ಆನೇಕಲ್ ಬಳಿ ಕರಡಿ ಪ್ರತ್ಯಕ್ಷ ಸ್ಥಳೀಯರಲ್ಲಿ ಆತಂಕ

ಬೆಂಗಳೂರು, ಏ.೨೫- ಎರಡು ದಿನದ ಹಿಂದೆ ದೊಡ್ಡ ತೋಗೂರು ಬಳಿ ಕಾಣಿಸಿಕೊಂಡಿದ್ದ ಕರಡಿ ನಿನ್ನೆ ರಾತ್ರಿ ಆನೇಕಲ್ ತಾಲೂಕಿನ ಬೇಗಿಹಳ್ಳಿ ಬಳಿ ಪ್ರತ್ಯಕ್ಷವಾಗಿದ್ದು ಆತಂಕಕ್ಕೆ ಎಡೆಮಾಡಿಕೊಟ್ಟಿದೆ.
ಬೇಗಿಹಳ್ಳಿಯ ಪ್ಲೇಗು ಮಾರಮ್ಮ ದೇವಾಲಯದ ಬಳಿ ಕಾಣಿಸಿಕೊಂಡಿರುವ ಕರಡಿಯ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ರಾತ್ರಿ ಸುಮಾರು ೯ ಗಂಟೆ ಹೊತ್ತಿಗೆ ದೇವಾಲಯದ ಬಳಿ ಓಡಾಡಿದೆ. ಕೊರೊನಾ ನಡುವೆ ಜನರನ್ನು ಭಯಗೊಳಿಸುತ್ತಿರುವ ಕರಡಿಯನ್ನು ಸೆರೆ ಹಿಡಿಯಬೇಕೆಂದು ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ.
ಈ ಹಿಂದೆ ಮಾ.೨೮ರಂದು ಬನ್ನೇರುಘಟ್ಟ ಜೈವಿಕ ಉದ್ಯಾನವನದಿಂದ ಪರಾರಿಯಾಗಿದ್ದ ಕರಡಿ ಸೆರೆಯಾಗಿತ್ತು. ಏಪ್ರಿಲ್ ೯ರ ಬೆಳಿಗ್ಗೆ ಬನ್ನೇರುಘಟ್ಟ ಜೈವಿಕ ಉದ್ಯಾನವನದ ಸಿಬ್ಬಂದಿ ಉದ್ಯಾನವನ ವ್ಯಾಪ್ತಿಯ ಹುಚ್ಚನಕುಂಟೆ ಬಳಿ ಇರಿಸಿದ್ದ ಬೋನಿಗೆ ಕರಡಿ ಬಿದ್ದಿತ್ತು.
ಕರಡಿಯನ್ನು ಉದ್ಯಾನವನದ ರೆಸ್ಕ್ಯೂ ಸೆಂಟರ್?ನ ಬೋನಿನಲ್ಲಿಟ್ಟು ಆರೈಕೆ ಮಾಡಿ, ಕರಡಿ ಆರೋಗ್ಯವಾಗಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದರು.