ಆಧುನಿಕತೆಯಲ್ಲೂ ಆಧ್ಯಾತ್ಮಿಕ ಬೆಳವಣಿಗೆ ಅವಶ್ಯ: ನಮೋಶಿ

ಕಲಬುರಗಿ:ಅ.28: ಇಂದಿನ ಒತ್ತಡದ ಬದುಕಿನ ನಡುವೆ ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಆಧ್ಯಾತ್ಮಿಕತೆ ಬೆಳೆಸಿಕೊಳ್ಳಬೇಕು ಎಂದು ರಾಜ್ಯ ವಿಧಾನ ಪರಿಷತ್ ಸದಸ್ಯ ಶಶೀಲ್ ಜಿ. ನಮೋಶಿ ಅವರು ಹೇಳಿದರು.
ನಗರದ ಜಯನಗರ ಶಿವಮಂದಿರದಲ್ಲಿ ಜಯನಗರ ಶಿವಮಂದಿರ ಅಭಿವೃದ್ಧಿ ಟ್ರಸ್ಟ್ ಹಮ್ಮಿಕೊಂಡಿದ್ದ ಶರಣರ ಧರ್ಮ ಪ್ರವಚನದ ಮಂಗಲೋತ್ಸವ ಹಾಗೂ ಪಲ್ಲಕ್ಕಿ ಉತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಅವರು, ಕಲ್ಯಾಣ ನಾಡು ಶರಣರು ನಡೆದಾಡಿದ ಪುಣ್ಯ ಭೂಮಿ. ಶರಣರ ಸರಳ ಜೀವನ ನಮಗೆ ದಾರಿ ದೀಪವಾಗಲಿ. ಮಠಗಳಿಗೆ, ದೇವಸ್ಥಾನಗಳಿಗೆ ಸರ್ಕಾರ ಹೆಚ್ಚು ಅನುದಾನ ನೀಡುತ್ತಿದೆ. ಗುಡಿಗಳಿಗೆ ಬರುವ ಭಕ್ತರ ಸಂಖ್ಯೆ ಹೆಚ್ಚಾಗಿದ್ದು ಸಂತೋಷದ ಸಂಗತಿ ಎಂದರು.
ರಾಜ್ಯ ವಿಧಾನ ಪರಿಷತ್ ಮಾಜಿ ಸದಸ್ಯ ಅಮರನಾಥ್ ಪಾಟೀಲ್ ಅವರು ಮಾತನಾಡಿ, ಪ್ರವಚನ ಕೇಳುವುದರಿಂದ ಮಾನಸಿಕ ನೆಮ್ಮದಿ ದೊರಕುತ್ತದೆ. ಪರೋಪಕಾರದಿಂದ ಪುಣ್ಯ ಸಿಗುತ್ತದೆ ಎಂದು ದೊಡ್ಡವರು ಹೇಳಿದ್ದಾರೆ. ಶರಣರು ಕೂಡ ಇದೇ ಮಾರ್ಗದಲ್ಲಿ ನಡೆಯುತ್ತಿದ್ದರು ಇಂದು ಧರ್ಮಗಳ ನಡುವೆ ಸಂಘರ್ಷ ನಡೆಯುತ್ತಿರುವುದು ದುರಂತ. ಪ್ರತಿಯೊಬ್ಬರೂ ಶಾಂತಿ ಮಾರ್ಗದಲ್ಲಿ ನಡೆಯಬೇಕಾಗಿದೆ ಎಂದರು.
ಪ್ರವಚನಕಾರ ವೇದ ಪಂಡಿತ ಶಿವಕವಿ ಹಿರೇಮಠ್ ಜೋಗೂರ್ ಅವರು ಮಾತನಾಡಿ, ಜಯನಗರ ಶಿವಮಂದಿರ ಅಭಿವೃದ್ಧಿ ಟ್ರಸ್ಟ್‍ನವರು ಒಂದು ತಿಂಗಳು ನಿರಂತರ ಪ್ರವಚನ ಕಾರ್ಯಕ್ರಮ ಹಮ್ಮಿಕೊಂಡು ಯಶಸ್ವಿಯಾಗಿ ಪೂರೈಸಿದ್ದು ಹೆಮ್ಮೆಯ ವಿಷಯ. ಜನರಿಗೆ ದಾರಿದೀಪವಾಗಿರುವ ಪುರಾಣ, ಪ್ರವಚನಗಳು ನಡೆಯುತ್ತಿರಬೇಕು ಎಂದರು.
ಕಲಬುರ್ಗಿ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಶಾಮರಾವ್ ಪ್ಯಾಟಿ, ಪತ್ರಕರ್ತ ದೇವಯ್ಯ ಗುತ್ತೇದಾರ್ ಅವರು ಮಾತನಾಡಿದರು. ಟ್ರಸ್ಟ್ ಅಧ್ಯಕ್ಷ ಲಿಂಗರಾಜ್ ಸಿರಗಾಪೂರ್ ಅವರು ಅಧ್ಯಕ್ಷತೆ ವಹಿಸಿದ್ದರು. ಜಯನಗರ ಅಭಿವೃದ್ಧಿ ಸಂಘದ ಅಧ್ಯಕ್ಷ ಕೆ.ಎಸ್. ವಾಲಿ, ಹಿರಿಯ ಮುಖಂಡ ಹೆಚ್.ಆರ್. ಭೋಗಶೆಟ್ಟಿ, ಉಮೇಶ್ ಶೆಟ್ಟಿ ವೇದಿಕೆಯ ಮೇಲೆ ಉಪಸ್ಥಿತರಿದ್ದರು.
ಇದಕ್ಕೂ ಮೊದಲು ಪಲ್ಲಕ್ಕಿ ಮೆರವಣಿಗೆ ಜರುಗಿತು. ನೂರಾರು ಸಂಖ್ಯೆಯಲ್ಲಿ ವಿವಿಧ ಬಡಾವಣೆಗಳ ಹಿರಿಯರು, ಮಹಿಳೆಯರು ಭಾಗವಹಿಸಿದ್ದರು. ಜಿ.ಜಿ. ವಣಿಕ್ಯಾಳ್ ಅವರು ಕಾರ್ಯಕ್ರಮ ನಿರೂಪಿಸಿದರು. ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಸೂರ್ಯಕಾಂತ್ ಬಾಲಕೊಂದೆ ಅವರು ಸ್ವಾಗತಿಸಿದರು. ಉಪಾಧ್ಯಕ್ಷ ವೀರೇಶ್ ದಂಡೋತಿ ಅವರು ವಂದಿಸಿದರು. ಡಾ. ಎ.ಎಸ್. ಭದ್ರಶೆಟ್ಟಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು.
ಶಿವಪುತ್ರ ಮರಡಿ, ಬಸವರಾಜ್ ಅನ್ವರಕರ್, ಸಿ.ಎಸ್. ಮಾಲಿಪಾಟೀಲ್, ಕಿರಣ್ ಪಾಟೀಲ್, ಭೀಮಾಶಂಕರ್ ಶೆಟ್ಟಿ, ಎಸ್.ಡಿ. ಸೇಡಂಕರ್, ಶ್ರೀಮತಿ ಅನುರಾಧಾ ಕುಮಾರಸ್ವಾಮಿ, ಬಸವರಾಜ್ ಮಾಗಿ, ಮಲ್ಲಿಕಾರ್ಜುನ್ ಕಲ್ಲಾ, ವಾಸುದೇವ್ ಮಾಲಿ ಬಿರಾದಾರ್, ಶಿವಕುಮಾರ್ ಪಾಟೀಲ್, ವಿನೋದ್ ಪಾಟೀಲ್, ಶ್ರವಣಕುಮಾರ್, ಡಾ. ಬಿ.ಎಸ್. ಗುಳಶೆಟ್ಟಿ, ಬಂಡಪ್ಪ ಕೇರೂರ್, ಉದಯಕಿರಣ್ ರೇಷ್ಮೆ, ಅಮಿತ್ ಚಿಟಗುಂಪಿ ಮುಂತಾದವರಲ್ಲದೇ ಹಿರಿಯರು, ಮಹಿಳೆಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.