆ.
ನಿನ್ನೆ ನಟ ಸುದೀಪ್ ಅವರ ಹುಟ್ಟುಹಬ್ಬ ಇತ್ತು. ಹೋಟೆಲ್‌ನಲ್ಲಿ ನಡೆದ ಬರ್ತಡೆ ಪಾರ್ಟಿಯಲ್ಲಿ ಚಿತ್ರ ನಿರ್ಮಾಪಕರು, ನಟರೂ ಇದ್ರು.. ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸಹ ಪಾಲ್ಗೊಂಡಿದ್ದರು. ಅವರು ನನ್ನನ್ನು ನೀವು ಕ್ಷೇತ್ರದಲ್ಲಿ ಒಳ್ಳೆಯ ಕೆಲಸ ಮಾಡಿದ್ದರೂ ಹೇಗೆ ಸೋತೆ ಎಂದು ಕೇಳಿದರು. ನಿಮ್ಮ ಮತ್ತು ಸಿದ್ದರಾಮಯ್ಯರವರ ಪ್ರಭಾವದಿಂದ ಸೋಲಾಯಿತು ಎಂದು ಹೇಳಿದೆ ಅಷ್ಟೆ. ನಾನು ಬಿಜೆಪಿ ಬಿಡುವ ಪ್ರಶ್ನೆಯೇ ಇಲ್ಲ. ಸುದೀಪ್ ಹುಟ್ಟುಹಬ್ಬಕ್ಕಿಂತ ಶಿವಕುಮಾರ್ ಜತೆ ನಾವು ಮಾತನಾಡಿದ್ದೆ ದೊಡ್ಡ ಸುದ್ದಿಯಾಗಿದೆ ಎಂದರು.