ಆಧಾರ್ ಸಂಬಂಧಿಸಿದ ಸಮಸ್ಯೆಗಳ ಪರಿಹಾರಕ್ಕೆ ನಿರ್ಲಕ್ಷ್ಯ : ಅಭಿಯಾನ ತೀವ್ರಗೊಳಿಸಲು ಸೂಚನೆ

ಸಂಜೆವಾಣಿ ವಾರ್ತೆ
ಚಿತ್ರದುರ್ಗ.ಜು.೧೯; ಆಧಾರ್ ನೊಂದಣಿ, ನವೀಕರಣ, ತಿದ್ದುಪಡಿಗಳಿಗೆ ಸಂಬಂಧಿತ ಸಮಸ್ಯೆಗಳಿಗೆ ಪರಿಹಾರ ಒದಗಿಸಬೇಕು. ಆಧಾರ್ ನೋಂದಣಿ ಸಂಬಂಧಿತ ಸಮಸ್ಯೆಗಳಿದ್ದಲ್ಲಿ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಸಮಾಲೋಚಿಸಿ, ಸಮಸ್ಯೆ ಪರಿಹಾರಕ್ಕೆ ಮುಂದಾಗಬೇಕು, ನಿರ್ಲಕ್ಷ್ಯ ತೋರಿದಲ್ಲಿ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ದಿವ್ಯಪ್ರಭು ಜಿ.ಆರ್.ಜೆ. ಅವರು ಆಧಾರ್ ಜಿಲ್ಲಾ ಸಂಯೋಜಕ ರಂಗನಾಥ್ ಅವರಿಗೆ ತಾಕೀತು ಮಾಡಿದರು.ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾಮಟ್ಟದ ಆಧಾರ್ ಮೇಲ್ವಿಚಾರಣೆ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜನರು ಆಧಾರ್ ನೋಂದಣಿಗೆ ಅಲ್ಲಿಗೆ ಬರಬೇಕು, ಇಲ್ಲಿಗೆ ಬರಬೇಕು ಎಂದು ಹೇಳುವ ಮೂಲಕ ಉದಾಸೀನ ತೋರಿ, ವರ್ಷಗಟ್ಟಲೇ ಸತಾಯಿಸುತ್ತೀರಾ? ಜಿಲ್ಲೆಯ ಜನರ ಬಗ್ಗೆ ನಿಮಗೆ ಕಾಳಜಿ ಇಲ್ಲವೇ? ಎಂದು ಪ್ರಶ್ನಿಸಿದ ಜಿಲ್ಲಾಧಿಕಾರಿಗಳು,  ಆಧಾರ್ ಸಂಬಂಧಿಸಿದ ಸಮಸ್ಯೆಗಳಿಗೆ ಸರಿಯಾಗಿ ಸ್ಪಂದಿಸದ ಆಧಾರ್ ಜಿಲ್ಲಾ ಸಂಯೋಜಕ ರಂಗನಾಥ್ ಕಾರ್ಯವೈಖರಿಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.  ಸಾರ್ವಜನಿಕರಿಗೆ ಸರಿಯಾಗಿ ಮಾಹಿತಿ ನೀಡದೇ ನಿರ್ಲಕ್ಷ್ಯ ವಹಿಸಿದಲ್ಲಿ ಶಿಸ್ತುಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು. ಆಧಾರ್ ಕಾರ್ಡ್ ಇಲ್ಲದೇ ಇದ್ದರೆ ಸರ್ಕಾರದ ವಿವಿಧ ಯೋಜನೆಗಳಿಂದ ಜಿಲ್ಲೆಯ ಜನರು ವಂಚಿತರಾಗುತ್ತಾರೆ. ಯಾವ ಸೌಲಭ್ಯವೂ ದೊರೆಯುವುದಿಲ್ಲ. ಪ್ರತಿಯೊಂದು ಸೌಲಭ್ಯವನ್ನು ಆಧಾರ್ ಸಂಖ್ಯೆ ಜೋಡಣೆಯಾಗಿರುವ ಬ್ಯಾಂಕ್ ಖಾತೆಯ ಮೂಲಕ ನೇರ ನಗದು ವರ್ಗಾವಣೆ ಮೂಲಕ ಸೌಲಭ್ಯ ಕಲ್ಪಿಸಲಾಗುತ್ತಿದೆ. ಪ್ರತಿಯೊಂದು ಯೋಜನೆಗೂ ಆಧಾರ್ ಕಾರ್ಡ್ ಮಹತ್ವದ್ದಾಗಿದ್ದರೂ, ಇದರ ಬಗ್ಗೆ ಯಾವುದೇ ಕ್ರಮ ಕೈಗೊಳ್ಳದೆ, ಆಧಾರ್ ನೋಂದಣಿ, ನವೀಕರಣ ಅಥವಾ ತಿದ್ದುಪಡಿಗಳ ಕುರಿತು ಉದಾಸೀನ ತೋರುವುದು ಸಲ್ಲದು. ಜಿಲ್ಲೆಯ ಜನರಿಗೆ ಆಧಾರ್ ಬಗ್ಗೆ ಸಮಸ್ಯೆಯಾಗದಂತೆ ತ್ವರಿತಗತಿಯಲ್ಲಿ ಆಧಾರ್ ನೋಂದಣಿ ಹಾಗೂ ದಾಖಲಾತಿ ನವೀಕರಣ ಕಾರ್ಯಕ್ಕೆ ಮುಂದಾಗಬೇಕು. ಈ ಕುರಿತು ಜಿಲ್ಲೆಯ ಜನರಿಗೆ ವ್ಯಾಪಕ ಪ್ರಚಾರ ನೀಡಿ, ಜಾಗೃತಿ ಮೂಡಿಸಬೇಕು ಎಂದು ತಾಕೀತು ಮಾಡಿದರು.ಅನಾರೋಗ್ಯ, ಅಪಘಾತಕ್ಕೆ ಒಳಗಾದವರು, ಷೋಷಕರು, ಸಂಬಂಧಕರು ಇಲ್ಲದೇ ಇರುವ ಹಾಗೂ ಇನ್ನೀತರೆ ಕಾರಣಗಳಿಂದ ಸಂಕಷ್ಟದ ಪರಿಸ್ಥಿತಿಯಲ್ಲಿರುವವರು ಆಧಾರ್ ಕೇಂದ್ರಗಳಿಗೆ ತೆರಳಿ ನೋಂದಣಿ ಮಾಡಿಸಲು ಸಾಧ್ಯವಾಗದೇ ಇರುವವರ ಮನೆಗೆ ಸಿಬ್ಬಂದಿಗಳೇ ಖುದ್ದಾಗಿ ಭೇಟಿ ನೀಡಿ, ಆಧಾರ್ ನೋಂದಣಿ ಹಾಗೂ ದಾಖಲಾತಿ ನವೀಕರಣಕ್ಕೆ ಅಗತ್ಯ ಕ್ರಮವಹಿಸಬೇಕು ಎಂದು ಆಧಾರ್ ಜಿಲ್ಲಾ ಸಂಯೋಜಕರಿಗೆ ಸೂಚನೆ ನೀಡಿದರು.ಆಧಾರ್ ಜಿಲ್ಲಾ ಸಮಾಲೋಚಕರು ಆಧಾರ್ ಸಂಬಂಧಿತ ಸಮಸ್ಯೆಗಳಿಗೆ ಪರಿಹಾರ ಒದಗಿಸಬೇಕು. ಆಧಾರ್ ನೋಂದಣಿ ಸಂಬಂಧಿತ ಜಿಲ್ಲೆಗೆ ಏನಾದರೂ ಅವಶ್ಯಕತೆ ಇದ್ದರೆ, ಸಂಬಂಧಪಟ್ಟ ಅಧಿಕಾರಿಗಳ ಜೊತೆಗೆ ಮಾತನಾಡಿ, ಸೂಕ್ತ ವ್ಯವಸ್ಥೆ ಕಲ್ಪಿಸಬೇಕು, ಸಮಸ್ಯೆ ಎದುರಾದಲ್ಲಿ ಸಂಬಂಧಪಟ್ಟವರ ಗಮನಕ್ಕೆ ತಂದು ಬಗೆಹರಿಸಿಕೊಳ್ಳಬೇಕು ಎಂದು ಹೇಳಿದರು.