ಆಧುನಿಕ ಜೀವನದಲ್ಲಿ ಸಿರಿಧಾನ್ಯಗಳ ಪ್ರಾಮುಖ್ಯತೆ ಹೆಚ್ಚಿದೆ

ಚಿತ್ರದುರ್ಗ,ಸೆ.12; ಬಡವರ ಆಹಾರ ಇಂದಿನ ದಿನಗಳಲ್ಲಿ ಶ್ರೀಮಂತರ ಆಹಾರವಾಗಿದೆ. ಸಿರಿಧಾನ್ಯಗಳ ಸೇವನೆಯಿಂದ ಉತ್ತಮ ಆರೋಗ್ಯ ವೃದ್ಧಿಸುತ್ತದೆ. ಆಧುನಿಕ ಜೀವನದಲ್ಲಿ ಸಿರಿಧಾನ್ಯಗಳ ಪ್ರಾಮುಖ್ಯತೆ ಹೆಚ್ಚಿದ್ದು, ಇವು ವಿವಿಧ ಪೋಷಕಾಂಶಗಳ ಅಗರವಾಗಿರುತ್ತವೆ ಎಂದು ಕೃಷಿ ಸಚಿವರದ ಬಿ.ಸಿ.ಪಾಟೀಲ್ ಹೇಳಿದರು.
  ಹಿರಿಯೂರು ತಾಲ್ಲೂಕು ಬಬ್ಬೂರು ಜಿಲ್ಲಾ ಕೃಷಿ ತರಬೇತಿ ಕೇಂದ್ರದಲ್ಲಿ ಶನಿವಾರ ಕೃಷಿ ಇಲಾಖೆಯಿಂದ ಹಮ್ಮಿಕೊಂಡಿದ್ದ ಸಿರಿಧಾನ್ಯಗಳ ಉತ್ಕøಷ್ಠತಾ ಕೇಂದ್ರ ಕಟ್ಟಡ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.  
ಸಿರಿಧಾನ್ಯಗಳನ್ನು ಚಿತ್ರದುರ್ಗ ಜಿಲ್ಲೆಯ ಹೆಚ್ಚಿನ ಪ್ರದೇಶದಲ್ಲಿ ಬೆಳೆಯಲಾಗುತ್ತದೆ. ಪ್ರಮುಖವಾಗಿ ಹೊಸದುರ್ಗ ತಾಲ್ಲೂಕಿನಲ್ಲಿ ಹೆಚ್ಚಿನ ವಿಸ್ತೀರ್ಣ ಬರುತ್ತಿದ್ದು, ಸಾವೆ, ನವಣೆ, ರಾಗಿ, ಊದಲು, ಹಾರಕ, ಕೊರಲೆ ಬೆಳೆಗಳನ್ನು ಬೆಳೆಯಲಾಗುತ್ತಿದೆ ಎಂದು ಹೇಳಿದರು.
 ಆಹಾರ ಪದ್ಧತಿಯಲ್ಲಿ ಸಿರಿಧಾನ್ಯಗಳನ್ನು ರೂಢಿಸಿಕೊಂಡು, ಆರೋಗ್ಯ ಸುಧಾರಣೆ ಕ್ರಮಕೈಗೊಳ್ಳಲು ಹಾಗೂ ಬೇಡಿಕೆಯನ್ನು ಹೆಚ್ಚಿಸಿದಲ್ಲಿ ರೈತರಿಗೆ ಸಿರಿಧಾನ್ಯಗಳನ್ನು ಬೆಳೆಯಲು ಪ್ರೊತ್ಸಾಹ ನೀಡಲು ಸಹಕಾರಿಯಾಗಲಿದೆ. ಸಿರಿಧಾನ್ಯ ಬೆಳೆಯುವ ರೈತರ ಆರ್ಥಿಕ ಪರಿಸ್ಥಿತಿ ಸುಧಾರಿಸಿದಂತಾಗುತ್ತದೆ. ಈ ನಿಟ್ಟಿನಲ್ಲಿ 2018-19ನೇ ಸಾಲಿನಲ್ಲಿ ರಾಷ್ಟ್ರೀಯ ವಿಕಾಸ ಯೋಜನೆಯಡಿ ಸಿರಿಧಾನ್ಯಗಳ ಉತ್ಕøಷ್ಟತಾ ಕೇಂದ್ರದ ಅಗತ್ಯತೆಯ ಪ್ರಸ್ತಾವನೆಯನ್ನು ಕೃಷಿ ಇಲಾಖೆಯ ಮೂಲಕ ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಾಯಿತು. 2019-20ನೇ ಸಾಲಿನಲ್ಲಿ ಕೇಂದ್ರ ಸರ್ಕಾರವು ಅನುಮತಿ ನೀಡಿ ಜಿಲ್ಲೆಯ ರೈತರಿಗೆ ತರಬೇತಿ ನೀಡುವ ಸಲುವಾಗಿ ಸಿರಿಧಾನ್ಯಗಳ ಉತ್ಕøಷ್ಟತಾ ಕೇಂದ್ರದ ಕಟ್ಟಡ ಪ್ರಾರಂಭವಾಗಿ ಉದ್ಘಾಟನೆಗೊಳ್ಳುತ್ತಿದೆ ಎಂದು ಹೇಳಿದರು.
 ಸಿರಿಧಾನ್ಯಗಳ ಉತ್ಕøಷ್ಟತಾ ಕೇಂದ್ರದ ಮೂಲ ಉದ್ದೇಶ ತರಬೇತಿ ನೀಡಿ ರೈತರಲ್ಲಿ ಸಿರಿಧಾನ್ಯಗಳ ಪ್ರಾಮುಖ್ಯತೆ ವಿಶಿಷ್ಟ ಗುಣಗಳ ಬಗ್ಗೆ ಅರಿವು ಮೂಡಿಸಿ ಹೆಚ್ಚಿನ ಪ್ರದೇಶದಲ್ಲಿ ಸಿರಿಧಾನ್ಯಗಳಗಳನ್ನು ಬೆಳೆಸಿ ರೈತರನ್ನು ಅರ್ಥಿಕವಾಗಿ ಸಬಲರನ್ನಾಗಿ ಮಾಡುವುದಾಗಿದೆ ಎಂದು ಹೇಳಿದರು.
 ಮುಂಬರುವ 2023ನೇ ವರ್ಷವನ್ನು ಅಂತರ ರಾಷ್ಟ್ರೀಯ ಸಿರಿಧಾನ್ಯಗಳ ವರ್ಷ ಹಾಗೂ ಅಂತರ ರಾಷ್ಟ್ರೀಯ ಸಿರಿಧಾನ್ಯ ಮೇಳವನ್ನೂ ಸಹ ರಾಜ್ಯದಲ್ಲಿ ಆಚರಿಸಲಾಗುವುದು. ಸಿರಿಧಾನ್ಯಗಳನ್ನು ಹೆಚ್ಚು ಬೆಳೆಯುವುದರ ಮೂಲಕ ಆರೋಗ್ಯದ ಆಹಾರವನ್ನು ಒದಗಿಸುವ ಕೆಲಸ ರೈತರಿಂದ ಆಗಬೇಕಿದೆ ಎಂದು ಹೇಳಿದರು.  
 ಕಾರ್ಯಕ್ರಮದಲ್ಲಿ ಹಿರಿಯೂರು ಶಾಸಕರಾದ ಪೂರ್ಣಿಮಾ ಕೆ.ಶ್ರೀನಿವಾಸ್, ಶಾಸಕರಾದ ಟಿ.ರಘುಮೂರ್ತಿ, ರಾಜ್ಯ ಖನಿಜ ನಿಗಮದ ಅಧ್ಯಕ್ಷರಾದ ಎಸ್.ಲಿಂಗಮೂರ್ತಿ, ಬಯಲುಸೀಮೆ ಅಭಿವೃದ್ದಿ ಮಂಡಳಿ ಅಧ್ಯಕ್ಷ ಎನ್.ಇ.ಜೀವನ್‍ಮೂರ್ತಿ, ಜಿಲ್ಲಾ ಕೃಷಿ ಸಮಾಜದ ಅಧ್ಯಕ್ಷ ಜಿ.ಎಂ.ತಿಮ್ಮಪ್ಪ, ಕೃಷಿ ನಿರ್ದೇಶಕರಾದ ಡಾ; ಬಿ.ವೈ.ಶ್ರೀನಿವಾಸ್, ಜಂಟಿ ಕೃಷಿ ನಿರ್ದೇಶಕ ಡಾ.ಪಿ.ರಮೇಶ್ ಕುಮಾರ್, ಜಿಲ್ಲಾ ಕೃಷಿ ತರಬೇತಿ ಕೇಂದ್ರದ ಸಹಾಯಕ ಕೃಷಿ ನಿರ್ದೇಶಕ ಡಾ.ಎನ್.ಎ.ಪ್ರವೀಣ್ ಚೌಧರಿ, ಉಪ ಕೃಷಿ ನಿರ್ದೇಶಕರಾದ ಡಾ.ಬಿ.ಎನ್.ಪ್ರಭಾಕರ್, ಡಾ.ಹುಲಿರಾಜ್ ಸೇರಿದಂತೆ ಮತ್ತಿತರರು ಇದ್ದರು.