
ವಿಜಯಪುರ:ಮಾ.3: ಆಧಾರ ಕಾರ್ಡ್, ಮತದಾರರ ಗುರುತಿನ ಚೀಟಿ ಸಂಗ್ರಹಿಸಿ, ಸಾರ್ವಜನಿಕರನ್ನು ಯಾಮಾರಿಸುವ ಕೆಲಸ ಕೆಲವರಿದಂದ ನಗರದಲ್ಲಿ ನಡೆಯುತ್ತಿದೆ. ಕಾರಣ ಯಾರು ಕೂಡ ಸುಳ್ಳು ಭರವಸೆಗಳನ್ನು ನಂಬಿ, ಮೋಸ ಹೋಗಬಾರದು ಎಂದು ನಗರ ಶಾಸಕರಾದ ಬಸನಗೌಡ ರಾ ಪಾಟೀಲ ಯತ್ನಾಳ ಅವರು ಕಿವಿಮಾತು ಹೇಳಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ನಿರಂತರವಾಗಿ ಸುಳ್ಳು ಹೇಳುತ್ತ, ದೇಶದ ಜನತೆಗೆ ದ್ರೋಹ ಮಾಡುತ್ತ ಬಂದಿರುವ ರಾಜಕೀಯ ಪಕ್ಷವೊಂದರ ಕೆಲವರು, ಸೋಲುವ ಭೀತಿಯಿಂದ ತಮ್ಮ ಬ್ಯಾಂಕ್ ಖಾತೆಗೆ ಹಣ ಹಾಕುತ್ತೇವೆ ಎಂದು ಹೇಳುತ್ತಾ, ಇದೀಗ ಆಧಾರ ಕಾರ್ಡ್, ಮತದಾರರ ಗುರುತಿನ ಚೀಟಿ ಸಂಗ್ರಹಿಸುವ ಮೂಲಕ ಅಮಾಯಕ ಜನರನ್ನು ಯಾಮಾರಿಸುವ ತಂತ್ರಕ್ಕೆ ಮುಂದಾಗಿದೆ.
ಸಾರ್ವಜನಿಕರಿಂದ ಅಧಾರ ಕಾರ್ಡ್, ಮತದಾರರ ಗುರುತಿನ ಚೀಟಿ ಪಡೆದುಕೊಂಡು, ತಮಗೆ ಹಣ ಹಾಕುವುದಾಗಿ ಹಸಿ ಸುಳ್ಳು ಹೇಳುತ್ತಿದ್ದಾರೆ. ನಿಜವಾಗಿಯೂ ಬಡವರಿಗೆ ಹಣ ಹಾಕುವ ಉದ್ದೇಶವಿದ್ದರೆ, ಬ್ಯಾಂಕ್ ಪಾಸ್ ಬುಕ್ ಪ್ರತಿ ಪಡೆದು ಹಣ ಹಾಕುತ್ತಿದ್ದರು. ಆದರೆ, ಮತದಾರರ ಚೀಟಿ, ಆಧಾರ ಕಾರ್ಡ್ ಪಡೆಯುವುದರ ಅವಶ್ಯಕತೆ ಇರಲಿಲ್ಲ.
ತಾವು ಜನರಿಗೆ ಏನು ಕೊಡಲು ನಿಶ್ಚಿಯಿಸಿದ್ದರಿ ಎಂಬುವ ಭರವಸೆಗಳನ್ನು, ಪ್ರಣಾಳಿಕೆಯ ಮೂಲಕ ಜನರಿಗೆ ತಲುಪಿಸಬೇಕು. ಅದನ್ನು ಬಿಟ್ಟು, ಸ್ಲಂ ನಿವಾಸಿಗಳು, ಮುಗ್ದ ಜನರು ವಾಸಿಸುವ ಸ್ಥಳಗಳನ್ನು ಗುರಿಯಾಗಿರಿಸಿಕೊಂಡು, ಆಟೋಗಳ ಮೂಲಕ ಮನೆ ಮನೆಗೆ ತೆರಳಿ ಅಮಾಯಕರನ್ನು ಮೋಸ ಮಾಡುವ ಸಂಚು ನಡೆದಿದೆ ಎನ್ನುವುದು ಸ್ಪಷ್ಟವಾಗಿ ಗೊತ್ತಾಗುತ್ತದೆ.
ಆದ್ದರಿಂದ ಯಾರು ಕೂಡ ತಮ್ಮ ಆಧಾರ ಕಾರ್ಡ್, ಮತದಾರರ ಗುರುತಿನ ಚೀಟಿ ಪ್ರತಿಯನ್ನು ನೀಡಿ ಮೋಸ ಹೋಗಬೇಡಿ. ಈ ಕುರಿತಂತೆ ಮನೆಯಲ್ಲಿ, ಸುತ್ತಮುತ್ತಲಿನ ನಿವಾಸಿಗಳಿಗೂ ಸಹ ತಿಳಿವಳಿಕೆ ನೀಡಬೇಕು ಎಂದು ನಗರ ಶಾಸಕರು ಸಲಹೆ ನೀಡಿದ್ದಾರೆ.