ಆಪರೇಷನ್‌ಗೆ ಕೈ-ಕಮಲ ಕಸರತ್ತು

ಬೆಂಗಳೂರು,ಮೇ೧೧:ರಾಜ್ಯ ವಿಧಾನಸಭಾ ಚುನಾವಣೆಯ ಮತಗಟ್ಟೆ ಸಮೀಕ್ಷೆಗಳಲ್ಲಿ ಈ ಬಾರಿ ಅತಂತ್ರ ವಿಧಾನಸಭೆ ರಚನೆಯಾಗುವ ಭವಿಷ್ಯ ಹೊರ ಬೀಳುತ್ತಿದ್ದಂತೆಯೇ ಶಾಸಕರನ್ನು ಸೆಳೆಯುವ ಆಪರೇಷನ್ ಸದ್ದು ಮಾಡುತ್ತಿದ್ದು, ಅತಂತ್ರ ವಿಧಾನಸಭೆ ರಚನೆಯಾದರೆ ಕಾಂಗ್ರೆಸ್ ಪಕ್ಷ ಆಪರೇಷನ್ ಹಸ್ತ ಬಿಜೆಪಿ ಆಪರೇಷನ್ ಕಮಲ ನಡೆಸುವ ಸಾಧ್ಯತೆಗಳನ್ನು ತಳ್ಳಿ ಹಾಕುವಂತಿಲ್ಲ.
ಒಂದು ವೇಳೆ ಅತಂತ್ರ ವಿಧಾನಸಭೆ ಸೃಷ್ಟಿಯಾದರೆ ಮತ್ತೆ ರಾಜ್ಯ ರಾಜಕೀಯದಲ್ಲಿ ರೆಸಾರ್ಟ್ ರಾಜಕೀಯ ವಿಜೃಂಬಿಸುವುದುನಿಶ್ಚಿತ. ಅಧಿಕಾರದ ಚೌಕಾಸಿಗಿಳಿಯುವ ರಾಜಕೀಯ ಪಕ್ಷಗಳು ಶಾಸಕರನ್ನು ಸೆಳೆಯುವ ಆಪರೇಷನ್‌ನಿಂದ ತಮ್ಮ ಪಕ್ಷಗಳ ಶಾಸಕರನ್ನು ಕಾಪಾಡಿಕೊಳ್ಳಲು ರೆಸಾರ್ಟ್‌ಗಳಿಗೆ ಶಾಸಕರನ್ನು ಕರೆದೊಯ್ಯುವ ಸಾಧ್ಯತೆಗಳು ಹೆಚ್ಚಿವೆ.
ಅತಂತ್ರ ವಿಧಾನಸಭೆ ಸೃಷ್ಟಿಯಾಗಿ ಸಮ್ಮಿಶ್ರ ಸರ್ಕಾರ ರಚಿಸುವ ತೀರ್ಮಾನಗಳಿಗೆ ಕಾಂಗ್ರೆಸ್, ಬಿಜೆಪಿ ಬಂದರೆ ಶಾಸಕರನ್ನು ಸೆಳೆಯುವ ಆಪರೇಷನ್ ಇರುವುದಿಲ್ಲ. ಆದರೆ, ಏಕಪಕ್ಷ ಸರ್ಕಾರ ರಚನೆ ಮಾಡೋಣ, ಸಮ್ಮಿಶ್ರ ಸರ್ಕಾರ ಗೊಡವೆ ಬೇಡ ಎಂಬ ತೀರ್ಮಾನಗಳನ್ನು ರಾಷ್ಟ್ರೀಯ ಪಕ್ಷಗಳು ಕೈಗೊಂಡರೆ ರಾಜ್ಯರಾಜಕೀಯದಲ್ಲಿ ಶನಿವಾರದಿಂದಲೇ ಶಾಸಕರ ಸೆಳೆಯುವ ಆಪರೇಷನ್ ಆರಂಭವಾಗುವುದು ನಿಶ್ಚಿತ.
ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳು ಅತಂತ್ರ ವಿಧಾನಸಭೆ ರಚನೆಯಾದರೆ ಬಹುಮತ ಪಡೆದು ಸರ್ಕಾರ ರಚನೆಗೆ ಏನೆಲ್ಲ ಮಾಡಬೇಕು ಎಂಬ ಬಗ್ಗೆ ತಂತ್ರಗಳನ್ನು ರೂಪಿಸುತ್ತಿದ್ದು, ಬಹುಮತದ ಸಂಖ್ಯೆ ತಲುಪಲು ಅನ್ಯ ಪಕ್ಷಗಳ ಶಾಸಕರನ್ನು ಸೆಳೆದು ಆಪರೇಷನ್ ಮಾಡುವ ಕಾರ್ಯಕ್ಕೆ ಸದ್ದಿಲ್ಲದೆ ಪ್ರಯತ್ನಗಳನ್ನು ಈಗಿನಿಂದಲೇ ನಡೆಸಿವೆ.
ಮತಗಟ್ಟೆ ಸಮೀಕ್ಷೆಗಳು ನಿಜವಾಗುವುದಿಲ್ಲ. ಈ ಹಿಂದಿನ ಸಮೀಕ್ಷೆಗಳು ಸುಳ್ಳಾಗಿವೆ. ನಮ್ಮ ಪಕ್ಷಕ್ಕೆ ಬಹುಮತ ಎಂದು ಬಿಜೆಪಿ, ಕಾಂಗ್ರೆಸ್ ನಾಯಕರು ಬಹಿರಂಗವಾಗಿ ಹೇಳುತ್ತಿರುವರಾದರೂ ಅತಂತ್ರ ವಿಧಾನಸಭೆಯ ಭೀತಿ ಕಾಂಗ್ರೆಸ್ ಹಾಗೂ ಬಿಜೆಪಿ ನಾಯಕರನ್ನು ಕಾಡುತ್ತಿದೆ. ಹಾಗಾಗಿ, ಒಳಗೊಳಗೆ ನಾಯಕರುಗಳು ಬಹುಮತ ಪಡೆಯಲು ಆಪರೇಷನ್ ನಡೆಸುವ ಬಗ್ಗೆ ಚಿಂತನೆ ನಡೆಸಿದ್ದಾರೆ.
ಈ ಹಿಂದೆ ಸಹ ಬಿಜೆಪಿ ಆಪರೇಷನ್ ಕಮಲ ನಡೆಸಿ ರಾಜ್ಯದಲ್ಲಿ ಎರಡು ಬಾರಿ ಅಧಿಕಾರದ ಗದ್ದುಗೆ ಏರಿದ್ದು, ಶಾಸಕರ ಆಪರೇಷನ್‌ನಲ್ಲಿ ಬಿಜೆಪಿ ಪಳಗಿದೆ. ಹಾಗಾಗಿ, ಕಾಂಗ್ರೆಸ್ ನಾಯಕರು ಈ ಬಾರಿ ಆಪರೇಷನ್ ಕಮಲಕ್ಕೆ ಅವಕಾಶ ಕೊಡಬಾರದು. ಬಿಜೆಪಿಗೆ ಎದಿರೇಟು ನೀಡಲು ಆಪರೇಷನ್ ಹಸ್ತ ಮಾಡಿ ಬಿಜೆಪಿ ಹಾಗೂ ಜೆಡಿಎಸ್‌ನಿಂದ ಶಾಸಕರನ್ನು ಸೆಳೆಯುವ ತಂತ್ರವನ್ನು ಹೆಣೆಯುತ್ತಿದ್ದಾರೆ ಎಂದು ಹೇಳಲಾಗಿದೆ.
ಶಾಸಕರನ್ನು ಹಿಡಿದಿಟ್ಟುಕೊಳ್ಳುವುದು ಸವಾಲು
ಅತಂತ್ರ ವಿಧಾನಸಭೆ ರಚನೆಯಾದರೆ ಶಾಸಕರುಗಳನ್ನು ಹಿಡಿದಿಟ್ಟುಕೊಳ್ಳುವುದು ರಾಜಕೀಯ ಪಕ್ಷಗಳಿಗೆ ಸವಾಲಾಗಲಿದೆ. ಆಪರೇಷನ್ ಕಮಲ, ಆಪರೇಷನ್ ಹಸ್ತಕ್ಕೆ ಜೆಡಿಎಸ್‌ನಿಂದ ಶಾಸಕರನ್ನು ಸೆಳೆಯುವ ಪ್ರಯತ್ನಗಳು ನಡೆಯುವ ಸಾಧ್ಯತೆಗಳು ಇರುವುದರಿಂದ ಜೆಡಿಎಸ್ ಹೆಚ್ಚು ಜಾಗರೂಕತೆ ವಹಿಸಿ ಶಾಸಕರ ಒಗ್ಗಟ್ಟನ್ನು ಕಾಪಾಡುವುದು ಸವಾಲಾಗಲಿದೆ ಎಂದು ಆ ಪಕ್ಷದ ನಾಯಕರೊಬ್ಬರು ಹೇಳಿದರು. ಹಾಗಾಗಿ, ಫಲಿತಾಂಶ ಹೊರಬಿದ್ದು, ಅತಂತ್ರ ವಿಧಾನಸಭೆ ಸೃಷ್ಟಿಯಾದರೆ ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳು ಶಾಸಕರನ್ನು ಕಾಪಾಡಿಕೊಳ್ಳಲು ರೆಸಾರ್ಟ್ ರಾಜಕೀಯಕ್ಕೆ ಮೊರೆ ಹೋಗುವ ಸಾಧ್ಯತೆಗಳಿವೆ. ಹಾಗಾಗಿ, ಕಾಂಗ್ರೆಸ್, ಬಿಜೆಪಿ, ಜೆಡಿಎಸ್‌ಗಳು ಈ ಚುನಾವಣೆಯಲ್ಲಿ ಬಹುತೇಕ ಗೆಲ್ಲುವ ತಮ್ಮ ಪಕ್ಷದ ಅಭ್ಯರ್ಥಿಗಳನ್ನು ಈಗಾಗಲೇ ಸಂಪರ್ಕಿಸಿ ಅವರನ್ನು ಹಿಡಿದಿಟ್ಟುಕೊಳ್ಳುವ ತಂತ್ರಗಳನ್ನು ರೂಪಿಸಿವೆ.
ಏನೇ ಆದರೂ ಅಂತಿಮವಾಗಿ ಅಧಿಕಾರವೇ ಮುಖ್ಯವಾಗುವುದರಿಂದ ಯಾವ ಯಾವ ಪಕ್ಷಗಳ ಶಾಸಕರು ಅಧಿಕಾರಕ್ಕಾಗಿ ಯಾವ ಪಕ್ಷದ ಕಡೆ ಮುಖ ಮಾಡುತ್ತಾರೋ ಹೇಳಲೂ ಬಾರದು. ಎಲ್ಲದಕ್ಕೂ ಮತ ಎಣಿಕೆ ನಡೆದು ಫಲಿತಾಂಶ ಪ್ರಕಟವಾಗುವ ಮೇ ೧೩ ಶನಿವಾರ ಉತ್ತರ ಸಿಗಲಿದೆ.

ಸೋಲು-ಗೆಲುವಿನ ಲೆಕ್ಕಾಚಾರ
ವಿಧಾನಸಭಾ ಚುನಾವಣೆಯ ಮತದಾನ ಮುಗಿಯುತ್ತಿದ್ದಂತೆಯೇ ಅಭ್ಯರ್ಥಿಗಳು, ಸೋಲು-ಗೆಲುವಿನ ಲೆಕ್ಕಾಚಾರದಲ್ಲಿ ತೊಡಗಿದ್ದಾರೆ. ಮತದಾನ ಪೂರ್ಣಗೊಂಡ ನಂತರ ತಮ್ಮ ಕ್ಷೇತ್ರದ ಯಾವ ಮತಗಟ್ಟೆಯಲ್ಲಿ ಎಷ್ಟು ಮತದಾನ ಆಗಿದೆ ಎಂಬ ಅಂಕಿ-ಅಂಶ ಆಧಾರದ ಮೇಲೆ ಅಭ್ಯರ್ಥಿಗಳು ಸೋಲು-ಗೆಲುವಿನ ಲೆಕ್ಕಾಚಾರದಲ್ಲಿ ನಿರತರಾಗಿದ್ದಾರೆ.
ಪ್ರತಿ ಕ್ಷೇತ್ರದಲ್ಲು ಅಭ್ಯರ್ಥಿಗಳು ತಮಗೆ ಹೆಚ್ಚಿನ ಒಲವಿರುವ ಪ್ರದೇಶಗಳು ಯಾವುದು. ಆ ಪ್ರದೇಶಗಳು ಯಾವ ಮತಗಟ್ಟೆ ವ್ಯಾಪ್ತಿಗೆ ಬರಲಿದೆ. ಆ ಮತಗಟ್ಟೆಯಲ್ಲಿ ಎಷ್ಟು ಮತದಾನವಾಗಿದೆ. ಈ ಮತಗಳಲ್ಲಿ ತಮಗೆ ಬಿದ್ದಿರುವ ಮತಗಳು ಎಷ್ಟಿರಬಹುದು ಎಂಬ ತಮ್ಮದೇ ಆದ ಲೆಕ್ಕಾಚಾರವನ್ನು ಹಾಕುತ್ತಿದ್ದು, ಇದನ್ನು ಆಧಾರವಾಗಿಟ್ಟುಕೊಂಡು ನಾನು ಗೆಲ್ಲುತ್ತೇನೆ ಎಂಬ ವಿಶ್ವಾಸದಲ್ಲಿ ಹಲವು ಅಭ್ಯರ್ಥಿಗಳು ಇದ್ದಾರೆ.
ಬೆಟ್ಟಿಂಗ್ ಜೋರು
ಮತದಾನ ಮುಗಿಯುತ್ತಿದ್ದಂತೆಯೇ ಹಲವೆಡೆ ಜನತೆ ಗೌಪ್ಯವಾಗಿ ಇಂತಹವರೇ ಗೆಲ್ಲುತ್ತಾರೆ ಎಂಬ ಬೆಟ್ಟಿಂಗ್‌ನ್ನು ಮಾಡುತ್ತಿದ್ದಾರೆ. ನಗರ ಪ್ರದೇಶಕ್ಕಿಂತ ಗ್ರಾಮೀಣ ಭಾಗದಲ್ಲೇ ಬೆಟ್ಟಿಂಗ್ ಜೋರಾಗಿದೆ. ಜನತೆ ತಮ್ಮದೇ ಆಗ ಲೆಕ್ಕಾಚಾರವನ್ನಿಟ್ಟುಕೊಂಡು ತಮ್ಮ ಕ್ಷೇತ್ರದಲ್ಲಿ ಇಂತಹವರೇ ಗೆಲ್ಲುತ್ತಾರೆ ಎಂಬ ಸವಾಲು ಪ್ರತಿ ಸವಾಲನ್ನು ನಡೆಸಿದ್ದಾರೆ.
ಮತಗಟ್ಟೆ ಸಮೀಕ್ಷೆಗಳನ್ನು ಆಧರಿಸಿ ಸಹ ಬೆಟ್ಟಿಂಗ್ ನಡೆಯುತ್ತಿದ್ದು, ಅತಂತ್ರ ವಿಧಾನಸಭೆ ಬರುವುದಿಲ್ಲ. ಯಾವುದಾದರು ಒಂದು ಪಕ್ಷದ ರಚನೆಯಾಗುತ್ತದೆ ಎಂಬ ಬಗ್ಗೆಯೂ ಬೆಟ್ಟಿಂಗ್‌ಗಳೂ ನಡೆದಿವೆ.