ಆಧಾರ ಕೇಂದ್ರ ತೆರೆಯಲು ಒತ್ತಾಯ


ಲಕ್ಷ್ಮೇಶ್ವರ,ಡಿ.2- ಪಟ್ಟಣದಲ್ಲಿ ಕೇವಲ 2 ಆಧಾರ್ ಕೇಂದ್ರಗಳಿದ್ದು, ಅದರಲ್ಲಿ ಒಂದು ಕೇಂದ್ರ ಮಾತ್ರ ಸುಸ್ಥಿತಿಯಲ್ಲಿದ್ದು, ಇನ್ನೊಂದು ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತಿದೆ. ಪಟ್ಟಣದ 50 ಸಾವಿರ ಜನ ಲಕ್ಷ್ಮೇಶ್ವರ ತಾಲೂಕಿನ ಗ್ರಾಮೀಣ ಪ್ರದೇಶದ ಜನರು, ಅಲ್ಲದೆ ಶಿರಹಟ್ಟಿ, ಕುಂದಗೋಳ, ಶಿಗ್ಗಾಂವಿ, ಸವನೂರು ತಾಲೂಕಿನ ಜನರು ಬರುತ್ತಿದ್ದು, ಇರುವ ಒಂದು ಕೇಂದ್ರ ಜನಸಂಖ್ಯೆ ಒತ್ತಡದಿಂದ ಸಾಕಾಗುತ್ತಿಲ್ಲ.
ಪ್ರತಿಯೊಂದು ಸರ್ಕಾರಿ ಮತ್ತು ಅರೆ ಸರ್ಕಾರಿ ಕೆಲಸಗಳಿಗೆ ಆಧಾರ್ ಕಡ್ಡಾಯ ಆಗಿರುವುದರಿಂದ ಆಧಾರ್ ಕೇಂದ್ರಗಳ ಸಂಖ್ಯೆ ಹೆಚ್ಚಿಸುವುದು ಅನಿವಾರ್ಯವಾಗಿದೆ. ತಾಲೂಕಾ ಕರವೇ ಪ್ರವೀಣ್ ಶೆಟ್ಟಿ ಬಣದ ಮಹೇಶ್ ಕಲಘಟಗಿ ಅವರು ಹೇಳಿದರು.
ಕರವೇ ಪ್ರವೀಣ್ ಶೆಟ್ಟಿ ಬಣದವರು ಗುರುವಾರ ಉಪತಹಸೀಲ್ದಾರ್ ಮಂಜುನಾಥ ದಾಸಪ್ಪನವರಿಗೆ ಮನವಿ ಪತ್ರ ಸಲ್ಲಿಸಿ ಆಧಾರ್ ಕಾರ್ಡ್ ಗೆ ಸರ್ಕಾರ ಶುಲ್ಕ 50 ರೂ ಇದ್ದರೆ ಗುತ್ತಿಗೆದಾರರು ಮಧ್ಯವರ್ತಿಗಳ ಮುಖಾಂತರ 500 ರೂಗಳ ವರೆಗೆ ಹಣ ಪಡೆದು ಜನರನ್ನು ಹೈರಾಣು ಮಾಡುತ್ತಿದ್ದಾರೆ. ಆಧಾರ್ ಕೇಂದ್ರಗಳ ಕೊರತೆಯೇ ಇದಕ್ಕೆ ಕಾರಣವಾಗಿದ್ದು ಹೆಚ್ಚಿನ ಆಧಾರ್ ಕೇಂದ್ರಗಳನ್ನು ತೆರೆಯುವಂತೆ ಒತ್ತಾಯಿಸಿದ್ದಾರೆ.
ಮನವಿ ಪತ್ರ ಸ್ವೀಕರಿಸಿದ ಉಪತಹಸೀಲ್ದಾರ್ ಜಿಲ್ಲಾಧಿಕಾರಿಗಳ ಗಮನಕ್ಕೆ ತರುವುದಾಗಿ ಹೇಳಿದರು.
ಈ ಸಂದರ್ಭದಲ್ಲಿ ಇಲಿಯಾಸ್ ಮೀರಾನವರ, ಸಾಹೀಬ ಲಾಲ್ ಕಲೆಗಾರ್, ಇಸಾಕ್ ಮೋಮಿನ, ದವಾಲಸಾಬ ಅದ್ದು, ಆನಂದ ಬಡ್ನಿ, ನಾಸೀರ್ ಖಾನ್ ಕಿತ್ತೂರ, ಜಮೀರ್ ಆಡೂರು,. ತಿಪ್ಪಣ್ಣ ರೊಟ್ಟಿಗವಾಡ, ಅಬ್ದುಲ್ ಸಾಬ್ ದೊಡ್ಡೂರ ಸೇರಿದಂತೆ ಅನೇಕರು ಇದ್ದರು.