ಆಧುನಿಕ ಜೀವನಕ್ಕೆ ವಿದ್ಯುತ್ತಿನ್ ಅವಶ್ಯಕತೆ ಬಹಳ ಇದೆ:ಕೇಂದ್ರ ಸಚಿವ ಭಗವಂತ ಖೂಬಾ

ಬೀದರ ಜು 31: ಮನುಷ್ಯನ ಆಧುನಿಕ ಜೀವನಕ್ಕೆ ನೀರು, ಆಹಾರದಷ್ಟೇ ವಿದ್ಯುತ್ತಿನ ಅವಶ್ಯಕತೆ ಬಹಳ ಇದೆ ಎಂದು ಕೇಂದ್ರ ನವೀಕರಿಸಬಹುದಾದ ಇಂಧನ ಮೂಲ ಹಾಗೂ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ರಾಜ್ಯ ಸಚಿವರಾದ ಭಗವಂತ ಖೂಬಾ ಹೇಳಿದರು.

ಅವರು ಶನಿವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಸಹಯೋಗದಲ್ಲಿ ಬೀದರ ನಗರದ ಪೂಜ್ಯ ಚನ್ನಬಸವ ಪಟ್ಟದೇವರು ರಂಗಮಂದಿರದಲ್ಲಿ ಹಮ್ಮಿಕೊಂಡಿದ್ದ ಉಜ್ಜಲ ಭಾರತ, ಉಜ್ವಲ ಭವಿಷ್ಯ ವಿದ್ಯುತ್ ಮಹೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಗುಣಮಟ್ಟದ ವಿದ್ಯುತ್ ಇಲ್ಲದಿದ್ದರೆ ಆ ಕ್ಷೇತ್ರ ಅಭಿವೃದ್ಧಿ ಆಗುವುದಿಲ್ಲ, ವಿಂಡ್‍ಎನರ್ಜಿ, ಸೋಲಾರ ಎನರ್ಜಿ, ಹೈಡ್ರೋಜನ್ ಎನರ್ಜಿಗಳ ಅಭಿವೃದ್ಧಿಯ ನಿಟ್ಟಿನಲ್ಲಿ ಭಾರತ ಸರ್ಕಾರ ಕೆಲಸ ಮಾಡುತ್ತಿದೆ. ಶೇಕಡ 40% ಪ್ರತಿಶತ ನವೀಕರಿಸಬಹುದಾದ ಇಂಧನ ಮೂಲಗಳಿಂದ 175 ಗೀಗಾವ್ಯಾಟ್ ವಿದ್ಯುತ್ ಭಾರತ ಉತ್ಪಾದನೆ ಮಾಡುತ್ತಿದೆ. 2030ರ ವೇಳೆಗೆ 500 ಗೀಗಾವ್ಯಾಟ್ ವಿದ್ಯುತ್ ಉತ್ಪಾದನೆ ನವೀಕರಿಸಬಹುದಾದ ಇಂಧನಗಳ ಮೂಲದಿಂದ ಉತ್ಪಾದಿಸಲಾಗುವುದು ಎಂದು ಹೇಳಿದರು.

ಭಾರತದಲ್ಲಿ ಈ ಹಿಂದೆ ಎರಡು ಲಕ್ಷ ಮೇಗಾವ್ಯಾಟ್ ವಿದ್ಯುತ್‍ನ್ನು ಸರಾಸರಿಯಾಗಿ ಉತ್ಪಾದನೆಯಾಗುತ್ತಿತ್ತು, ಈಗ ನಾಲ್ಕು ಲಕ್ಷಮೆಗಾವ್ಯಾಟ್ ಕಳೆದ ಎಂಟು ವರ್ಷಗಳಲ್ಲಿಯೇ ಭಾರತ ಉತ್ಪಾದನೆ ಮಾಡುತ್ತಿದೆ. ಗ್ರಾಮೀಣ ಭಾಗದಲ್ಲಿಯೂ ವಿದ್ಯುತ್ ಪೂರೈಸಲಾಗುತ್ತಿದೆ, ಕಳೆದ ಎಂಟು ವರ್ಷಗಳಲ್ಲಿ ಈ ಕ್ಷೇತ್ರದಲ್ಲಿ ಭಾರತ ಅದ್ಭುತ ಸಾಧನೆಗೈದು ಈ ಕ್ಷೇತ್ರದಲ್ಲಿ ಹೆಚ್ಚಿನ ಹೂಡಿಕೆ ಮಾಡಿ ಎನರ್ಜಿ ಸೆಕ್ಯೂರಿಟಿ ಮಾಡಲಾಗುತ್ತಿದೆ ಎಂದರು.

ಕಳೆದ ಎರಡು ತಿಂಗಳ ಹಿಂದೆ ಪ್ರತಿ ಮನೆಯ ಮೇಲೆ ಸೋಲಾರ ಅಳವಡಿಸಿಕೊಳ್ಳುವ ಕಾರ್ಯಕ್ರಮ ಮಾಡಲಾಗಿತ್ತು, ರೂಪ ಸೋಲಾರ ಪ್ರತಿಯೊಬ್ಬರ ಮನೆಯ ಮೇಲೆ ಅಳವಡಿಸಿಕೊಳ್ಳಬೇಕು ಮತ್ತು ಭಾರತದ 75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ಪ್ರತಿಯೊಬ್ಬ ನಾಗರಿಕರು ಆಗಸ್ಟ್.13 ರಿಂದ ಆಗಸ್ಟ್.15 ರವರೆಗೆ ತಮ್ಮ ಮನೆಯ ಮೇಲೆ ತ್ರಿವರ್ಣ ಧ್ವಜವನ್ನು ಉತ್ಸಾಹದಿಂದ ಹಾರಿಸಿ ಹರ ಘರ ತಿರಂಗಾ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಹೇಳಿದರು.

ವಿಧಾನ ಪರಿಷತ್ ಸದಸ್ಯರಾದ ಅರವಿಂದಕುಮಾರ ಅರಳಿ ಅವರು ಮಾತನಾಡಿ ಜೆಸ್ಕಾಂ ಅಧಿಕಾರಿಗಳು ನಿರಂತರವಾಗಿ ರೈತರಿಗೆ ವಿದ್ಯುತ್ ಕೊಡಬೇಕು ಮತ್ತು ಹಿಂದೆ ಮಾಡಿದ್ದನ್ನು ನಾವು ಮರೆಯಬಾರದು ಮತ್ತು ಸತ್ಯವನ್ನೇ ಹೇಳಬೇಕು. ಸೋಲಾರ ಎಲ್ಲರು ಮನೆಯ ಮೇಲೆ ಹಾಕಿಸಿಕೊಳ್ಳಬೇಕು ಹಳ್ಳಿಗಳಲ್ಲಿ ರೈತರಿಗೆ ಬೋರವೆಲ್ ಹಾಕಿದ ಮೇಲೆ ಅವುಗಳಿಗೆ ಬೇಗ ವಿದ್ಯುತ್ ಸಂಪರ್ಕ ಕೊಡುವುದಿಲ್ಲ ಹಾಗಾಗಿ ರೈತರಿಗೆ ಸಮಸ್ಯೆಯಾಗುತ್ತದೆ ಇದನ್ನು ಸರಿಪಡಿಸಬೇಕೆಂದು ಜೆಸ್ಕಾಂ ಅಧಿಕಾರಿಗಳಿಗೆ ಹೇಳಿದರು.

ಬೀದರ ಉತ್ತರ ಕ್ಷೇತ್ರದ ಶಾಸಕ ರಹೀಮ್ ಖಾನ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ವಿದ್ಯುತ್, ಆಸ್ಪತ್ರೆ, ಪೊಲೀಸ್ ಸೇರಿದಂತೆ ಕೆಲವು ಅವಶ್ಯಕ ಇಲಾಖೆಗಳಿದ್ದು ಅವು ಸರಿಯಾಗಿ ಕೆಲಸ ನಿರ್ವಹಿಸದಿದ್ದರೆ ಜನರಿಗೆ ಬಹಳ ತೊಂದರೆ ಆಗುತ್ತದೆ. ಕಳೆದ 10 ವರ್ಷಗಳಲ್ಲಿ ಕೆ.ಇ.ಬಿ.ಯಲ್ಲಿ ಬಹಳಷ್ಟು ಬದಲಾವಣೆಗಳಾಗಿವೆ ಮುಂದಿನ ದಿನಮಾನಗಳಲ್ಲಿ ಹೊಸ ಹೊಸ ತಂತ್ರಜ್ಞಾನವನ್ನು ಬಳಸಿ ಜನರಿಗೆ ಉತ್ತಮ ರೀತಿಯಲ್ಲಿ ಸೇವೆ ನೀಡಬೇಕು, ನಮ್ಮ ತಂದೆಯವರು ಹಿಂದೆ ಜೆಸ್ಕಾಂ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದರು ನಾನು ಬಡತನ ಅನುಭವಿಸಿ ಬಂದಿರುವುದರಿಂದಲೇ ಬಡವರ ಪರವಾಗಿ ಕೆಲಸಗಳನ್ನು ಮಾಡುತ್ತಿದ್ದೇನೆ. ಅದೊಂದು ಕಾಲವಿತ್ತು ಆಗ ನನಗೆ ಶಾಲೆಯಲ್ಲಿ ನೂರು ರೂಪಾಯಿ ಶುಲ್ಕ ಕಟ್ಟುವುದು ಕಷ್ಟಕರವಾಗಿತ್ತು, ಹಾಗಾಗಿ ಬಡತನದ ಅನುಭವ ನನಗೆ ಚೆನ್ನಾಗಿ ಗೊತ್ತಿದೆ ಎಂದು ಹೇಳಿದರು.

ಈ ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಹಜ್ ಸಮಿತಿ ಅಧ್ಯಕ್ಷರಾದ ರವೂಫುದ್ದಿನ್ ಕಚೇರಿವಾಲೆ, ಬೀದರ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷರಾದ ಬಾಬು ವಾಲಿ, ಜಿಲ್ಲಾಧಿಕಾರಿ ಗೋವಿಂದರೆಡ್ಡಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡೆಕ್ಕಾ ಕಿಶೋರಬಾಬು, ಜೇಸ್ಕಾಂ ಬೀದರ ವೃತ್ತ ಅಧೀಕ್ಷಕ ಇಂಜಿನಿಯರ್ ಸಚಿನ್ ಜಿ.ಹುಂಡೆಕರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.