ಆನ್‌ಲೈನ್ ಶಿಕ್ಷಣ: ಶಾಲೆ ತೊರೆಯುತ್ತಿರುವ ಬಡ ಮಕ್ಕಳು

ತುಮಕೂರು, ನ. ೫- ಕೊರೊನಾ ಭಯದಲ್ಲಿ ನಡೆಯುತ್ತಿರುವ ಆನ್‌ಲೈನ್ ಕ್ಲಾಸ್‌ಗಳಿಂದ ಬಡವರು, ದಲಿತರು, ಅಲ್ಪಸಂಖ್ಯಾತರ ಮಕ್ಕಳು ಶಾಲೆಗಳನ್ನು ತೊರೆಯುತ್ತಿದ್ದು, ಈ ಕುರಿತು ಸದನದಲ್ಲಿ ಪ್ರಶ್ನಿಸಲಾಗುವುದು ಎಂದು ವಿಧಾನ ಪರಿಷತ್ ಸದಸ್ಯ ಹಾಗೂ ಕೆಎಂಸಿಸಿ ರಾಜ್ಯ ಕಾರ್ಯದರ್ಶಿ ಬಿ.ಎಂ. ಫಾರೂಕ್ ಹೇಳಿದರು.
ನಗರದ ಕ್ಯಾತ್ಸಂದ್ರದಲ್ಲಿ ನಡೆದ ಕರ್ನಾಟಕ ಮುಸ್ಲಿಂ ಕೋ ಆರ್ಡಿನೇಟ್ ಕಮಿಟಿ (ಕೆಎಂಸಿಸಿ) ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಆನ್‌ಲೈನ್ ಶಿಕ್ಷಣಕ್ಕೆ ಅಗತ್ಯವಿರುವ ಮೊಬೈಲ್, ಲ್ಯಾಪ್‌ಟ್ಯಾಪ್ ಇಲ್ಲದೆ ಅನೇಕ ಮಕ್ಕಳು ಶಿಕ್ಷಣವನ್ನೇ ತೊರೆದಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಪ್ರಸ್ತುತ ಕೊರೊನಾ ಇಡೀ ಜಗತ್ತಿನ ಎಲ್ಲ ಜನರನ್ನು ಭಯಭೀತರನ್ನಾಗಿ ಮಾಡಿದೆ. ಇದನ್ನು ನಾವು ಅರ್ಥ ಮಾಡಿಕೊಂಡು ಸರ್ಕಾರದ ನಿಯಮಗಳನ್ನು ಚಾಚೂ ತಪ್ಪದೆ ಪಾಲಿಸುವ ಮೂಲಕ ರೋಗದಿಂದ ದೂರ ಇರಬೇಕಾಗಿದೆ. ಪ್ರತಿಯೊಬ್ಬರು ಮಾಸ್ಕ್ ಧರಿಸುವುದು, ಸಾನಿಟೈಸರ್ ಬಳಸುವುದು, ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳುವ ಮೂಲಕ ಕೊರೊನಾ ರೋಗ ಸಮುದಾಯದಲ್ಲಿ ಹರಡದಂತೆ ನೋಡಿಕೊಳ್ಳಬೇಕಾಗಿದೆ ಎಂದು ಸಲಹೆ ನೀಡಿದರು.
ಕೊರೊನಾದಿಂದ ಶಿಕ್ಷಣ ಕ್ಷೇತ್ರದಲ್ಲಿ ಆಗಿರುವ ಬದಲಾವಣೆ, ಇದರಿಂದ ತೊಂದರೆಗೀಡಾಗಿರುವ ಮಕ್ಕಳು ಮತ್ತು ಪೋಷಕರು ಕುರಿತು ಸರ್ವೆ ಕಾರ್ಯ ನಡೆಯಬೇಕಿದೆ. ಆಗ ನಿಜವಾಗಿಯೂ ಎಷ್ಟು ಜನರು ತೊಂದರೆಗೆ ಒಳಗಾಗಿದ್ದಾರೆ ಎಂಬುದು ಗೊತ್ತಾಗುತ್ತದೆ. ಅಂತಹ ವರದಿಯನ್ನು ಮುಂದಿಟ್ಟುಕೊಂಡು ಅಗತ್ಯ ಪರಿಹಾರದ ಕ್ರಮಗಳನ್ನು ಕೈಗೊಳ್ಳಲು ಸಾಧ್ಯ. ಈ ನಿಟ್ಟಿನಲ್ಲಿ ವಿಧಾನ ಪರಿಷತ್ತಿನಲ್ಲಿ ಧ್ವನಿ ಎತ್ತುವುದಾಗಿ ಅವರು ಭರವಸೆ ನೀಡಿದರು.
ಸಭೆಯಲ್ಲಿ ಕೆ.ಎಂ.ಸಿ.ಸಿ. ಜಿಲ್ಲಾ ಉಪಾಧ್ಯಕ್ಷ ಮುಸ್ತಾಕ್ ಅಹಮದ್, ಪ್ರಧಾನ ಕಾರ್ಯದರ್ಶಿ ನವೀದ್ ಬೇಗ್, ನಿವೃತ್ತ ಕಂದಾಯಾಧಿಕಾರಿ ರಿಜ್ವಾನ್ ಪಾಷ, ಕೈಗಾರಿಕೋದ್ಯಮಿ ಬಿ.ಎಂ.ಹೈದರ ಆಲಿ, ರಾಜ್ಯದ ಹಿರಿಯ ಪದಾಧಿಕಾರಿ ಉಮರ್, ಯುವ ನಾಯಕ ಸೈಯದ್ ಷಾಹಿದ್ ಮತ್ತಿತರರು ಉಪಸ್ಥಿತರಿದ್ದರು.