ಆನೆ ದಂತ ಮಾರಾಟ ಮೂವರು ಸೆರೆ

ಬೆಂಗಳೂರು, ನ.೧೭; ಆನೆ ದಂತ ಮಾರಾಟ ಮಾಡಲು ಬಂದ ಮೂವರು ಆರೋಪಿಗಳನ್ನು ಬಂಧಿಸಿರುವ ಉತ್ತರ ವಿಭಾಗದ ಪೊಲೀಸರು, ೪ ಆನೆ ದಂತಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಆಂಧ್ರಪ್ರದೇಶದ ಚಿತ್ತೂರಿನ ವಾಯಿಲ್ಪಾಡ್ ಗುಟ್ಟಪಾಳ್ಯಂ ಕಲಿಕಿರಿಯ ಲೋಕೇಶ್ (೨೭), ಚಿತ್ತೂರು ಜಿಲ್ಲೆಯ ರಾಯಸಂದ್ರ, ಮದನಪಲ್ಲಿ ಪೂಲಾಕುಟ್ಟಪುರಂನ ಮಂಜುನಾಥ್ ಅಲಿಯಾಸ್ ಮಂಜ (೨೫) ಹಾಗೂ ಚಿತ್ತೂರು ಜಿಲ್ಲೆಯ ದಾಮಲಚರವು, ಶ್ರೀಹರಿಪುರಂನ ಗೋವಿ (೩೦) ಬಂಧಿತ ಆರೋಪಿಗಳಾಗಿದ್ದಾರೆ ಎಂದು ಡಿಸಿಪಿ ಧರ್ಮೇಂದ್ರ ಕುಮಾರ್ ಮೀನಾ ತಿಳಿಸಿದ್ದಾರೆ.
ಹೆಬ್ಬಾಳದ ಗುಡ್ಡದಹಳ್ಳಿ ಮುಖ್ಯರಸ್ತೆ ಟೆಂಪೋ ನಿಲ್ದಾಣದ ಬಳಿ ಮೂವರು ಆನೆ ದಂತವನ್ನು ಸಾರ್ವಜನಿಕರಿಗೆ ಮಾರಾಟ ಮಾಡಲು ಬಂದಿದ್ದಾರೆ ಎಂಬ ಖಚಿತ ಮಾಹಿತಿ ಪಡೆದ ಸಬ್ ಇನ್ಸ್ ಪೆಕ್ಟರ್ ಪುಷ್ಪ ಮುಗಳಿ ಮತ್ತು ಸಿಬ್ಬಂದಿ ನಿನ್ನೆ ಮಧ್ಯಾಹ್ನ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿ೧ ಆನೆ ದಂತವನ್ನು ವಶಪಡಿಸಿಕೊಂಡು ಆರೋಪಿಗಳನ್ನು ಹೆಚ್ಚಿನ ತನಿಖೆ ನಡೆಸಲಾಯಿತು.
ಆರೋಪಿಗಳು ರಿಂಗ್ ರಸ್ತೆಯ ಮರಳು ಸ್ಟ್ಯಾಂಡ್ ಬಳಿ ಇದನ್ನು ಹೆಚ್ಚಿನ ಆನೆ ದಂತಗಳನ್ನು ಇಟ್ಟುಕೊಂಡಿರುವುದಾಗಿ ನೀಡಿದ ಮಾಹಿತಿ ಮೇರೆಗೆ ಈ ಸ್ಥಳಕ್ಕೆ ಹೋಗಿ ಪರಿಶೀಲಿಸಿ, ಆರೋಪಿಗಳು ಇಟ್ಟಿದ್ದ ೩ ದಂತಗಳನ್ನು ವಶಕ್ಕೆ ಪಡೆದುಕೊಳ್ಳಲಾಯಿತು. ಒಟ್ಟು ೪ ಆನೆ ದಂತಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಪ್ರಮುಖ ಆರೋಪಿ ಲೋಕೇಶ್ ಗಾರೆ ಕೆಲಸ ಮಾಡಿಕೊಂಡಿದ್ದಾನೆ. ಆರೋಪಿ ಮಂಜುನಾಥ್ ಸದ್ಯ ಯಾವುದೇ ಕೆಲಸವಿಲ್ಲದೇ ಮನೆಯಲ್ಲಿದ್ದ. ಮತ್ತೊಬ್ಬ ಆರೋಪಿ ಗೋಪಿ ಎಂಬಾತ, ಲೋಕೇಶ್ ಜೊತೆಯಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದ. ಆರೋಪಿ ಲೋಕೇಶ್ ಗೆ ತಲೆ ಮರೆಸಿಕೊಂಡಿರುವ ಆರೋಪಿಗಳು ನಾಲ್ಕು ಆನೆ ದಂತೆಗಳನ್ನು ನೀಡಿದ್ದು, ಆ ಆನೆ ದಂತಗಳನ್ನು ಗಿರಾಕಿಗಳಿಗೆ ಹೆಚ್ಚಿನ ಬೆಲೆಗೆ ಮಾರಾಟ ಮಾಡಿ ಕೊಟ್ಟರೆ, ೫೦ ಸಾವಿರ ರೂ.ಕಮಿಷನ್ ನೀಡುವುದಾಗಿ ತಿಳಿಸಿದ್ದರು, ಅದರಂತೆ ನಾವು ಕಮೀಷನ್ ಹಣದ ಆಸೆಗಾಗಿ ಆನೆ ದಂತಗಳನ್ನು ಮಾರಾಟ ಮಾಡಲು ಬೆಂಗಳೂರಿಗೆ ತಂದಿರುವುದಾಗಿ ತಿಳಿಸಿದ್ದಾರೆ. ಈ ಪ್ರಕರಣದ ಪ್ರಮುಖ ಆರೋಪಿಗಳು ತಲೆ ಮರೆಸಿಕೊಂಡಿದ್ದು, ಆತನ ಪತ್ತೆ ಕಾರ್ಯ ಪ್ರಗತಿಯಲ್ಲಿದೆ.
ಪ್ರಕರಣದಲ್ಲಿ ಜೆ.ಸಿ.ನಗರ ಉಪ ವಿಭಾಗದ ಎಸಿಪಿ ರೀನಾ ಎನ್.ಸುವರ್ಣ ಅವರ ಮಾರ್ಗದರ್ಶನದಲ್ಲಿ ಹೆಬ್ಬಾಳ ಪೊಲೀಸ್ ಇನ್ಸ್ ಪೆಕ್ಟರ್ ಅಶ್ವತ್ಥ್ ಗೌಡ, ಪಿಎಸ್ ಐಗಳಾದ ರಾಜೇಶ್, ಪುಷ್ಪ ಮುಗಳಿ ಮತ್ತವರ ಸಿಬ್ಬಂದಿ ಕಾರ್ಯಾಚರಣೆ ನಡೆಸಿತ್ತು ಎಂದು ತಿಳಿಸಿದರು.

ಹವಾಸೃಷ್ಟಿಗಾಗಿ ಸ್ನೇಹಿತನ ಇರಿದು ಕೊಲೆ
ಬೆಂಗಳೂರು,ನ.೧೭-ಏರಿಯಾದಲ್ಲಿ ಹವಾ ಸೃಷ್ಟಿ ಮಾಡಬೇಕೆನ್ನುವ ಕಾರಣಕ್ಕೆ ಗೆಳೆಯನನ್ನೇ ಭೀಕರವಾಗಿ ಕೊಲೆ ಮಾಡಿದ ಯುವಕನಿಗಾಗಿ ಗಂಗಮ್ಮನ
ಗುಡಿ ಪೊಲೀಸರು ತೀವ್ರ ಶೋಧ ನಡೆಸಿದ್ದಾರೆ ಗಂಗಮ್ಮನಗುಡಿಯ ಕಾರ್ತಿಕ್ ಹತ್ಯೆಯಾದ ಯುವಕ. ಆತನ ಸ್ನೇಹಿತ ಅಶೋಕ್ ಹಾಗೂ ಆತನ
ಸಹಚರರಿಂದ ಕೃತ್ಯ ನಡೆದಿದ್ದುಅವರ ಬಂಧನಕ್ಕೆ ಶೋಧ ನಡೆಸಲಾಗಿದೆ ಎಂದು ಡಿಸಿಪಿ ಧರ್ಮೇಂದ್ರ ಕುಮಾರ್ ಮೀನಾ ತಿಳಿಸಿದ್ದಾರೆ.
ಹತ್ಯೆಯಾದ ಕಾರ್ತಿಕ್ ಹಾಗೂ ಹಂತಕ ಅಶೋಕ್ ಒಂದೇ ಗ್ಯಾಂಗ್‌ನ ಸದಸ್ಯರು. ಇಬ್ಬರ ಮಧ್ಯೆ ಹವಾ ಸೃಷ್ಟಿ ಮಾಡುವ ವಿಚಾರಕ್ಕೆ ಆಗಾಗ ಜಗಳ ನಡೆಯುತ್ತಲೇ ಇತ್ತು. ನಿನ್ನೆ ಮಧ್ಯಾಹ್ನ ಎಲ್ಲರೂ ಮದ್ಯದ ಪಾರ್ಟಿ ಮಾಡಿದ್ದಾರೆ. ಈ ವೇಳೆ ಏರಿಯಾದಲ್ಲಿ ಯಾರು ಹವಾ ಇರಬೇಕು ಎನ್ನುವ ವಿಚಾರದಲ್ಲಿ ಗಲಾಟೆ ಆರಂಭವಾಗಿದೆ. ಕೊನೆಗೆ ತರಕಾರಿ ಕತ್ತರಿಸುವ ಚಾಕುವಿನಿಂದ ಕಾರ್ತಿಕ್‌ನನ್ನು ಅಶೋಕ್ ಬರ್ಬರವಾಗಿ ಕೊಲೆ ಮಾಡಿದ್ದಾರೆ.
ಸ್ಥಳಕ್ಕೆ ಧಾವಿಸಿದ ಗಂಗಮ್ಮನಗುಡಿ ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿ ಆರೋಪಿಗಳಾಗಿ ತೀವ್ರ ಶೋಧ ನಡೆಸಿದ್ದಾರೆ ಎಂದರು.

ಸ್ನೇಹಿತನ ಕೊಲೆ ಮೂವರ ಬಂಧನ
ಬೆಂಗಳೂರು,ನ.೧೭-ಕುಡಿದು ಅಮಲಿನಲ್ಲಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಮಾನಸಿಕ ಹಿಂಸೆ ನೀಡುತ್ತಿದ್ದುದನ್ನು ತಡೆಯಲಾಗದೇ ಸಹಚರನನ್ನು ಮಾರಕಾಸ್ತ್ರಗಳಿಂದ ಬರ್ಬರವಾಗಿ ಹತ್ಯೆ ಮಾಡಿದ ಮೂವರು ಆರೋಪಿಗಳನ್ನು ಗಂಗಮ್ಮನ ಗುಡಿ ಪೊಲೀಸರು ಬಂಧಿಸಿದ್ದಾರೆ.
ಗಂಗಮ್ಮನಗುಡಿಯ ಅಶೋಕ್, ಸುಜೀನ್ ಕುಮಾರ್ ಹಾಗೂ ಸುಮಿತ್ ಬಂಧಿತ ಆರೋಪಿಗಳಾಗಿದ್ದಾರೆ.
ಕೊಲೆಯಾದ ಕಾರ್ತಿಕ್ ಹಾಗೂ ಆರೋಪಿಗಳು ಒಂದೇ ಏರಿಯಾದಲ್ಲಿ ವಾಸವಾಗಿದ್ದರು. ಆಗಾಗ ಕುಡಿದ ನಶೆಯಲ್ಲಿ ಕಾರ್ತಿಕ್, ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿದ್ದ. ಹಲವು ಬಾರಿ ಇದೇ ವರ್ತನೆ ತೋರುತ್ತಿದ್ದ. ಇದೇ ರೀತಿ ನಿನ್ನೆ ಸಹ ಮದ್ಯ ಪಾರ್ಟಿ ಮಾಡಿದ್ದ. ಸಣ್ಣ ವಿಷಯಕ್ಕೆ ಕಾರ್ತಿಕ್, ತನ್ನ ಸಹಚರರೊಂದಿಗೆ ಕ್ಯಾತೆ ತೆಗೆದಿದ್ದಾನೆ. ಇದರಿಂದ ಅಸಮಾಧಾನಗೊಂಡ ಆರೋಪಿಗಳು ತರಕಾರಿ ಕತ್ತರಿಸುವ ಚಾಕುವಿನಲ್ಲಿ ಚುಚ್ಚಿ ಕೊಲೆ ಮಾಡಿ ಪರಾರಿಯಾಗಿದ್ದರು.
ಈ ಸಂಬಂಧ ಕೊಲೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಕೊಲೆಯಾದ ೨೪ ಗಂಟೆಗೊಳಗೆ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ ಎಂದು ಉತ್ತರ ವಿಭಾಗದ ಪೊಲೀಸ್ ಆಯುಕ್ತ ಧರ್ಮೇಂದ್ರ ಕುಮಾರ್ ಮೀನಾ ತಿಳಿಸಿದ್ದಾರೆ.

ಯುವಕನಿಗೆ ಪಂಗನಾಮ ಹಾಕಿದ ಕಾಲ್‌ಗರ್ಲ್
ಬೆಂಗಳೂರು,ನ.೧೭-ಜಾಹೀರಾತು ನೋಡಿ ಕಂಪನಿಯೊಂದಕ್ಕೆ ಕರೆ ಮಾಡಿ ವೇಶ್ಯೆಯನ್ನ ಮನೆಗೆ ಕರೆಸಿಕೊಂಡ ಯುವಕನೋರ್ವ ೯೭ ಸಾವಿರ ರೂಪಾಯಿ ಕಳೆದುಕೊಂಡು ವಂಚನೆ ಗೊಳಗಾಗಿ ವೈಟ್ ಫೀಲ್ಡ್ ಪೊಲೀಸರಿಗೆ ದೂರು ನೀಡಿದ್ದಾನೆ.
ನಗರದ ಖಾಸಗಿ ಕಂಪನಿಯೊಂದರ ಉದ್ಯೋಗಿ ವೈಟ್ ಫೀಲ್ಡ್ ನ ಸತೀಶ್ (ಹೆಸರು ಬದಲಾಯಿಸಲಾಗಿದೆ) ಹಣ ಕಳೆದುಕೊಂಡು ಇಂಗು ತಿಂದ ಮಂಗನಂತಾಗಿದ್ದಾನೆ.
ಕಳೆದ ೧೪ರಂದು ಕೊಕಂಟೊ ಆಪ್‌ನಲ್ಲಿ ಜಾಹೀರಾತು ನೋಡಿದ ಸತೀಶ್ ಮನೆಗೆ ಕಾಲ್ ಗರ್ಲ್ ಕರೆ ನೀಡಿದ್ದ. ಅದರಂತೆ ವೇಶ್ಯೆ ಮನೆಗೆ ಬಂದಿದ್ದು, ಬಳಿಕ ಮುಂಗಡವಾಗಿ ೧೦ ಸಾವಿರ ರೂ. ಹಣ ಆನ್‌ಲೈನ್‌ನಲ್ಲಿ ಹಾಕಿಸಿಕೊಂಡಿದ್ದಾಳೆ. ನಂತರ ತಾನು ಎನ್‌ಜಿಓ ಅಧಿಕಾರಿ ಎಂದು ಹೇಳಿ, ಕೇಳಿದಷ್ಟು ಹಣ ಕೊಡದಿದ್ದರೆ ತನ್ನ ಮೇಲೆ ಅತ್ಯಾಚಾರ ಮಾಡಿರುವುದಾಗಿ ಪೊಲೀಸರಿಗೆ ದೂರು ನೀಡುವುದಾಗಿ ಬ್ಲಾಕ್‌ಮೇಲ್ ಮಾಡಿದ್ದಾಳೆ.
ಇದರಿಂದ ಆತಂಕಕ್ಕೆ ಒಳಗಾದ ಸತೀಶ್, ಈಕೆಯ ಮ್ಯಾನೇಜರ್‌ಗೆ ಕರೆ ಮಾಡಿದ್ದಾನೆ. ಮನೆಯಲ್ಲಿ ಒಪ್ಪಂದ ಮಾಡಿಕೊಂಡರೆ ೨ ಲಕ್ಷ, ಪೊಲೀಸ್ ಠಾಣೆಗೆ ಹೋದರೆ ೫ ಲಕ್ಷ ರೂ. ಆಗಲಿದೆ ಎಂದು ಮ್ಯಾನೇಜರ್ ಹೇಳಿದ್ದಾನೆ. ಇದರಿಂದ ದಂಗಾದ ಯುವಕ ಕಾಲ್ ಗರ್ಲ್ ಹೇಳಿದಂತೆ ಮೊಬೈಲ್‌ನಿಂದ ಹಂತ ಹಂತವಾಗಿ ೫೦, ೨೦ ಹಾಗೂ ೧೭ ಸಾವಿರ ರೂ.ಗಳನ್ನು ಮ್ಯಾನೇಜರ್ ಅಕೌಂಟ್‌ಗೆ ವರ್ಗಾಯಿಸಿದ್ದಾನೆ.
ಬಳಿಕ ವೇಶ್ಯೆ ಅಲ್ಲಿಂದ ಕಾಲ್ಕಿತ್ತಿದ್ದಾಳೆ. ಒಟ್ಟಾರೆ ೯೭ ಸಾವಿರ ರೂ. ಕಳೆದುಕೊಂಡ ಸತೀಶ್ ವೈಟ್ ಫೀಲ್ಡ್ ಠಾಣೆಗೆ ದೂರು ನೀಡಿದ್ದಾನೆ ಪ್ರಕರಣ ದಾಖಲಿಸಿರುವ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

ಅತ್ಯಾಚಾರ ಆರೋಪ ಪಿಎಸ್‌ಐ ಸಸ್ಪೆಂಡ್
ಬೆಂಗಳೂರು,ನ.೧೭-ಅತ್ಯಾಚಾರ ದೂರಿನ ಹಿನ್ನೆಲೆಯಲ್ಲಿ ಚಾಮರಾಜಪೇಟೆ ಪೊಲೀಸ್ ಠಾಣೆ ಸಬ್ ಇನ್ಸ್‌ಪೆಕ್ಟರ್ (ಪಿಎಸ್‌ಐ) ವಿಶ್ವನಾಥ್ ಬಿರಾದರ್ ಅಮಾನತು ಮಾಡಲಾಗಿದೆ. ದಕ್ಷಿಣ ಕನ್ನಡ ಜಿಲ್ಲಾ ಎಸ್‌ಪಿ ನೀಡಿದ ವರದಿ ಮೇರೆಗೆ ಪೊಲೀಸ್ ಇಲಾಖೆಯು ವಿಶ್ವನಾಥ್ ಬಿರಾದರ್ ರನ್ನು ಅಮಾನತು ಮಾಡಿ ಆದೇಶ ಹೊರಡಿಸಿದೆ.
ಲ್ಯಾಪ್‌ಟಾಪ್ ಕಳುವಾಗಿರುವ ಸಂಬಂಧ ದೂರು ನೀಡಲು ಚಾಮರಾಜಪೇಟೆ ಪೊಲೀಸ್ ಠಾಣೆಗೆ ಬಂದಿದ್ದ ಯುವತಿಗೆ ಅಲ್ಲಿ ಪಿಎಸ್‌ಐ ವಿಶ್ವನಾಥ ಬಿರಾದಾರ್ ಪರಿಚಯವಾಗಿ ಸ್ನೇಹಕ್ಕೆ ತಿರುಗಿ, ಪ್ರೇಮಕ್ಕೆ ತಿರುಗಿ ವಿವಾಹದ ಹಂತಕ್ಕೆ ಬಂದಾಗ ಹೀಗಾಗಿರಬೇಕೆಂಬ ಗುಮಾನಿಯೂ ಇದೆ.
ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ನವೆಂಬರ್ ೧೧ರಂದು ಎರಡು ಪ್ರತ್ಯೇಕ ಪ್ರಕರಣ ದಾಖಲಾಗಿವೆ. ಯುವತಿ ಮತ್ತು ಬಿರಾದಾರ್ ಪರಸ್ಪರ ದೂರು ದಾಖಲಿಸಿಕೊಂಡಿದ್ದಾರೆ.
ಯುವತಿಯ ದೂರಿನ ಪ್ರಕಾರ, ನ. ೯ರಂದು ಯುವತಿಯನ್ನು ಬಿರಾದಾರ್ ಧರ್ಮಸ್ಥಳಕ್ಕೆ ಕರೆದುಕೊಂಡು ಹೋಗಿ ಲಾಡ್ಜ್‌ನಲ್ಲಿ ಉಳಿದುಕೊಂಡಿದ್ದರು. ಮದುವೆಯಾಗುವುದಾಗಿ ನಂಬಿಸಿ ಕರೆದೊಯ್ಯಲಾಗಿತ್ತು. ಲಾಡ್ಜ್‌ನಲ್ಲಿ ತಂಗಿದ್ದ ವೇಳೆ ಅತ್ಯಾಚಾರವೆಸಗಿ ಮದುವೆ ಆಗದೇ ಅಲ್ಲಿಂದ ವಾಪಸಾಗಿದ್ದಾರೆ ಎಂಬ ಆರೋಪವಿದೆ.
ಬಿರಾದಾರ್ ದೂರಿನ ಪ್ರಕಾರ, ಯುವತಿ ಮದುವೆಯಾಗುವಂತೆ ಒತ್ತಾಯಿಸಿದ್ದಳು. ಮದುವೆಗೆ ಒಪ್ಪದಿದ್ದಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವೆ ಎಂದು ಬೆದರಿಕೆ ಒಡ್ಡಿದ್ದಲ್ಲದೆ, ಹತ್ತು ಲಕ್ಷ ರೂಪಾಯಿ ಕೊಡಬೇಕೆಂಬ ಬೇಡಿಕೆಯನ್ನೂ ಇಟ್ಟಿದ್ದಳು. ಒಂದೊಮ್ಮೆ ಹಣ ನೀಡದೇ ಹೋದರೆ ರೇಪ್ ಕೇಸ್ ಹಾಕುವುದಾಗಿ ಬೆದರಿಸಿದ್ದಾಗಿ ಆರೋಪವಿದೆ.

ಗುಂಡಿಕ್ಕಿ ಪತ್ನಿ ಹತ್ಯೆ : ಸೆಕ್ಯೂರಿಟಿಗಾರ್ಡ್ ಆತ್ಮಹತ್ಯೆ ಯತ್ನ
ಬೆಂಗಳೂರು,ನ.೧೭- ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಪತ್ನಿಯನ್ನು ಗುಂಡಿಟ್ಟು ಕೊಲೆ ಮಾಡಿದ ಪತಿಯು ಬಳಿಕ ತಾನು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಬಸವೇಶ್ವರನಗರದಲ್ಲಿ ನಡೆದಿದೆ. ಬಸವೇಶ್ವರನಗರದ ಸುಮಿತ್ರಾ ಕೊಲೆಯಾದ ಮಹಿಳೆಯಾದವರು,ಅವರ ಪತಿ ಕಾಳಪ್ಪ ಆತ್ಮಹತ್ಯೆ ಯತ್ನಿಸಿದ್ದು ಸ್ಥಳೀಯರು ಬಿಡಿಸಿದ್ದು ಆತನನ್ನು ಬಂಧಿಸಲಾಗಿದೆ ಎಂದು ಡಿಸಿಪಿ ಸಂಜೀವ್ ಪಾಟೀಲ್ ತಿಳಿಸಿದ್ದಾರೆ.
ಆರೋಪಿ ಕಲ್ಲಪ್ಪ ಸಿಂಗಲ್ ಬ್ಯಾರೆಲ್ ಗನ್‌ನಿಂದ ಗುಂಡಿಕ್ಕಿ ಕಲ್ಲಪ್ಪ ಪತ್ನಿಯನ್ನು ಹತ್ಯೆಗೈದಿದ್ದಾನೆ. ಜಿಎಂಎಸ್ ಸೆಕ್ಯೂರಿಟಿ ಏಜೆನ್ಸಿಯಲ್ಲಿ ಎಟಿಎಂಗಳಿಗೆ ಹಣ ತುಂಬುತ್ತಿದ್ದ ವಾಹನಗಳಲ್ಲಿ ಆರೋಪಿ ಕಲ್ಲಪ್ಪ ಸೆಕ್ಯೂರಿಟಿಯಾಗಿ ಕೆಲಸ ಮಾಡುತ್ತಿದ್ದ. ಆದರೆ ಕೆಲ ದಿನಗಳಿಂದ ಆರೋಪಿ ಕೆಲಸ ಕಳೆದುಕೊಂಡಿದ್ದ.
ಇದರಿಂದ ಹತಾಶನಾಗಿ ಯಾವಾಗಲೂ ಕುಡಿಯುತ್ತಿದ್ದ. ಅಲ್ಲದೆ ಪತ್ನಿಯ ಮೇಲೆ ಅನುಮಾನ ಪಡುತ್ತಿದ್ದ. ಇದೇ ವಿಚಾರವಾಗಿ ಹಲವು ಬಾರಿ ಇಬ್ಬರ ಮಧ್ಯೆ ಜಗಳವಾಗುತ್ತಿತ್ತು. ನಿನ್ನೆ ಬೆಳಿಗ್ಗೆ ಇಬ್ಬರು ಜಗಳಮಾಡಿಕೊಂಡು ಬಡಿದಾಡ ನಡೆದಿದ್ದು ಈ ವೇಳೆ ಸಿಟ್ಟಿಗೆದ್ದ ಕಲ್ಲಪ್ಪ ಬಂದೂಕಿನಿಂದ ಪತ್ನಿಯ ಮೇಲೆ ಗುಂಡು ಹಾರಿಸಿ ಕೊಲೆ ಮಾಡಿದ್ದಾನೆ.
ಪತ್ನಿಯನ್ನು ಹತ್ಯೆಗೈದ ನಂತರ ತಾನೂ ಗುಂಡುಹಾರಿಸಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದ. ಆದರೆ ಸ್ಥಳೀಯರು ಬಿಡಿಸಿದ್ದಾರೆ. ಬಳಿಕ ಪೊಲೀಸರಿಗೆ ಮಾಹಿತಿ ತಿಳಿಸಿದ್ದು, ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಬಸವೇಶ್ವರ ನಗರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು. ಕಾಳಪ್ಪ ಬಳಿಯಿದ್ದ ಗನ್ ಪರವಾನಗಿ ಪಡೆದಿದ್ದನು. ಕೊಲೆಗೆ ಕಾರಣಗಳೇನು ಎಂಬುದರ ಬಗ್ಗೆ ಪ್ರಕರಣ ದಾಖಲಿಸಿ ತನಿಖೆ ನಡೆಸಲಾಗಿದೆ