ಆಪರೇಷನ್ ಕಮಲಕ್ಕೆ ೫ ಶಾಸಕರೂ ಸಿಗಲ್ಲ: ಎಂಬಿಪಾ ವ್ಯಂಗ್ಯ

ಬೆಂಗಳೂರು, ಅ. ೧೮- ಆಪರೇಷನ್ ಕಮಲ ನಡೆಸಿ ಕಾಂಗ್ರೆಸ್ ಸರ್ಕಾರವನ್ನು ಬೀಳಿಸಿ ಬಿಜೆಪಿಗೆ ೬೫ ಶಾಸಕರು ಬೇಕು. ಅಷ್ಟು ಶಾಸಕರು ಸಿಗುತ್ತಾರಾ, ೫ ಶಾಸಕರು ಕೂಡಾ ಸಿಗಲ್ಲ ಎಂದು ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ವ್ಯಂಗ್ಯವಾಡಿದ್ದಾರೆ.
ಬಿಜೆಪಿಯ ಒಂದು ತಂಡ ಸರ್ಕಾರ ಬೀಳಿಸಲು ನಡೆಸಿರುವ ಪ್ರಯತ್ನದ ಬಗ್ಗೆ ಬೆಂಗಳೂರಿನಲ್ಲಿಂದು ಪ್ರತಿಕ್ರಿಯಿಸಿರುವ ಅವರು, ಆಪರೇಷನ್ ಕಮಲದ ನಂತರ ಬಿಜೆಪಿಯವರ ಕಥೆ ಏನಾಗಿದೆ ಗೊತ್ತಿದೆಯಲ್ಲ, ಬಿಜೆಪಿ ಮುಳುಗುತ್ತಿರುವ ಹಡಗಲ್ಲ, ಈಗಾಗಲೇ ಮುಳುಗಿರುವ ಹಡಗು ಎಂದು ಗೇಲಿ ಮಾಡಿದರು.
ಬಿಜೆಪಿಯಲ್ಲಿ ಈಗ ಏನೂ ಉಳಿದಿಲ್ಲ. ಸಂಪೂರ್ಣ ನಿರ್ನಾಮವಾಗಿದೆ. ಮಾಜಿ ಸಚಿವ ರೇಣುಕಾಚಾರ್ಯ ಅವರೇ ಬಿಜೆಪಿಯಲ್ಲಿ ನಾಯಕರಿಲ್ಲ ಎಂದು ಹೇಳಿದ್ದಾರೆ ಎಂದು ಅವರು ಹೇಳಿದರು.ಮಾಜಿ ಸಚಿವ, ಬಿಜೆಪಿ ಶಾಸಕರ ರಮೇಶ್ ಜಾರಕಿಹೊಳಿ ಮಾಜಿ ಮುಖ್ಯಮಂತ್ರಿ ಜಗದೀಶ್‌ಶೆಟ್ಟರ್ ಅವರನ್ನು ಭೇಟಿ ಮಾಡಿರುವುದು ರಾಜಕೀಯಕ್ಕೋ ಅಥವಾ ಅವರದ್ದು ವೈಯುಕ್ತಿಕ ಭೇಟಿಯೋ ನನಗೆ ಮಾಹಿತಿ ಇಲ್ಲ. ರಮೇಶ್ ಜಾರಕಿಹೊಳಿಗೆ ಕಾಂಗ್ರೆಸ್ ಸೇರುವ ಒಲವು ಇದ್ದರೂ ಇರಬಹುದು ಎಂದರು.
ಪಕ್ಷಕ್ಕೆ ಬರುವವರನ್ನು ಕಾಂಗ್ರೆಸ್‌ಗೆ ಸೇರಿಸಿಕೊಳ್ಳುವ ತೀರ್ಮಾನವನ್ನು ಹೈಕಮಾಂಡ್ ಮಾಡುತ್ತದೆ ಎಂದರು.
ಸಚಿವ ಸತೀಶ್ ವಿದೇಶ ಪ್ರವಾಸ: ಅನಗತ್ಯ ಚರ್ಚೆ ಬೇಡ
ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರು ೨೦ ಶಾಸಕರ ಜತೆ ಪ್ರವಾಸ ಹೋಗಲು ಸಿದ್ದವಿರುವುದಕ್ಕೆ ಬೇರೆ ಬೇರೆ ಅರ್ಥ ಕಲ್ಪಿಸುವುದು ಬೇಡ. ಅವರು ಮತ್ತು ಅವರ ಸ್ನೇಹಿತರು ವಿದೇಶ ಪ್ರವಾಸಕ್ಕೆ ಹೋದರೆ ತಪ್ಪೇನು, ಇದಕ್ಕೆಲ್ಲ ಏನೇನೋ ವ್ಯಾಖ್ಯಾನಗಳು ಬೇಡ ಎಂದರು.
ಐಟಿ ದಾಳಿಯ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು ಎಂಬ ಬಿಜೆಪಿ ಆಗ್ರಹದ ಬಗ್ಗೆ ಪ್ರತಿಕ್ರಿಯಿಸಿದ ಎಂ.ಬಿ. ಪಾಟೀಲ್ ಅವರು, ಸಿಬಿಐಗೆ ಕೊಡಬೇಕು ಎಂದಾದರೆ ಆದಾಯ ತೆರಿಗೆ ಇಲಾಖೆಯವರು ಕೊಡುತ್ತಾರೆ, ಎಲ್ಲವೂ ಬಿಜೆಪಿ ಕೈಯಲ್ಲೇ ಇದೆ. ಅವರೇ ಯಾವ ತನಿಖೆ ಬೇಕಾದರೂ ನಡೆಸಲಿ. ಐಟಿ ದಾಳಿಯಲ್ಲಿ ಪತ್ತೆಯಾದ ಹಣಕ್ಕೂ, ಕಾಂಗ್ರೆಸ್‌ಗೂ ಯಾವ ಸಂಬಂಧ ಇಲ್ಲ ಎಂದರು.