ಆನಂದರೆಡ್ಡಿ ಸೇರ್ಪಡೆ ಜೆಡಿಎಸ್‌ಗೆ ಆನೆ ಬಲ

ಕೋಲಾರ,ಏ,೧೧- ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಜಿ.ಆನಂದರೆಡ್ಡಿ ಕಳೆದ ೩೦ ವರ್ಷ ಕಾಲ ಕಾಂಗ್ರೆಸ್ ಪಕ್ಷದಲ್ಲಿ ಉತ್ತಮ ರೀತಿಯಲ್ಲಿ ಸಂಘಟನೆ ಮಾಡಿದ್ದರೂ ಸರಿಯಾದ ಸ್ಥಾನ ಮಾನ ನೀಡದ ಕಾರಣ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆ ಆಗಿರುವುದರಿಂದ ನನಗೆ ಸಂತಸವಾಗಿದೆ ಎಂದು ಮಾಜಿ ಸಿ.ಎಂ ಹೆಚ್.ಡಿ.ಕುಮಾರಸ್ವಾಮಿ ತಿಳಿಸಿದರು.
ಮುಳಬಾಗಿಲುತಾಲೂಕಿನ ಕೆ.ಬಯಪಲ್ಲಿ ರಸ್ತೆಯ ಸಿನಿಗೇನಹಳಿಯಲ್ಲಿ ಆವಣಿ ಬ್ಲಾಕ್ ಕಾಂಗ್ರೇಸ್ ಮಾಜಿ ಅಧ್ಯಕ್ಷ ಜಿ.ಆನಂದರೆಡ್ಡಿ ಮತ್ತು ಅವರ ಅಪಾರ ಬೆಂಬಲಿಗರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡು ಅವರು ಮಾತನಾಡಿದರು.ಜೆಡಿಎಸ್ ಅಭ್ಯರ್ಥಿ ಸಮೃದ್ದಿ ಮಂಜುನಾಥ್ ಅವರು ಆನಂದರೆಡ್ಡಿ ಅವರೊಂದಿಗೆ ಚರ್ಚೆ ಮಾಡಿದ್ದರ ಫಲವಾಗಿ ಜೆಡಿಎಸ್‌ಗೆ ಬಂದಿರುವುದಕ್ಕೆ ಆನೆ ಬಲ ಸಿಕ್ಕಿದಂತಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಪಂಚರತ್ನ ರಥ ಯಾತ್ರೆಯನ್ನು ಕುರುಡುಮಲೆ ಶ್ರೀ ವಿನಾಯಕ ದೇವಾಲಯದಲ್ಲಿ ಪೂಜೆ ಸಲ್ಲಿಸುವ ಮೂಲಕ ಪ್ರಾರಂಭಿಸಿ ರಾಜ್ಯದ ೩೧ ಜಿಲ್ಲೆಗಳಲ್ಲಿ ಓಡಾಡಿದ್ದು, ರಾಜ್ಯದ ಜನರಿಂದ ಉತ್ತಮ ರೀತಿಯಲ್ಲಿ ಪ್ರತಿಕ್ರಿಯೆ ಬರುತ್ತಿದೆ ೧೨೩ ಸ್ಥಾನಗಳಲ್ಲಿ ನಮ್ಮ ಪಕ್ಷದ ಅಭ್ಯರ್ಥಿಗಳು ಜಯಬೇರಿ ಬಾರಿಸುವ ಮೂಲಕ ಬಹುಮತದ ಸರ್ಕಾರ ರಚಿಸಿ ೫ ವರ್ಷಗಳ ಪೂರ್ಣ ಅವಧಿಯ ಆಡಳಿತವನ್ನು ನಡೆಸುತ್ತೇವೆಂದು ತಿಳಿಸಿದರು.
ಶ್ರೀನಿವಾಸಪುರ ಮಾಜಿ ಶಾಸಕ ಜಿ.ಕೆ. ವೆಂಕಟಶಿವಾರೆಡ್ಡಿ, ಎಂ.ಎಲ್‌ಸಿ ಇಂಚರಗೊವಿಂದರಾಜು, ತಾಲೂಕು ಜೆಡಿಎಸ್ ಅಧ್ಯಕ್ಷ ಕಾಡೇನಹಳ್ಳಿ ನಾಗರಾಜ್, ಮಾಜಿ ಅಧ್ಯಕ್ಷ ಆಲಂಗುರು ಶಿವಣ್ಣ, ಜೆಡಿಎಸ್ ಅಭ್ಯರ್ಥಿ ಸಮೃದ್ದಿ ಮಂಜುನಾಥ್, ಜೆಡಿಎಸ್ ಜಿಲ್ಲಾಧ್ಯಕ್ಷ ಬಣಕನಹಳ್ಳಿ ನಟರಾಜ್, ಕೆ.ವಿ. ಶಂಕರಪ್ಪ, ಮಾಲೂರು ರಾಮೇಗೌಡ, ಬಿ.ವಿ. ಸಾಮೇಗೌಡ, ಎಂ.ಆರ್. ಮುರಳಿ, ವಕ್ಕಲೇರಿ ರಾಮು ಇತರರು ಇದ್ದರು.