ಆಧುನಿಕತೆಯ ಸ್ಪರ್ಶತೆ ಒಳಗೊಂಡ ವಚನಸಾಹಿತ್ಯ

ಚಿತ್ರದುರ್ಗ ಜು.31: ಸಿದ್ಧಮಂಗಳಾ ಸೇವಾಕೇಂದ್ರ ಬೆಂಗಳೂರು, ಎಸ್‌ಜೆಎಂ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯ ಚಿತ್ರದುರ್ಗ ಹಾಗು ಬಸವ ಬಳಗ ಮಸ್ಕತ್ ಇವರ ಸಹಯೋಗದಲ್ಲಿ ನಡೆದ ಅಂತಾರಾಷ್ಟ್ರೀಯ ವಿಚಾರ ಸಂಕಿರಣ (ವೆಬಿನಾರ್) ವನ್ನು ಉದ್ಘಾಟಿಸಿ ಡಾ. ಶಿವಮೂರ್ತಿ ಮುರುಘಾ ಶರಣರು ವಚನ ಸಾಹಿತ್ಯ ಬಯಲೊಳಗಣ ರೂಪು ವಿಷಯ ಚಿಂತನ ಮಾಡಿದರು.
ಈ ಜಗತ್ತಿಗೆ ವಿಧಾಯಕವಾದ ಸಿದ್ಧಾಂತವನ್ನು ಕೊಟ್ಟಂತಹ ದಾರ್ಶನಿಕರಿದ್ದಾರೆ. ಭಾರತದೇಶದ ಇತಿಹಾಸದಲ್ಲಿ ಶಾಸ್ತ್ರಗಳು, ವೇದಾಗಮಗಳು ಇತ್ಯಾದಿಯಾಗಿರುವಂತಹ ವಿಚಾರಗಳನ್ನು ಸಂಸ್ಕೃತ ಭಾಷೆಯ ಮೂಲಕ ರಾಷ್ಟ್ರಕ್ಕೆ ಕೊಟ್ಟಿದ್ದಾರೆ. 900 ವರ್ಷಗಳ ಹಿಂದೆ ಬಸವ ಅಲ್ಲಮಾದಿ ಶರಣರು ಒಂದು ಸಿದ್ಧಾಂತ ನೀಡಿದರು. ಬಸವಣ್ಣನವರ ನೇತೃತ್ವ, ಅಲ್ಲಮನ ಅಧ್ಯಕ್ಷತೆಯಲ್ಲಿ ಜಗತ್ತಿನ ಇತಿಹಾಸದಲ್ಲಿ ೭೭೦ ಅಮರಗಣಂಗಳು ಅನುಭವ ಮಂಟಪದಲ್ಲಿ ಸಮಾವೇಶಗೊಂಡಿದ್ದು ವಿರಳ. ಒಂದೊಂದು ಸಂದರ್ಭದಲ್ಲಿ ಒಂದೊಂದು ಇತಿಹಾಸ. ಇಂತಹ ಪರಂಪರೆ ಯಾರಿಗೂ ಸಿಗುವುದಿಲ್ಲ. ಇಂತಹ ಪರಿಣಾಮಕಾರಿಯಾದ ಪ್ರಾಯೋಗಿಕವಾದ ಸಿದ್ಧಾಂತವನ್ನು ಜನರು ಅರಿತುಕೊಳ್ಳುವ ಸಂದರ್ಭವನ್ನು ತಂದುಕೊಳ್ಳಬೇಕಿದೆ. ಎಲ್ಲ ವಿಚಾರಗಳ ಬಗೆಗೆ ಶರಣರು ವಚನಗಳ ಮೂಲಕ ಅಡಗಿಸಿಕೊಟ್ಟಿದ್ದಾರೆ. ಎಲ್ಲರಿಗು ವಚನಗಳು ಎಂಬ ಮಾತ್ರೆಗಳನ್ನು ನಮಗೆ ಕೊಟ್ಟಿದ್ದಾರೆ. ಆ ತತ್ವಗಳನ್ನು ನಾವು ಪ್ರಾಯೋಗಿಕವಾಗಿ ದೈನಂದಿನ ಜೀವನದಲ್ಲಿ ಆಚರಣೆಗೆ ತರಬೇಕು. ಆಧುನಿಕ ತಂತ್ರಜ್ಞಾನದಂತೆ ಶರಣತತ್ವ ಇದೆ. ನಮ್ಮದು ನಿಮ್ಮದು ಶೂನ್ಯಸಂಪಾದನೆ, ಶೂನ್ಯಸಿದ್ಧಾಂತ. ಅದಕ್ಕೆ ಬಯಲು ಎನ್ನುತ್ತಾರೆ. ನಮ್ಮ ಶಿವ ಅಗೋಚರವಾಗಿರುವ ಶಿವ.
ಜಗದಗಲ, ಮುಗಿಲಗಲ, ಮಿಗೆಯಗಲ ನಿಮ್ಮಗಲ
ಪಾತಾಳದಿಂದವೆ ಅತ್ತತ್ತ ನಿಮ್ಮ ಶ್ರೀಚರಣ
ಬ್ರಹ್ಮಾಂಡದಿಂದವೆ ಅತ್ತತ್ತ ನಿಮ್ಮ ಶ್ರೀಮಕುಟ
ಅಗಮ್ಯ, ಅಗೋಚರ, ಅಪ್ರತಿಮ ಲಿಂಗವೆ ಕೂಡಲಸಂಗಮದೇವಯ್ಯಾ
ನೀನೆನ್ನ ಕರಸ್ಥಲಕ್ಕೆ ಬಂದು ಚುಳುಕಾದಿರಯ್ಯ
ಎಂದು ಬಸವಣ್ಣ ಹೇಳುತ್ತಾರೆ. ಸರ್ವಜ್ಞತ್ವ, ಸರ್ವ ಕತೃತ್ವ, ಸರ್ವ ವ್ಯಾಪಕತ್ವ. ನಮ್ಮ ಶಿವ ನಿರಾಕಾರ ಶಿವ. ಇದರ ವಿಶ್ಲೇಷಣೆ ಅತ್ಯಂತ ತರ್ಕಬದ್ಧವಾಗಿದೆ. ಶೂನ್ಯಸಿದ್ಧಾಂತವನ್ನು ಅಲ್ಲಗಳೆಯಲು ಬರುವುದಿಲ್ಲ. ಇಡೀ ಬ್ರಹ್ಮಾಂಡದಲ್ಲಿ ೯ ಗ್ರಹಗಳನ್ನು ನೋಡುತ್ತೇವೆ. ಸಾವಿರಾರು ನಕ್ಷತ್ರಗಳಿವೆ. ಒಂದು ಗ್ರಹ ಮತ್ತೊಂದು ಗ್ರಹದ ನಡುವೆ ಶೂನ್ಯ ಇದೆ. ಆ ಶೂನ್ಯ ಇರುವುದರಿಂದ ಗ್ರಹಗಳ ಮಧ್ಯೆ ಡಿಕ್ಕಿ ಆಗುವುದಿಲ್ಲ. ಗ್ರಹಗಳಿಗೆ ಆಧಾರವಾಗಿರುವುದು ಬಯಲು. ಅನ್ವರ್ಥಕವಾಗಿರುವ ಸಿದ್ಧಾಂತ ಬಯಲ ಸಿದ್ಧಾಂತ. ಉದಾತ್ತವಾಗಿರುವ ತತ್ವಸಿದ್ಧಾಂತವನ್ನು ಶರಣರು ನಮಗೆ ಕೊಟ್ಟುಹೋಗಿದ್ದಾರೆ. ಬ್ರಹ್ಮ ವಿಷ್ಣು ಮಹೇಶ್ವರರಾದಿಯಾಗಿ ಬಯಲರೂಪಿ ಶರಣರಿಂದ ಇವರೆಲ್ಲರೂ ಬಂದಿದ್ದಾರೆ. ವಿದ್ಯಾಬುದ್ಧಿ ಇರುವಲ್ಲಿ ಬ್ರಹ್ಮ, ಶಾಂತಿ ಸೈರಣೆ ಇರುವಲ್ಲಿ ವಿಷ್ಣು, ಕೋಪ ತಾಪ ಇರುವಲ್ಲಿ ರುದ್ರ ಇರುತ್ತಾನೆ ಎಂದು ಚೆನ್ನಬಸವಣ್ಣ ಹೇಳುತ್ತಾರೆ. ಬಯಲು ಬಯಲನೆ ಬಿತ್ತಿ ಬಯಲು ಬಯಲನೆ ಬೆಳೆದು ಎಂಬುದಾಗಿ ಅಲ್ಲಮಪ್ರಭು ಹೇಳಿದ್ದಾರೆ. ಅಂಗೈಯಲ್ಲಿ ಲಿಂಗವನ್ನು ಹಿಡಿದು ಧ್ಯಾನ ಮಾಡಿ ನಿರ್ಬಯಲ ತತ್ವವನ್ನು ಆಸ್ವಾದಿಸುವುದು. ಎಲ್ಲವು ಇದ್ದು ಏನೂ ಇಲ್ಲದಂತಿರುವುದು ಅಂದರೆ ಶೂನ್ಯ ಶರಣರು. ಎಲ್ಲವನ್ನು ಒಳಗೊಂಡಿದ್ದು ಎಲ್ಲವನ್ನು ಮೀರಿದ್ದು ಎಂದರು.
ವಚನ ಸಾಹಿತ್ಯ ಚಿಂತಕರಾದ ರಂಜಾನ್‌ದರ್ಗಾ ಮಾತನಾಡಿ, ಎಲ್ಲವೂ ಬಯಲಿನಿಂದ ಬಂದಿದೆ ಮತ್ತೇ ಬಯಲಲ್ಲಿ ಲೀನವಾಗುವುದು ಎಂದು ಶ್ರೇಷ್ಠ ವಿಜ್ಞಾನಿ ಐನ್‌ಸ್ಟೈನ್ ೧೨ನೇ ಶತಮಾನದಲ್ಲಿ ಶರಣರು ಹೇಳಿದ್ದನ್ನೇ ಹೇಳಿದ್ದಾರೆ. ಆದ್ದರಿಂದ ಇದು ಅತ್ಯಂತ ವೈಜ್ಞಾನಿಕ ವಿಷಯವಾಗಿದೆ. ಚಿಂತನೆ ಮಾಡಬೇಕಿದೆ. ಅಲ್ಲಮಪ್ರಭುಗಳು ಆ ಕಾಲದ ಇಡೀ ಭರತಖಂಡವನ್ನು ಸುತ್ತಿ ಅನೇಕ ಚಿಂತನೆಗಳನ್ನು ಮಾಡಿದ ಶರಣರು. ಅವರು ಬಸವಣ್ಣನವರ ಕಡೆ ಬರಲು ಕಾರಣ ಈ ಜಗತ್ತಿನ ಪರಮಸತ್ಯವನ್ನು ಬಸವಣ್ಣನವರು ಅರಿತಿದ್ದರು ಎಂಬ ಆ ಒಂದು ಆಕಷರ್ಣಣೆಯಿಂದ ಕಲ್ಯಾಣಕ್ಕೆ ಬಂದರು. ಬಸವಣ್ಣನವರು ಅನುಭವ ಮತ್ತು ಅನುಭಾವದ ಸಂಗಮವಾಗಿದ್ದರು. ಐಹಿಕ ವಸ್ತುಗಳಿಂದ ಜನನ ಮರಣಗಳ ಚಕ್ರಗಳಿಂದ ಹೊರಗೆ ಬರುವಂತಹ ವಿಶ್ವಜ್ಞಾನವನ್ನು ಅರಿತವರಾಗಿದ್ದರು ಎಂದು ತಿಳಿಸಿದರು.
ನೀಲಕಂಠ ಹಂಗರಗಿ ಅಧ್ಯಕ್ಷೀಯ ಭಾಷಣ ಮಾಡಿದರು. ಡಾ. ಶೀಲಾದೇವಿ ಎಸ್. ಮಳಿಮಠ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸುಧಾ ಶಶಿಕಾಂತ್, ಶಿವಪ್ರಕಾಶ್ ಎನ್.ಸಿ., ಪ್ರೊ. ಜಯಶ್ರೀ ಎಂ. ಒಡೆಯರ್, ಭಾಗವಹಿಸಿದ್ದರು.
ಆಶಾ ಎಂ.ಆರ್. ಪ್ರಾರ್ಥಿಸಿದರು. ಎಸ್‌ಜೆಎಂ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಪಿ.ಶಿವಲಿಂಗಪ್ಪ ಸ್ವಾಗತಿಸಿದರು. ಡಾ. ಸುಮ ಆರ್. ವಂದಿಸಿದರು. ಶ್ರೀಮತಿ ಮಹೇಶ್ವರಿ ಜಿ.ಬಿ. ಮತ್ತು ಕು. ಆಕಾಶ್ ಎಂ.ಪಿ. ತಾಂತ್ರಿಕ ನಿರ್ವಹಣೆ ಮಾಡಿದರು.