ಆನೆ ಗಣತಿ: ಎರಡನೇ ದಿನ ಲದ್ದಿ ಮೂಲಕ ಆನೆ ಲೆಕ್ಕಾಚಾರ

ಸಂಜೆವಾಣಿ ವಾರ್ತೆ
ಚಾಮರಾಜನಗರ, ಮೇ.25- ಗಡಿ ಜಿಲ್ಲೆಯಲ್ಲಿ ಆನೆ ಗಣತಿ ಎರಡನೇ ದಿನವೂ ಮುಂದುವರೆದಿದೆ. ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ, ಬಿಳಿಗಿರಿ ರಂಗನಾಥ ದೇವಾಲಯ ಹುಲಿ ಸಂರಕ್ಷಿತ ಪ್ರದೇಶ, ಮಲೆ ಮಹದೇಶ್ವರ ವನ್ಯಜೀವಿ ಧಾಮ ಮತ್ತುಕಾವೇರಿ ವನ್ಯ ಜೀವಿಧಾಮ ವ್ಯಾಪ್ತಿಯಲ್ಲಿ ಗಜಗಣತಿ ನಡೆದಿದೆ.
ಮೊದಲ ದಿನ 15 ಕಿ.ಮೀ ವ್ಯಾಪ್ತಿಯಲ್ಲಿ ಆನೆಗಳ ಗುಂಪು, ಒಂಟಿ ಆನೆಗಳನ್ನು ನೇರವಾಗಿ ಕಂಡು ಗಣತಿ ನಡೆದಿದ್ದು, ಎರಡನೇ ದಿನವಾದ ಶುಕ್ರವಾರ ಲದ್ದಿ ಮೂಲಕ ಆನೆ ಲೆಕ್ಕಾಚಾರ ಮಾಡಲಾಗಿದೆ.
ಪ್ರತಿ ಬೀಟ್‍ನ ಎರಡು ಕಿ.ಮೀಗಳ ವ್ಯಾಪ್ತಿಯಲ್ಲಿ ಆನೆ ಹಾಕಿರುವ ಲದ್ದಿ ಪರಿಶೀಲಿಸಿ ಆನೆಯ ಗಾತ್ರ, ಮರಿಯಾನೆಯಾ, ಗುಂಪಿನಲ್ಲಿರುವ ಆನೆಗಳಾ ಎಂಬುದರ ಅಂದಾಜು ಮಾಡಲಾಗಿದೆ. ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಒಟ್ಟು 13 ವಲಯದ 113 ಬೀಟ್‍ಗಳು, ಕಾವೇರಿ ವನ್ಯಜೀವಿ ಧಾಮದ 43 ಬೀಟ್‍ಗಳು, ಬಿಳಿಗಿರಿ ರಂಗನಾಥ ದೇವಾಲಯ ಹುಲಿ ಸಂರಕ್ಷಿತ ಪ್ರದೇಶ ಹಾಗೂ ಮಲೆಮಹದೇಶ್ವರ ವನ್ಯ ಜೀವಿಧಾಮದಲ್ಲಿ ಗಣತಿ ಕಾರ್ಯ ನಡೆಯುತ್ತಿದ್ದು, ಇಂದು ಅಂತ್ಯವಾಗಲಿದೆ.
ಜಿಲ್ಲೆಯಲ್ಲಿ ನಿನ್ನೆಯಿಂದ ಗಜಗಣತಿ ಆರಂಭ: ಇನ್ನು ಜಿಲ್ಲೆಯಲ್ಲಿ ಅರಣ್ಯ ಇಲಾಖೆಯು ನಿನ್ನೆಯಿಂದ(ಗುರುವಾರ) ಮೂರು ದಿನಗಳ ಗಜಗಣತಿ ಆರಂಭಿಸಿತ್ತು. ನಿನ್ನೆ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ, ಬಿಳಿಗಿರಿ ರಂಗನಾಥ ದೇವಾಲಯ ಹುಲಿ ಸಂರಕ್ಷಿತ ಪ್ರದೇಶ ಹಾಗೂ ಕಾವೇರಿ ವನ್ಯಜೀವಿ ಧಾಮದಲ್ಲಿ ಮೊದಲ ದಿನ ಸಿಬ್ಬಂದಿ ಗಣತಿ ಕಾರ್ಯ ನಡೆಸಿದ್ದರು.
ನಿನ್ನೆ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಒಟ್ಟು 13 ವಲಯದ 113 ಬೀಟ್‍ಗಳು, ಕಾವೇರಿ ವನ್ಯಜೀವಿ ಧಾಮದ 43 ಗಸ್ತುಗಳ 72 ಬ್ಲಾಕ್‍ಗಳಲ್ಲಿ 162 ಸಿಬ್ಬಂದಿ ಮತ್ತು ಬಿಳಿಗಿರಿರಂಗನಾಥ ದೇವಾಲಯ ಹುಲಿಸಂರಕ್ಷಿತ ಪ್ರದೇಶದಲ್ಲಿ 170 ಸಿಬ್ಬಂದಿ ಆನೆ ಗಣತಿ ಕೈಗೊಂಡಿದ್ದರು. ಗಜಗಣತಿಯು ಮೂರು ದಿನಗಳ ಕಾಲ ಬೆಳಗ್ಗೆ 6 ರಿಂದ ಸಂಜೆ 6 ಗಂಟೆಯ ವರೆಗೆ ನಡೆಯಲಿದೆ.
4 ರಾಜ್ಯಗಳಲ್ಲಿ ಏಕಕಾಲಕ್ಕೆ ಆನೆ ಗಣತಿ: ಇದು ಎರಡನೇ ಆನೆ ಗಣತಿಯಾಗಿದೆ. ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ ಮತ್ತು ಕೇರಳ ಸೇರಿದಕ್ಷಿಣ ಭಾರತದ ನಾಲ್ಕು ರಾಜ್ಯಗಳಲ್ಲಿ ಏಕಕಾಲಕ್ಕೆ ಆನೆ ಗಣತಿ ನಡೆಯುತ್ತಿದೆ. ಆನೆಗಳ ಬಾಹ್ಯ ಗಾಯಗಳು, ದಂತದಗಾತ್ರ ಮತ್ತು ಅದರದಂತ ವಿಲ್ಲದ ಗಂಡು ಆನೆ ಸಂಖ್ಯೆಯನ್ನೂ ಪತ್ತೆ ಮಾಡಲಾಗುತ್ತದೆ. ಆನೆಗಳ ನಡವಳಿಕೆ ಮತ್ತು ಚಲನವಲನಗಳ ಬಗ್ಗೆಯೂ ಅಧ್ಯಯನ ನಡೆಸಲಾಗುತ್ತದೆ.