ಆಧುನಿಕ ಜೀವ ವಿಜ್ಞಾನಕ್ಕೆ ಬುನಾದಿ ಹಾಕಿದ ಚಾಲ್ರ್ಸ್ ಡಾರ್ವಿನ್

ಕಲಬುರಗಿ :ಫೆ.12: ನಾವು ಇಂದು ಕಾಣುವ ವಿಜ್ಞಾನ ಮತ್ತು ತಂತ್ರಜ್ಞಾನದ ಬೆಳವಣಿಗೆಗೆ ಅನೇಕ ವಿಜ್ಞಾನಿಗಳಿಗೆ ಇಡೀ ತಮ್ಮ ಜೀವನವನ್ನು ಸವೆಸಿದ್ದಾರೆ. ಜೀವಿಗಳ ಉಗಮ, ಹಿನ್ನೆಲೆ, ಬೆಳವಣಿಗೆಯ ಬಗ್ಗೆ ಸಮಗ್ರವಾದ ಬೆಳಕು ಚೆಲ್ಲುವ ಮೂಲಕ ಚಾಲ್ರ್ಸ್ ಡಾರ್ವಿನ್ ಅವರು ಆಧುನಿಕ ಜೀವ ವಿಜ್ಞಾನಕ್ಕೆ ಬುನಾದಿಯನ್ನು ಒದಗಿಸಿದ್ದಾರೆಂದು ಉಪನ್ಯಾಸಕ ಎಚ್.ಬಿ.ಪಾಟೀಲ ಹೇಳಿದರು.
ನಗರದ ಆಳಂದ ರಸ್ತೆಯ ದೇವಿ ನಗರದಲ್ಲಿನ ‘ಜ್ಞಾನ ಚಿಗುರು ಟ್ಯೂಟೋರಿಯಲ್ಸ್’ನಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಜರುಗಿದ ವಿಶ್ವದ ಪ್ರಸಿದ್ಧ ಜೀವಶಾಸ್ತ್ರಜ್ಞ ‘ಚಾಲ್ರ್ಸ್ ಡಾರ್ವಿನ್‍ರ ಜನ್ಮದಿನಾಚರಣೆ’ಯ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಡಾರ್ವಿನ್ ಅವರು ವಿಶ್ವದ ಶ್ರೇಷ್ಠ ವಿಜ್ಞಾನಿಗಳ ಸಾಲಿನಲ್ಲಿ ಪ್ರಮುಖರಾಗಿದ್ದಾರೆ. ಅವರು 1831-36ರವರೆಗೆ 5 ವರ್ಷಗಳ ಕಾಲ ಹಡಗಿನ ಮೂಲಕ ಭೂಮಿಯನ್ನು ಸುತ್ತಾಡಿ, ಅನೇಕ ಜೀವ ಪಳಯುಳಿಕೆಗಳ, ಜೀವಿಯಲ್ಲಿರುವ ವಿವಿಧ ಬಗೆಗಳ ಬಗ್ಗೆ ಸಾಕಷ್ಟು ಸಂಶೋಧನೆಗಳನ್ನು ಕೈಗೊಂಡು “ನೈಸರ್ಗಿಕ ಆಯ್ಕೆಯಿಂದ ಜೀವ ವಿಕಾಸವಾದ” ಎಂಬ ಸಿದ್ಧಾಂತವನ್ನು ಜಗತ್ಪ್ರಸಿದ್ಧ ತಮ್ಮ ಗ್ರಂಥವಾದ “ಆನ್ ದಿ ಓರಿಜಿನ್ ಆಫ್ ಸ್ಪೀಸಿಸ್” ಎಂಬುದರಲ್ಲಿ ಪ್ರಕಟಿಸಿದ್ದಾರೆ ಎಂದರು.
ಡಾರ್ವಿನ್ ಅವರ ವೈಜ್ಞಾನಿಕ ಸಂಶೋಧನೆಯ ಹಸಿವು ಎಷ್ಟು ಅಗಾಧವಾಗಿತ್ತೆಂದರೆ, ತಮ್ಮ ಆರೋಗ್ಯ ಹದಗೆಟ್ಟರೂ, ಅವರ ಮಗಳು ಹಾಗೂ ಮಗ ಅಕಾಲಿಕ ನಿಧನರಾದರೂ ಕೂಡಾ, ಅದರಿಂದ ವಿಚಲಿತರಾಗದೆ ತಮ್ಮ ಅಮೂಲ್ಯವಾದ ಸೇವೆಯನ್ನು ನೀಡಿದ್ದಾರೆ. ಜೀವ ಕೊಟ್ಟು, ಜೀವ ವಿಜ್ಞಾನವನ್ನು ಬೆಳೆಸಿದ ಮಹಾನ್ ಚೇತನ ಡಾರ್ವಿನ್ ಅವರಾಗಿದ್ದಾರೆ ಎಂದು ನುಡಿದರು.
ಕಾರ್ಯಕ್ರಮದಲ್ಲಿ ನರಸಪ್ಪ ಬಿರಾದಾರ ದೇಗಾಂವ, ಬಸಯ್ಯಸ್ವಾಮಿ ಹೊದಲೂರ, ದೇವೇಂದ್ರಪ್ಪ ಗಣಮುಖಿ, ಶಿವಯೋಗೆಪ್ಪಾ ಎಸ್.ಬಿರಾದಾರ, ವೀರೇಶ ಬೋಳಶೆಟ್ಟಿ ನರೋಣಾ ಸೇರಿದಂತೆ ಮತ್ತಿತರರಿದ್ದರು.