ಆನೆಗಳ ಹಿಂಡು ಲಗ್ಗೆ ಗ್ರಾಮಸ್ಥರ ಆತಂಕ

ಹಾಸನ,ಡಿ.೧೦- ಹಾಡಹಗಲೇ ಸಕಲೇಶಪುರದ ಚಿಕ್ಕಕಲ್ಲೂರು ಗ್ರಾಮಕ್ಕೆ ಆನೆಗಳ ಹಿಂಡು ಲಗ್ಗೆಯಿಟ್ಟಿದ್ದು,ಅದರಲ್ಲಿ ಅರ್ಜುನನನ್ನು ತಿವಿದು ಕೊಂದಿರುವ ಪುಂಡಾನೆಯೂ ಸೇರಿಕೊಂಡಿದ್ದು ಜನರಲ್ಲಿ ಆತಂಕ ಮೂಡಿಸಿದೆ.
ಆನೆಗಳ ಗುಂಪಿನಲ್ಲಿ ನಾಲ್ಕು ಸಲಗಗಳು ಹಾಗೂ ಒಂದು ಮರಿಯಾನೆ ಸೇರಿಕೊಂಡಿವೆ. ಆನೆಗಳು ಓಡಾಡುವ ವೀಡಿಯೋ ಮೊಬೈಲ್‌ನಲ್ಲಿ ಸೆರೆಯಾಗಿದ್ದು, ಈ ಗುಂಪಿನಲ್ಲಿ ಅರ್ಜುನನ್ನು ಕೊಂದಿರುವ ಆನೆ ಸೇರಿಕೊಂಡಿರುವುದನ್ನು ಅರಣ್ಯ ಇಲಾಖೆಯ ಆರ್‌ಆರ್‌ಟಿ ಹಾಗೂ ಇಟಿಎಫ್ ಸಿಬ್ಬಂದಿ ಗುರುತಿಸಿದ್ದಾರೆ.
ಆನೆಗಳು ಈಗ ಮರಡಿಕೆರೆ ಗ್ರಾಮದ ಬಳಿ ಬೀಡುಬಿಟ್ಟಿದ್ದು, ಗ್ರಾಮಸ್ಥರಿಗೆ ಎಚ್ಚರಿಕೆಯಿಂದ ಇರುವಂತೆ ಅರಣ್ಯ ಸಿಬ್ಬಂದಿ ಮಾಹಿತಿ ನೀಡಿದ್ದಾರೆ.
ಕಾಡಾನೆಗಳಿಂದ ಯಸಳೂರು, ಚಿಕ್ಕಕಲ್ಲೂರು, ಮರಡಿಕೆರೆ ಗ್ರಾಮಸ್ಥರು ಆತಂಕಗೊಂಡಿದ್ದು, ಜೀವ ಭಯದಿಂದ ಕಾಫಿ ತೋಟದ ಕೆಲಸಕ್ಕೆ ಹೋಗಲು ಕಾರ್ಮಿಕರು ಹಿಂದೇಟು ಹಾಕುತ್ತಿದ್ದಾರೆ. ವಾಹನ ಸವಾರರು ಜೀವಭಯದಲ್ಲಿ ಸಂಚರಿಸುವ ಪರಿಸ್ಥಿತಿ ನಿರ್ಮಾಣವಾಗಿದೆ.