ಆನ್ ಲೈನ್ ಕ್ಲಾಸ್ ಬಗ್ಗೆ ವಿದ್ಯಾರ್ಥಿಗಳ ಅಪಸ್ವರ: ಕಾಲೇಜು ಆರಂಭ: ಡಿಸಿಎಂ

ಬೆಂಗಳೂರು,ನ.17-ಆನ್ʼಲೈನ್ ತರಗತಿಗಳ ಬಗ್ಗೆ ತೃಪ್ತಿ ಇಲ್ಲ ಎಂದು ವಿದ್ಯಾರ್ಥಿಗಳು ಹೇಳುತ್ತಲೇ ಇದ್ದರು. ಹೀಗಾಗಿ ಕಾಲೇಜು ಪ್ರಾರಂಭ ಮಾಡಲಾಗಿದೆ ಉಪ‌ಮುಖ್ಯಮಂತ್ರಿ ಡಾ.ಸಿ.ಎನ್ ಅಶ್ವಥ್ ನಾರಾಯಣ್ ಹೇಳಿದ್ದಾರೆ.

ಕಾಲೇಜು ಆರಂಭಕ್ಕೆ ಮುನ್ನ ಎಲ್ಲರಿಗೂ ಉಚಿತ ಕೋವಿಡ್ ಟೆಸ್ಟ್ ಮಾಡಲಾಗಿದೆ. ಯಾರು ಬೇಕಾದರೂ ಉಚಿತ ಟೆಸ್ಟ್ ಮಾಡಿಸಬಹುದು. ಸದ್ಯಕ್ಕೆ ಅಂತಿಮ ವರ್ಷದ ತರಗತಿಗಳನ್ನು ಆರಂಭಿಸಲಾಗಿದೆ ಎಂದರು.

ಕೋವಿಡ್-‌19 ಕಾರಣದಿಂದ 8 ತಿಂಗಳಿನಿಂದ ಬಂದ್‌ ಆಗಿದ್ದ ಸ್ನಾತಕೋತ್ತರ, ಪದವಿ, ಡಿಪ್ಲೊಮೋ ಅಂತಿಮ ವರ್ಷದ ವಿದ್ಯಾರ್ಥಿಗಳ ಭೌತಿಕ ತರಗತಿಗಳು ಆರಂಭವಾಗಿದ್ದು,ಮಹಾರಾಣಿ ಕಾಲೇಜಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಅವರು ಮಾತನಾಡಿದರು

ಪ್ರಥಮ, ದ್ವೀತಿಯ ವರ್ಷದ ಮಕ್ಕಳಿಗೆ ಕಾಂಟ್ಯಾಕ್ಟ್ ಕ್ಲಾಸ್ ಮಾಡಲಾಗುತ್ತಿದೆ. ಭೌತಿಕ ತರಗತಿಗಳಿಗೆ ಹಾಜರಾಗುವಂತೆ ಯಾರಿಗೂ ಒತ್ತಾಯ ನಾವು ಮಾಡುವುದಿಲ್ಲ. ಇಚ್ಚೆ ಇರುವವರು ಬರಬಹುದು. ಆದರೆ, ಕೊರೊನಾ ಟೆಸ್ಟ್ ರಿಪೋರ್ಟ್ ಅವರಲ್ಲಿ ಇರಬೇಕು ಅಷ್ಟೆ ಎಂದು ಅವರು ತಿಳಿಸಿದರು.

ಈಗ ಪದವಿ ಕಾಲೇಜುಗಳು ಪ್ರಾರಂಭವಾಗಿವೆ. ಇದರ ಸಾಧಕ -ಬಾಧಕ ನೋಡಿಕೊಂಡು ಶಾಲೆ- ಪದವಿಪೂರ್ವ ಕಾಲೇಜುಗಳನ್ನು ತೆರೆಯುವ ಬಗ್ಗೆ ಸರಕಾರ ಕ್ರಮ ಕೈಗೊಳ್ಳುತ್ತದೆ. ಈ ಬಗ್ಗೆ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಖಾತೆ ಸಚಿವರು ಮಾಹಿತಿ ನೀಡಲಿದ್ದಾರೆ ಎಂದರು.

ಉಳಿದಂತೆ ಅತಿಥಿ ಉಪನ್ಯಾಸಕರನ್ನು ಅವಶ್ಯಕತೆ ನೋಡಿಕೊಂಡು ನೇಮಕ ಮಾಡಿಕೊಳ್ಳಲಾಗುವುದು. ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗುವುದು. ಅಧ್ಯಾಪಕರ ವರ್ಗಾವಣೆಯ ಬಗ್ಗೆ ಕ್ಯಾಬಿನೆಟ್ʼನಲ್ಲಿ ಒಪ್ಪಿಗೆ ಸಿಕ್ಕಿದೆ. ಶೀಘ್ರವೇ ವರ್ಗಾವಣೆ ಪ್ರಕ್ರಿಯೆ ಪ್ರಾರಂಭ ಮಾಡಲಾಗುವುದು ಎಂದರು.

ಶೀಘ್ರವೇ ಸಿಇಟಿ ಕೌನ್ಸಿಲಿಂಗ್:

ವಿದ್ಯಾರ್ಥಿಗಳು ಮತ್ತು ಪೋಷಕರು ಎದುರು ನೋಡುತ್ತಿರುವ ಸಿಇಟಿ ಕೌನ್ಸಿಲಿಂಗ್ ಅನ್ನು ಶೀಘ್ರವೇ ನಡೆಸಲಾಗುವುದು. ಈಗಾಗಲೇ ಕೌನ್ಸೆಲಿಂಗ್‌ ಮುಗಿಯಬೇಕಿತ್ತು. ಕೋವಿಡ್‌ ಕಾರಣದಿಂದ ತಡವಾಯಿತು. ಆದಷ್ಟು ಬೇಗ ದಿನಾಂಕ ಪ್ರಕಟ ಮಾಡಲಾಗುವುದು ಎಂದು ಅವರು ಮಾಹಿತಿ ನೀಡಿದರು. ಮಹಾರಾಣಿ ಕ್ಲಸ್ಟರ್ ವಿಶ್ವವಿದ್ಯಾಲಯದ ಗೋಮತಿದೇವಿ, ಕಾಲೇಜು ಶಿಕ್ಷಣ ಇಲಾಖೆ ಆಯುಕ್ತ ಪಿ.ಪ್ರದೀಪ್ ಹಾಜರಿದ್ದರು