ಆನಂದಮಯ ಜೀವನಕ್ಕಾಗಿ ಜೂ. 14ರಿಂದ ಇನ್ನರ್ ಇಂಜಿನಿಯರಿಂಗ್ ಶಿಬಿರ

ಕಲಬುರಗಿ.ಜೂ.03: ನಗರದ ಗೋದುತಾಯಿ ನಗರದಲ್ಲಿನ ಮದರ್ ಥೆರೆಸ್ಸಾ ಬಿಎಡ್ ಕಾಲೇಜಿನಲ್ಲಿ ಇದೇ ಜೂನ್ 14ರಿಂದ 20ರವರೆಗೆ ಬೆಳಿಗ್ಗೆ 6ರಿಂದ 9 ಅಥವಾ ಸಂಜೆ 6ರಿಂದ 9ರವರೆಗೆ, ಭಾನುವಾರ ಬೆಳಿಗ್ಗೆ 7ರಿಂದ ಸಂಜೆ 5ರವರೆಗೆ ಆನಂದಮಯ ಜೀವನದ ಸಾಧನವಾಗಿ ಇನ್ನರ್ ಇಂಜಿನಿಯರಿಂಗ್ ಶಿಬಿರ ಆಯೋಜಿಸಲಾಗಿದೆ ಎಂದು ಇಶಾ ಫೌಂಡೇಶನ್ ಪ್ರಮುಖರಾದ ಮನು ಅವರು ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇನ್ನರ್ ಇಂಜಿನಿಯರಿಂಗ್ ಒಂದು ಮತವಾಗಲೀ, ಸಿದ್ದಾಂತವಾಗಲೀ, ಅಥವಾ ನಂಬಿಕೆಯ ಕಟ್ಟುಪಾಡಾಗಲೀ ಅಲ್ಲ. ಅದು ಶ್ರೇಯಸ್ಸನ್ನು ಕಂಡುಕೊಳ್ಳಲು ಒಂದು ತಂತ್ರಜ್ಞಾನ. ಅದನ್ನು ನೀವು ನಂಬುವ ಅಥವಾ ನಂಬದೇ ಇರುವ ಅಗತ್ಯವಿಲ್ಲ. ನೀವುದನ್ನು ಬಳಸಲು ಕಲಿಯಬೇಕಷ್ಟೇ. ನೀವು ಯಾರೇ ಆಗಿದ್ದರೂ ತಂತ್ರಜ್ಞಾನವು ಫಲಿತಾಂಶವನ್ನು ನೀಡುತ್ತದೆ ಎಂಬ ಮಾತನ್ನು ಸದ್ದುರು ಉಚ್ಛರಿಸಿದ್ದಾರೆ ಎಂದರು.
ದೇಹವನ್ನು ಮನಸ್ಸನ್ನು ಹದಗೊಳಿಸಲು ಸಾವಿರಾರು ವರ್ಷಗಳಿಂದಲೂ ನಾವು ಪ್ರಾಚೀನವಾದ ಯೋಗ ವಿಜ್ಞಾನವನ್ನು ಬಳಸಿಕೊಂಡು ಬಂದಿದ್ದೇವೆ. ಯೋಗಾಭ್ಯಾಸಗಳನ್ನು ಮಾಡಿಕೊಂಡು ಬಂದಿರುವವರೇ, ಅದು ಒದಗಿಸುವ ಅದ್ಭುತವಾದ ಪ್ರಯೋಜನಗಳಿಗೆ ಸಾಕ್ಷಿಯಾಗಿದ್ದಾರೆ. ಯೋಗ ಎಂದರೆ ಅದು ಕೇವಲ ದೇಹವನ್ನು ಬಗ್ಗಿಸುವುದಲ್ಲ. ಅದು ನಮ್ಮನ್ನು ಪ್ರಜ್ಞೆಯ ಉನ್ನತಸ್ತರ ಆಯಾಮಗಳಿಗೆ ಕರೆದೊಯ್ಯುವ ಒಂದು ವ್ಯವಸ್ಥಿತವಾದ ವಿಧಾನ. ಯೋಗವು ಮಾನವನ ದೇಹ, ಮನಸ್ಸು, ಭಾವನೆಗಳು ಮತ್ತು ಪ್ರಾಣ ಶಕ್ತಿಗಳಿಗೆ ಸಮಗ್ರ ಒಳಿತನ್ನು ಕೊಡುತ್ತದೆ ಎಂದು ಅವರು ಹೇಳಿದರು.
ಇನ್ನರ್ ಇಂಜಿನಿಯರಿಂಗ್‍ನಲ್ಲಿ ಶಕ್ತಿಯುತವಾದ ಶಾಂಭವಿ ಮಹಾಮುದ್ರಾ ಕ್ರಿಯಾವನ್ನು ಕಲಿಸಲಾಗುವುದು. ಇದು ಬಹಳ ಸರಳವಾದ ಕ್ರಿಯಾ. ಆದಾಗ್ಯೂ, ಇದು ಕೊಡುವ ಲಾಭಗಳು, ದೇಹ, ಮನಸ್ಸುಗಳಲ್ಲಿ ಉಂಟಾಗುವ ಬದಲಾವಣೆಗಳು ಬಹಳ ಮಹತ್ವವಾದವು. ಆನಂದಮಯವಾದವು. ಈಶಾ ಯೋಗದಲ್ಲಿ ಕಲಿಸಲಾಗುವ ಕೆಲವು ಅಂಶಗಳು ಮತ್ತು ಶಾಂಭಿ ಮಹಾ ಮುದ್ರಾದ ಅಭ್ಯಾಸವು ಆರೋಗ್ಯವನ್ನು ಸಂತುಲನೆಯಲ್ಲಿ ಇಟ್ಟುಕೊಳ್ಳಲು ಸಹಾಯ ಮಾಡುತ್ತದೆ. ಶಾಂಭವಿ ಮಹಾಮುದ್ರಾವು ಹೊರಗಡೆ ಕಂಡುಬರುವ ರೋಗ ಲಕ್ಷಣಗಳನ್ನು ಮಾತ್ರ ನಿವಾರಿಸುವುದಲ್ಲ. ಬದಲಿಗೆ ರೋಗದ ಮೂಲವನ್ನೇ ನಿವಾರಿಸುತ್ತದೆ. ಆ ಮೂಲಕವಾಗಿ ಅದು ಪರಿಪೂರ್ಣ ಸ್ವಾಸ್ಥ್ಯವನ್ನು ತಂದುಕೊಡುತ್ತದೆ ಎಂದು ಅವರು ತಿಳಿಸಿದರು.
ಇಶಾ ಫೌಂಡೇಶನ್ ಎಂಬ ಲಾಭ ರಹಿತ ಮಾನವ ಸೇವಾ ಸಂಘವನ್ನು ಕಳೆದ ಮೂರು ದಶಕಗಳ ಹಿಂದೆ ಸದ್ದುರುಗಳು ಸ್ಥಾಪಿಸಿದರು. ಮಾನವ ಸ್ವಾಸ್ಥ್ಯವೇ ಇದರ ಉದ್ದೇಶವಾಗಿದೆ. ಇದಕ್ಕೆ ಬೆಂಬಲವಾಗಿ ಸುಮಾರು 9 ದಶಲಕ್ಷಕ್ಕೂ ಮೀರಿ ಸ್ವಯಂ ಸೇವಕರು ಜಗತ್ತಿನಾದ್ಯಂತ 250 ಕೇಂದ್ರಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಇಂತಹ ಶಿಬಿರಗಳು ಜೂನ್ 14ರಿಂದ 20ರವರೆಗೆ ಬೆಳಗಾವಿ, ಶಿವಮೊಗ್ಗ, ಹಾಸನ್‍ಗಳಲ್ಲಿಯೂ ಸಹ ಆಯೋಜಿಸಲಾಗಿದೆ ಎಂದು ಅವರು ಹೇಳಿದರು.
ಶಿಬಿರದಲ್ಲಿ ಭಾಗವಹಿಸುವವರು ತಮ್ಮ ಹೆಸರುಗಳನ್ನು ನೊಂದಾಯಿಸಿಕೊಳ್ಳಬೇಕು. ಹೆಚ್ಚಿನ ಮಾಹಿತಿಗಾಗಿ 9901009969, 767662818 ಮೊಬೈಲ್ ನಂಬರುಗಳಿಗೆ ಸಂಪರ್ಕಿಸಲು ಅವರು ಕೋರಿದರು. ಸುದ್ದಿಗೋಷ್ಠಿಯಲ್ಲಿ ಡಾ. ಜ್ಯೋತಿ ತೆಗನೂರ್, ಶಿವಾನಂದ್ ಭೀಮಳ್ಳಿ ಮುಂತಾದವರು ಉಪಸ್ಥಿತರಿದ್ದರು.