ಆನೆ ದಾಳಿಗೆ ರೈತರಿಬ್ಬರ ಸಾವು ೧೫ ಲಕ್ಷ ರೂ. ಪರಿಹಾರ

ಬೆಂಗಳೂರು,ಜೂ.೩:ಆನೆ ದಾಳಿಯಿಂದ ರಾಮನಗರ ಜಿಲ್ಲೆಯಲ್ಲಿ ಇಬ್ಬರು ರೈತರು ಮೃತಪಟ್ಟಿರುವುದಕ್ಕೆ ಸಂತಾಪ ವ್ಯಕ್ತಪಡಿಸಿರುವ ಅರಣ್ಯ ಸಚಿವ ಈಶ್ವರಖಂಡ್ರೆ ಅವರು ಮೃತ ಕುಟುಂಬಗಳಿಗೆ ೧೫ ಲಕ್ಷ ರೂ. ಪರಿಹಾರ ಪ್ರಕಟಿಸಿದ್ದಾರೆ.
ರಾಮನಗರ ಜಿಲ್ಲೆಯ ಚೆನ್ನಪಟ್ಟಣ ತಾಲ್ಲೂಕು ವಿರೂಪಾಕ್ಷಪುರ ಹೋಬಳಿ ನಿರುಪಸಂದ್ರ ಗ್ರಾಮದಲ್ಲಿ ಮಾಇನ ತೋಟ ಕಾಯುತ್ತಿದ್ದ ವೀರಭದ್ರ (೪೦) ಇಂದು ನಸುಕಿನಲ್ಲಿ ಆನೆ ದಾಳಿಯಿಂದ ಮೃತಪಟ್ಟಿದ್ದಾರೆ. ಹಾಗೆಯೇ, ಮೊನ್ನೆ ಬಂಡೀಪುರದ ಮಳೆಯೂರು ಅರಣ್ಯ ಪ್ರದೇಶದಲ್ಲಿ ರೈತ ರವಿ (೪೦) ಎಂಬುವರು ಆನೆ ದಾಳಿಯಿಂದ ಮೃತಪಟ್ಟಿದ್ದು, ಈ ಇಬ್ಬರ ಸಾವಿಗೆ ಸಚಿವ ಈಶ್ವರಖಂಡ್ರೆ ಸಂತಾಪ ವ್ಯಕ್ತಪಡಿಸಿದ್ದಾರೆ.
ಆನೆ ದಾಳಿಯಲ್ಲಿ ಮೃತರಾದ ಈ ಇಬ್ಬರ ಕುಟುಂಬಗಳಿಗೆ ನಿಯಮಾನುಸಾರ ೧೫ ಲಕ್ಷ ರೂ. ಪರಿಹಾರ ಒದಗಿಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿರುವ ಸಚಿವರು, ದಾಳಿ ಇಟ್ಟಿರುವ ಆನೆಗಳನ್ನು ಕಾಡಿಗೆ ಕಳುಹಿಸಲು ಅರಣ್ಯಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಕಾಡುಪ್ರಾಣಿ ಮತ್ತು ಮಾನವ ಸಂಘರ್ಷವನ್ನು ತಡೆಗಟ್ಟಲು ರೈಲ್ವೆ ಕಂಬಿಗಳನ್ನು ಬಳಸಿ ಬ್ಯಾರಿಕೇಡ್ ನಿರ್ಮಿಸುವ ಅಗತ್ಯ ಹೆಚ್ಚಿದ್ದು, ಬಜೆಟ್‌ನಲ್ಲಿ ಬ್ಯಾರಿಕೇಡ್ ನಿರ್ಮಾಣಕ್ಕೆ ಹೆಚ್ಚಿನ ಅನುದಾನ ನೀಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯರವರನ್ನು ಕೋರುವುದಾಗಿ ತಿಳಿಸಿದ್ದಾರೆ.