
ಕಲಬುರಗಿ,ಆ.28-ಆಪರೇಷನ್ ಕಮಲ ಮಾಡಿ ಅನೈತಿಕ ಸರ್ಕಾರ ರಚನೆ ಮಾಡಿದ್ದು ಬಿಜೆಪಿ, ಕಾಂಗ್ರೆಸ್ ಸರ್ಕಾರಕ್ಕೆ ಸಂಪೂರ್ಣ ಬಹುಮತ ಇದೆ ನಾವೇಕೆ ಆಪರೇಷನ್ ಮಾಡುತ್ತೇವೆ ಎಂದು ರಾಜ್ಯ ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಕನ್ನಡ ಮತ್ತು ಸಂಸ್ಕøತಿ ಸಚಿವ ಶಿವರಾಜ ಎಸ್.ತಂಗಡಗಿ ಪ್ರಶ್ನಿಸಿದರು.
ಇಂದಿಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಾಸಕರನ್ನು ಬಳಸಿ ಅವರನ್ನು ಅನರ್ಹರನ್ನಾಗಿ ಮಾಡಿದ ಯಾವುದಾದರೂ ಸರ್ಕಾರ ಇದ್ದರೆ ಅದು ಬಿಜೆಪಿ ಸರ್ಕಾರ ಎಂದು ಟೀಕಿಸಿದರು.
ಕಾಂಗ್ರೆಸ್ ಸರ್ಕಾರಕ್ಕೆ ಸಂಪೂರ್ಣ ಬಹುಮತ ಇದೆ ನಾವು ಏಕೆ ಅಪರೇಷನ್ ಮಾಡ್ತೀವಿ. ಕಾಂಗ್ರೆಸ್ ಸಿದ್ಧಾಂತ ಮೆಚ್ಚಿ ಪಕ್ಷಕ್ಕೆ ಸೇರಿದರೆ ಅವರಿಗೆ ನಾವು ಸ್ವಾಗತಿಸುತ್ತೇವೆ. ಬಿಜೆಪಿಯವರು 16 ಶಾಸಕರನ್ನು ಆಪರೇಷನ್ ಕಮಲ ಮಾಡಿ ಬೀದಿಗೆ ಬಿಟ್ಟಿದ್ದಾರೆ. ಬಿಜೆಪಿಯವರನ್ನು ನಂಬಿ ಅವರು ಅಲ್ಲಿ ಇರೋಕೆ ಆಗಲ್ಲ, ನಾವು ಏನಾದರೂ ಬಾಗಲು ತೆರೆದರೆ ಎಲ್ಲರೂ ಬರುತ್ತಾರೆ. ಕಾಂಗ್ರೆಸ್ ಸಿದ್ಧಾಂತಗಳನ್ನು ಒಪ್ಪಿ ಬಂದರೆ ಬರಲಿ ಅದಕ್ಕೆ ನಿರ್ಣಯ ತೆಗೆದುಕೊಳ್ಳಲು ಮುಖ್ಯಮಂತ್ರಿ ಹಾಗೂ ಡಿಸಿಎಂ, ಡಾ. ಮಲ್ಲಿಕಾರ್ಜುನ ಖರ್ಗೆ ಅವರಿದ್ದಾರೆ ಎಂದರು.
ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿಕೆಗೆ ತಿರುಗೇಟು ನೀಡಿದ ಅವರು, ಕಾಂಗ್ರೆಸ್ ಸರ್ಕಾರ ರಚನೆಯಾಗಿ 100 ದಿನಗಳು ಕಳೆದರೂ ಇಲ್ಲಿವರೆಗೆ ಬಿಜೆಪಿಯಲ್ಲಿ ವಿರುದ್ಧ ಪಕ್ಷದ ನಾಯಕರ ಆಯ್ಕೆ ಆಗಿಲ್ಲ ಎಂದರು. ಕಾಂಗ್ರೆಸ್ ಸರ್ಕಾರ ನೂರು ದಿನಗಳಲ್ಲಿ ಜನರ ಬೇಡಿಕೆಯನ್ನು ಈಡೇರಿಸಿದೆ. ಸರ್ಕಾರ ನೀಡಿರುವ ಐದು ಗ್ಯಾರಂಟಿಗಳನ್ನು ಕೂಡ ಈಡೇರಿಸಿದೆ ಎಂದರು.
ಈಶ್ವರಪ್ಪ ಅವರು ಸುಳ್ಳಿನ ಸರದಾರ ಅವರು ಏನೇ ಹೇಳಿ ಸುಳ್ಳು ಹೇಳುತ್ತಾರೆ ಎಂದು ಸಚಿವ ಶಿವರಾಜ ಎಸ್. ತಂಗಡಗಿ ಆರೋಪಿಸಿದರು.