ಆನೆ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ಪ್ಯಾಕೇಜ್

ಕೋಲಾರ,ಮೇ.೨೦:ಅಸಂಘಟಿತ ಕಾರ್ಮಿಕರು, ರೈತರಿಗೆ ಘೋಷಿಸಿರುವ ಪ್ಯಾಕೇಜ್ ಅನುದಾನವನ್ನು ಶೀಘ್ರ ತಲುಪಿಸುವ ಜೊತೆಗೆ ರೇಷ್ಮೆ
ಬೆಳೆಗಾರರಿಗೆ ನೆರವಿಗೆ ಧಾವಿಸಿ ಪ್ರತಿ ಕೆಜಿ ಗೂಡಿಗೆ ೪೦ರೂಗಳನ್ನು ಘೋಷಣೆ ಮಾಡಬೇಕೆಂದು ರೈತಸಂಘದ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಎ.ನಳಿನಿಗೌಡ ಆಗ್ರಹಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಕೋವಿಡ್ ಸಂಕಷ್ಟಕ್ಕೆ ಸಿಲುಕಿರುವ ಹಿನ್ನೆಲೆಯಲ್ಲಿ ಅಸಂಘಟಿತ ಕಾರ್ಮಿಕರು ಹಾಗೂ ರೈತರಿಗೆ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿರುವುದು ಸ್ವಾಗತಾರ್ಹವಾಗಿದೆ. ರೈತರ ಪ್ರತಿ ಹೆಕ್ಟೇರ್‍ಗೆ ೧೦ ಸಾವಿರರೂ ಘೋಷಿಸಿರುವುದು ಬಕಾಸುರನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ಎಂಬಂತಾಗಿದೆ.ಇಂತಹ ಪರಿಸ್ಥಿತಿಯಲ್ಲಿ ಬೆಳೆಗಳಿಗೆ ಸೂಕ್ತ ಬೆಲೆಯಿಲ್ಲದೆ ರಸ್ತೆಗಳಲ್ಲಿ ಸುರಿಯುತ್ತಿದ್ದುದನ್ನು ಕಂಡು ರೈತರ ನೆರವಿಗೆ ಬಂದಿರುವುದರಿಂದ ಕೊಂಚ ನೆಮ್ಮದಿ ತಂದಿದೆ. ಆದರೆ, ಕಳೆದ ಬಾರಿ ಘೋಷಿಸಿದ್ದ ಅನುದಾನವೇ ಇನ್ನೂ ತಲುಪದೇ ಇರುವುದು ರೈತರ ಆಕ್ರೋಶಕ್ಕೂ ಕಾರಣವಾಗಿದೆ ಎಂದು ಹೇಳಿದ್ದಾರೆ.ಕೊರೊನಾ ನಿಯಂತ್ರಣದ ಜೊತೆಗೆ ರೈತರ ರಕ್ಷಣೆಗೆ ಪ್ಯಾಕೇಜ್ ಘೋಷಿಸಿರುವುದರಲ್ಲಿ ನಮ್ಮ ಅಭ್ಯಂತರವಿಲ್ಲ. ಆದರೆ ರೇಷ್ಮೆ ಬೆಳೆಗಾರರ ನೆರವಿಗೆ ಬಾರದೆ ಕಡೆಗಣಿಸಿರುವುದು ಖಂಡನೀಯವಾಗಿದ್ದು, ರೇಷ್ಮೆಯನ್ನು ನಂಬಿ ಲಕ್ಷಾಂತರ ಕುಟುಂಬಗಳು ಜೀವನ ನಡೆಸುತ್ತಿವೆ. ಗೂಡಿನ ಬೆಲೆಯೂ ಕುಸಿದಿರುವುದರಿಂದಾಗಿ ಬೆಳೆಗಾರ ನೆರವಿಗೂ ಸರ್ಕಾರ ಬರಬೇಕಿದೆ.ಆ ನಿಟ್ಟಿನಲ್ಲಿ ಪ್ರತಿ ಕೆಜಿ ಗೂಡಿಗೆ ೪೦ರೂಗಳನ್ನು ಘೋಷಣೆ ಮಾಡುವ ಜೊತೆಗೆ ಇದೀಗ ಘೋಷಣೆ ಮಾಡಿರುವ ಅನುದಾನವನ್ನು ವಿಳಂಭ ಮಾಡದೆ ರೈತರಿಗೆ ನೀಡುವ ಕೆಲಸವನ್ನು ಅಧಿಕಾರಿಗಳು ತ್ವರಿತವಾಗಿ ನಡೆಸಬೇಕಿದೆ ಎಂದು ಆಗ್ರಹಿಸಿದ್ದಾರೆ.