ಆಧ್ಯಾತ್ಮಿಕ ಚಿಂತನೆ, ಸಾಮಾಜಿಕ ಕಳಕಳಿ ಹೊಂದಿದ ಕಾಯಕಯೋಗಿ ದೇವರ ದಾಸಿಮಯ್ಯ


ಚಿತ್ರದುರ್ಗ,ಏಪ್ರಿಲ್17:
ಆಧ್ಯಾತ್ಮಿಕ ಚಿಂತನೆ ಮತ್ತು ಸಾಮಾಜಿಕ ಕಳಕಳಿಯಿಂದ ಯಾವ ರೀತಿಯಾಗಿ ಜೀವನ ನಡೆಸಬೇಕು ಮತ್ತು ಕಾಯಕದಲ್ಲಿ ದೇವರನ್ನು ಸ್ಮರಿಸಬೇಕು ಎಂದು ಆದ್ಯ ವಚನಕಾರ ದೇವರ  ದಾಸಿಮಯ್ಯ ತಮ್ಮ ವಚನಗಳ ಮೂಲಕ ನಮ್ಮೆಲ್ಲರಿಗೂ ತಿಳಿಸಿಕೊಟ್ಟಿದ್ದಾರೆ ಎಂದು ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ ಹೇಳಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶನಿವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ನಗರಸಭೆ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ವತಿಯಿಂದ ಆಯೋಜಿಸಲಾಗಿದ್ದ ದೇವರ ದಾಸಿಮಯ್ಯ ಜಯಂತಿ ಕಾರ್ಯಕ್ರಮದಲ್ಲಿ ದೇವರ ದಾಸಿಮಯ್ಯ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಅವರು ಮಾತನಾಡಿದರು.
ಮನುಕುಲದ ಒಳತಿಗಾಗಿ ಸರಳ ಭಾಷೆಯಲ್ಲಿ ಜನರಿಗೆ ಅರ್ಥವಾಗುವಂತೆ ವಚನಗಳನ್ನು ರಚಿಸಿದ್ದಾರೆ. ಕಾಯಕ ನಿಷ್ಠೆ ಉಳ್ಳವರಾಗಿದ್ದ ದೇವರ ದಾಸಿಮಯ್ಯ ಅವರು ಕಾಯಕದಿಂದ ಬದುಕು ಸಾಗಿಸಬೇಕು ಎಂಬುದನ್ನು ತಿಳಿಸಿಕೊಟ್ಟಿದ್ದಾರೆ ಎಂದು ಹೇಳಿದರು.
2011-12 ರಿಂದ ದೇವರ ದಾಸಿಮಯ್ಯ ಅವರ ಜಯಂತಿಯನ್ನು ಆಚರಣೆ ಮಾಡಲಾಗುತ್ತಿದೆ. ಮೊಟ್ಟ ಮೊದಲ ಬಾರಿಗೆ ದೇವರ ದಾಸಿಮಯ್ಯ ಅವರ ಹುಟ್ಟೂರಾದ ಯಾದಗಿರಿ ಜಿಲ್ಲೆಯ ಸುರಪುರ ತಾಲ್ಲೂಕಿನ ಮುದನೂರು ಗ್ರಾಮದಲ್ಲಿ ಜಯಂತಿ ಆಚರಿಸಲಾಯಿತು. ದೇವರ ದಾಸಿಮಯ್ಯ ಅವರು ಆದ್ಯ ವಚನಕಾರರಾಗಿದ್ದು, ಬಸವಣ್ಣನವರಿಗಿಂತ ಪೂರ್ವದ ವಚನಕಾರರಾಗಿದ್ದಾರೆ. ರಾಮನಾಥ ಎಂಬ ಅಂಕಿತದಲ್ಲಿ ವಚನಗಳನ್ನು ರಚಿಸಿದ್ದಾರೆ ಎಂದರು.
ಅಪರ ಜಿಲ್ಲಾಧಿಕಾರಿ ಈ. ಬಾಲಕೃಷ್ಣ ಮಾತನಾಡಿ, ದೇವರ ದಾಸಿಮಯ್ಯ ಅವರು 11ನೇ ಶತಮಾನದ ಮೊಟ್ಟ ಮೊದಲ ವಚನಕಾರರು. ದೇವರ ದಾಸಿಮಯ್ಯ ನೇಕಾರ ವೃತ್ತಿಯ ಜೊತೆಗೆ ಆಧ್ಯಾತ್ಮಿಕ ವಿಚಾರಗಳನ್ನು ತಮ್ಮ ವಚನಗಳ ಮೂಲಕ ತಿಳಿಸಿದ್ದಾರೆ ಎಂದು ಹೇಳಿದರು.
  ಕಾಯಕ ವೃತ್ತಿ ಹಾಗೂ ಕಾಯಕ ಶ್ರೇಷ್ಠತೆಯನ್ನು ತಮ್ಮ ವಚನಗಳ ಮೂಲಕ ಸಾರಿದ್ದಾರೆ. ತಮ್ಮ ಕಾಯಕದಲ್ಲಿಯೇ ಶ್ರದ್ಧೆಯಿಂದ ಕೆಲಸ ಮಾಡಿದರೆ ದೇವರನ್ನು ಕಾಣಬಹುದು. ಕಪಟ ಭಕ್ತಿ ಮತ್ತು ತೋರ್ಪಡಿಕೆ ಭಕ್ತಿ ತೊರದೇ ನಿಷ್ಠೆಯಿಂದ ಕಾಯಕ ಮಾಡಿದರೆ ಉತ್ತಮ ಜೀವನ ರೂಪಿಸಿಕೊಳ್ಳಬಹುದು ಎಂದು ವಚನಗಳಲ್ಲಿ ತಿಳಿಸಿದ್ದಾರೆ ಎಂದರು.
ಜಿಲ್ಲಾ ವಾರ್ತಾಧಿಕಾರಿ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಬಿ. ಧನಂಜಯ ಮಾತನಾಡಿ, ಬಂಡಿಗೆ ಕೀಲು ಎಷ್ಟು ಮುಖ್ಯವೋ ಜೀವನಕ್ಕೂ ವಚನಗಳು ಅಷ್ಟೇ ಮುಖ್ಯವಾಗಿವೆ. ಸಮಾಜಕ್ಕೆ ಆದರ್ಶ, ಸಿದ್ಧಾಂತ, ಅಡಿಪಾಯವನ್ನು ಹಾಕಿಕೊಟ್ಟ ವಚನಕಾರರನ್ನು ಸ್ಮರಿಸುತ್ತಾ ನಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಬೇಕು ಎಂದರು.
ನೇಕಾರ ಒಕ್ಕೂಟದ ಅಧ್ಯಕ್ಷ ಎಂ. ಗೋವಿಂದಪ್ಪ ಮಾತನಾಡಿ, ದೇವರ ದಾಸಿಮಯ್ಯ ಅವರು ಮನುಕುಲಕ್ಕೆ ಒಳಿತು ಆಗುವಂತಹ ವಚನಗಳನ್ನು ರಚಿಸಿದ್ದಾರೆ ಅವರ ನಡೆ-ನುಡಿ ಹಾಗೂ ಮಾರ್ಗದರ್ಶನದಲ್ಲಿ ನಾವೆಲ್ಲರೂ ಸಾಗಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಡಾ.ಕೆ. ನಂದಿನಿದೇವಿ, ನೇಕಾರ ಒಕ್ಕೂಟ ಸಂಘದ ಪ್ರಧಾನ ಕಾರ್ಯದರ್ಶಿ ಸುರೇಶ್, ಕಾರ್ಯದರ್ಶಿ ಎನ್.ಆರ್. ಶಶಿಧರ್, ಉಪಾಧ್ಯಕ್ಷರಾದ ನಾರಾಯಣ್ ದೊಡ್ಡಸಿದ್ದವ್ವನಹಳ್ಳಿ, ಹೆಚ್.ತಿಪ್ಪೇಸ್ವಾಮಿ, ಶಕಾಂಬರಿ ಮಹಿಳಾ ಸಂಘದ ಪದಾಧಿಕಾರಿಗಳಾದ ಹೆಚ್. ಮಮತಾ, ಟಿ. ಶಿವರುದ್ರಮ್ಮ, ರಂಗ ನಿರ್ದೇಶಕ ಕೆಪಿಎಂ ಗಣೇಶಯ್ಯ, ಗಾಯಕರಾದ ಗಂಗಾಧರ್, ಹಿಮಂತರಾಜ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.