ಆಪರೇಷನ್ ಕಮಲ: ಬಿಎಸ್ ವೈ ವಿರುದ್ಧ ವಿಚಾರಣೆಗೆ ಕೋರ್ಟ್ ಒಪ್ಪಿಗೆ

ಕಲಬುರ್ಗಿ, ಮಾ 31-ಬಿ.ಎಸ್.ಯಡಿಯೂರಪ್ಪ ಅವರ ವಿರುದ್ಧ ಅಪರೇಷನ್ ಕಮಲ ಆಡಿಯೊ ಪ್ರಕರಣಕ್ಕೆ ನೀಡಿದ್ದ ತಡೆಯಾಜ್ಞೆಯನ್ನು ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಇಂದು ತೆರವುಗೊಳಿಸಿದೆ.

ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು ವಿರೋಧ ಪಕ್ಷದ ನಾಯಕರಾಗಿದ್ದ ಸಂದರ್ಭದಲ್ಲಿ ರಾಯಚೂರು ಜಿಲ್ಲೆಯ ದೇವದುರ್ಗದಲ್ಲಿದ್ದಾಗ ಯಾದಗಿರಿ ಜಿಲ್ಲೆ ಗುರುಮಠಕಲ್‌ನ ಜೆಡಿಎಸ್‌ ಶಾಸಕ ನಾಗನಗೌಡ ಕಂದಕೂರ ಅವರನ್ನು ಬಿಜೆಪಿಗೆ ಸೆಳೆಯಲು ಯತ್ನಿಸಿದ್ದ ಆರೋಪಕ್ಕೆ ಗುರಿಯಾಗಿದ್ದರು.

ಈ ಕುರಿತ ಮೊಬೈಲ್ ಸಂಭಾಷಣೆಯ ಬಗ್ಗೆ ತನಿಖೆಗೆ ಒತ್ತಾಯಿಸಿ ನಾಗನಗೌಡ ಪುತ್ರ ಶರಣಗೌಡ ದೇವದುರ್ಗ ಪೊಲೀಸರಿಗೆ ದೂರು ನೀಡಿದ್ದರು.

ಈ ಪ್ರಕರಣದ ವಿಚಾರಣೆಗೆ ಕಲಬುರ್ಗಿ ಹೈಕೋರ್ಟ್‌ನ ನ್ಯಾಯಪೀಠವು ತಡೆಯಾಜ್ಞೆ ನೀಡಿ ನಂತರ ಪ್ರಕರಣವನ್ನು ಬೆಂಗಳೂರಿನ ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ವರ್ಗಾಯಿಸಿತ್ತು.

ಪ್ರಕರಣದ ವಿಚಾರಣೆ ನಡೆಸಿದ ಜನಪ್ರತಿನಿಧಿಗಳ ನ್ಯಾಯಾಲಯದ ನ್ಯಾಯಮೂರ್ತಿ ಮೈಕೆಲ್ ಕುನ್ಹಾ ಅವರು ತಡೆಯಾಜ್ಞೆ ತೆರವುಗೊಳಿಸಿದ್ದಾರೆ.

ಬಿ.ಎಸ್‌. ಯಡಿಯೂರಪ್ಪ ಪರವಾಗಿ ಹೈಕೋರ್ಟ್‌ ವಕೀಲರಾದ ಅಶೋಕ ಹಾರನಹಳ್ಳಿ, ಸಿ.ವಿ. ನಾಗೇಶ್ ಹಾಗೂ ಸರ್ಕಾರಿ ವಕೀಲರು ವಾದ ಮಂಡಿಸಿದರು. ಶರಣಗೌಡ ಪರವಾಗಿ ಪಿ.ರವಿವರ್ಮಕುಮಾರ್ ಹಾಗೂ ವಿಲಾಸಕುಮಾರ್ ವಾದ ಮಂಡಿಸಿದರು.