ಆನ್‌ಲೈನ್ ಗೇಮಿಂಗ್, ಜೂಜು ನಿಷೇಧ

The Chief Minister of Karnataka, Shri Basavaraj Bommai calling on the Union Minister for Defence, Shri Rajnath Singh, in New Delhi on July 30, 2021.

ಬೆಂಗಳೂರು, ಸೆ. ೪- ರಾಜ್ಯದಲ್ಲಿ ಎಲ್ಲ ರೀತಿಯ ಆನ್‌ಲೈನ್ ಜೂಜನ್ನು ನಿಷೇಧಿಸುವ ಮಹತ್ವದ ನಿರ್ಧಾರವನ್ನು ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಕೈಗೊಳ್ಳಲಾಗಿದೆ.
ಇದಕ್ಕೆ ಸಂಬಂಧಿಸಿದಂತೆ ಪೊಲೀಸ್ ಕಾಯ್ದೆಗೆ ತಿದ್ದುಪಡಿ ತರುವ ತೀರ್ಮಾನವನ್ನು ಮಾಡಲಾಗಿದೆ.
ಮುಖ್ಯಮಂತ್ರಿ ಬಸವರಾಜಬೊಮ್ಮಾಯಿ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ರಾಜ್ಯದಲ್ಲಿ ಆನ್‌ಲೈನ್ ಜೂಜು ಮತ್ತು ಆನ್‌ಲೈನ್ ಗೇಮಿಂಗ್‌ಗಳನ್ನು ನಿಷೇಧಿಸುವ ತೀರ್ಮಾನ ಕೈಗೊಳ್ಳಲಾಗಿದೆ.
ಸಚಿವ ಸಂಪುಟ ಸಭೆಯ ನಂತರ ಸಂಪುಟದ ತೀರ್ಮಾನಗಳನ್ನು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಕಾನೂನು ಹಾಗೂ ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ. ಮಾಧುಸ್ವಾಮಿ ಅವರು, ರಾಜ್ಯದಲ್ಲಿ ಆನ್‌ಲೈನ್ ಜೂಜುಗಳನ್ನು ನಿಷೇಧಿಸುವ ತೀರ್ಮಾನ ಮಾಡಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ಪೊಲೀಸ್ ಕಾಯ್ದೆಗೆ ತಿದ್ದುಪಡಿ ತರಲು ಸಂಪುಟ ಒಪ್ಪಿಗೆ ನೀಡಿದೆ ಎಂದರು.
ಆನ್‌ಲೈನ್ ಜೂಜಾಟಗಳನ್ನು ನಿಷೇಧಿಸಬೇಕು ಎಂಬ ಸಾರ್ವಜನಿಕರ ಬೇಡಿಕೆ ಹಿನ್ನೆಲೆಯಲ್ಲಿ ಸಂಪುಟ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಮುಂಬರುವ ಅಧಿವೇಶನದಲ್ಲೆ ಪೊಲೀಸ್ ಕಾಯ್ದೆ ತಿದ್ದುಪಡಿ ವಿಧೇಯಕವನ್ನು ಮಂಡಿಸಲಾಗುವುದು ಎಂದು ಅವರು ಹೇಳಿದರು.
ಆನ್‌ಲೈನ್‌ನಲ್ಲಿ ಹಣ ಪಣ ಇಟ್ಟು ಆಡುವ ಜೂಜು, ಗೇಮ್‌ಗಳು ಎಲ್ಲವೂ ಈ ನಿಷೇಧದ ವ್ಯಾಪ್ತಿಯಲ್ಲಿ ಬರುತ್ತವೆ ಎಂದು ಅವರು ಹೇಳಿದರು.
ಆನ್‌ಲೈನ್‌ನಲ್ಲಿ ಯಾವುದೇ ರೀತಿಯ ಬೆಟ್ಟಿಂಗ್‌ಗಳನ್ನು ನೇರವಾಗಿ ಅಥವಾ ಪರೋಕ್ಷವಾಗಿ ಆಡುವಂತಿಲ್ಲ. ಎಲ್ಲ ರೀತಿಯ ಆನ್‌ಲೈನ್ ಜೂಜುಗಳನ್ನು ನಿಷೇಧಿಸುವ ತೀರ್ಮಾನ ಆಗಿದೆ. ಇದ ಕ್ಕೆ ಪೂರಕವಾಗಿ ಪೊಲೀಸ್ ಕಾಯ್ದೆಗೆ ತಿದ್ದುಪಡಿ ತಂದು ರಾಜ್ಯದಲ್ಲಿ ಆನ್‌ಲೈನ್ ಜೂಜಾಟವನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗುವುದು ಎಂದರು.
ಆನ್‌ಲೈನ್ ಜೂಜುಗಳನ್ನು ನಿರ್ಬಂಧಿಸುವ ಜತೆಗೆ ಅಕ್ರಮವಾಗಿ ಜೂಜಾಟ ನಡೆಸುವವರ ಮೇಲೆ ಕ್ರಮ ಕೈಗೊಳ್ಳಲು ಈ ಪೊಲೀಸ್ ಕಾಯ್ದೆಗೆ ತಿದ್ದುಪಡಿ ತರಲಾಗುತ್ತಿದೆ ಎಂದು ಅವರು ಹೇಳಿದರು.
ಕ್ಷೇತ್ರ ಪುನರ್ ವಿಂಗಡಣಾ ಆಯೋಗ
ರಾಜ್ಯದಲ್ಲಿ ಪಂಚಾಯ್ತಿ ವ್ಯವಸ್ಥೆಯಲ್ಲಿ ಕ್ಷೇತ್ರಗಳ ಪುನರ್ ವಿಂಗಡಣೆಗಾಗಿ ಪ್ರತ್ಯೇಕ ಪುನರ್ ವಿಂಗಡಣಾ ಆಯೋಗವನ್ನು ರಚಿಸಲು ಸಂಪುಟ ಸಭೆ ಒಪ್ಪಿಗೆ ನೀಡಿದೆ ಎಂದರು
ಈ ಮೊದಲು ರಾಜ್ಯ ಚುನಾವಣಾ ಆಯೋಗವೇ ಕ್ಷೇತ್ರಗಳ ಪುನರ್ ವಿಂಗಡಣೆ ನಡೆಸುತ್ತಿತ್ತು., ಈಗ ಕ್ಷೇತ್ರ ಪುನರ್ ವಿಂಗಡಣೆಗಾಗಿ ನಿವೃತ್ತ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳ ನೇತೃತ್ವದಲ್ಲಿ ಪ್ರತ್ಯೇಕ ಆಯೋಗವನ್ನು ರಚಿಸುವ ತೀರ್ಮಾನ ಕೈಗೊಳ್ಳಳಾಗಿದೆ ಎಂದರು.
ಈ ಮೊದಲು ಪಂಚಾಯ್ತಿ ವ್ಯವಸ್ಥೆಯ ಕ್ಷೇತ್ರಗಳ ಪುನರ್ ವಿಂಗಡಣೆಯಾದಾಗ ಅವುಗಳ ಬಗ್ಗೆ ತ ಕರಾರುಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಬೇಕಿತ್ತು. ಈಗ ಈ ಆಯೋಗದ ಮುಂದೆ ತಕರಾರು ಆಕ್ಷೇಪಗಳನ್ನು ಸಲ್ಲಿಸಲು ಅವಕಾಶ ಸಿಗುತ್ತದೆ ಎಂದರು.
ಕೇಂದ್ರದ ಕ್ಷೇತ್ರ ಪುನರ್ ವಿಂಗಡಣಾ ಆಯೋಗದ ಮಾದರಿಯಲ್ಲೇ ಈ ಆಯೋಗ ಕಾರ್ಯನಿರ್ವಹಿಸಲಿದ್ದು, ತಾಲ್ಲೂಕು, ಜಿಲ್ಲಾ ಪಂಚಾಯ್ತಿ ಹಾಗೂ ಗ್ರಾಮ ಪಂಚಾಯ್ತಿ ಕ್ಷೇತ್ರಗಳ ಪುನರ್ ವಿಂಗಡಣೆ ಬಗ್ಗೆ ತೀರ್ಮಾನ ಕೈಗೊಳ್ಳುತ್ತದೆ ಎಂದರು.