ಆದ್ಯ ವಚನಕಾರ ದೇವರ ದಾಸೀಮಯ್ಯ ಜನ್ಮಸ್ಥಳ ಮುದನೂರಲ್ಲಿ ಜಯಂತಿ ಆಚರಿಸದೇ ನಿರ್ಲಕ್ಷ್ಯ

ಕೆಂಭಾವಿ: ಎ.19: ಆದ್ಯ ವಚನಕಾರ ದೇವರ ದಾಸೀಮಯ್ಯನವರ ಜನ್ಮಸ್ಥಳ ಮುದನೂರ ಗ್ರಾಮದಲ್ಲಿ ಶನಿವಾರ ಸರ್ಕಾರದ ವತಿಯಿಂದ ಜಯಂತಿ ಆಚರಿಸದೆ ಜಿಲ್ಲಾಡಳಿತ ನಿರ್ಲಕ್ಚ ಧೋರಣೆ ಅನುಸರಿಸಿದೆ ಎಂದು ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ನಾಡಿನ ಖ್ಯಾತ ವಚನಕಾರರಲ್ಲಿ ಮೊದಲಿಗರಾಗಿ ಹೊರಹೊಮ್ಮಿದ ದೇವರ ದಾಸೀಮಯ್ಯನವರ ಜಯಂತಿಯನ್ನು ಸರ್ಕಾರ ಪ್ರತಿವರ್ಷ ಆಚರಿಸುತ್ತಾ ಬಂದಿದ್ದು ಅವರ ಜನ್ಮಸ್ಥಳವಾದ ಮುದನೂರ ಗ್ರಾಮದಲ್ಲಿ ಜಿಲ್ಲಾಡಳಿತದ ವತಿಯಿಂದ ಮಾಡದೆ ಇರುವುದು ಗ್ರಾಮಸ್ಥರ ಅಸಮಾಧಾನವನ್ನು ಹೊರಹಾಕಿದೆ.
ಕೊರೊನಾ-19 ನಿಯಮಾನುಸಾರ ರಾಜ್ಯದೆಲ್ಲೆಡೆ ಜಯಂತಿ ಆಚರಣೆಗಳು ಸರಳವಾಗಿ ನಡೆಯುತ್ತಿದ್ದರೂ ಅವರ ಹುಟ್ಟೂರಾದ ಗ್ರಾಮದಲ್ಲಿ ಸರ್ಕಾರದ ವತಿಯಿಂದ ಸರಳವಾಗಿ ಆಚರಿಸಬಹುದಾದ ಜಯಂತಿಯನ್ನು ಆಚರಿಸದೆ ಇರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ ಎಂದು ಗ್ರಾಮಸ್ಥರು ಹೇಳುತ್ತಾರೆ.
ಕೋವಿಡ್ 2ನೇ ಅಲೆ ಹಿನ್ನಲೆ
ಈಗ ಕೋವಿಡ್ ನಿಯಮ ಇರುವುದರಿಂದ ಸರ್ಕಾರದ ಆದೇಶದಂತೆ ಜಯಂತಿಗಳನ್ನು ಸರಳವಾಗಿ ಆಚರಿಸಲಾಗಿದೆ. ತಾಲೂಕಾ ಆಡಳಿತ ವತಿಯಿಂದ ತಹಸೀಲ ಕಾರ್ಯಾಲಯದಲ್ಲಿ ಜಯಂತಿ ಆಚರಣೆ ಮಾಡಲಾಗಿದ್ದು ಕೋವಿಡ್ ನಿಯಮ ಸಡಿಲಗೊಂಡ ನಂತರ ಅವರ ಹುಟ್ಟೂರಿನಲ್ಲಿ ಸಂಭ್ರಮದಿಂದ ದಾಸೀಮಯ್ಯನವ ಜಯಂತಿ ಆಚರಣೆ ಮಾಡಲಾಗುವುದು.
ಮಹಾದೇವಪ್ಪಗೌಡ ಬಿರಾದಾರ. ತಹಸೀಲ್ದಾರ ಹುಣಸಗಿ
ದಾಸೀಮಯ್ಯನವರ ಹುಟ್ಟೂರಿನಲ್ಲಿ ಅವರ ಜಯಂತಿ ಆಚರಿಸದೆ ಜಿಲ್ಲಾಡಳಿತ ನಿರ್ಲಕ್ಷ ಧೋರಣೆ ಅನುಸರಿಸಿದೆ. ಕೋವಿಡ್-19 ನಿಯಮಾನುಸಾರವೆ ತಾಲೂಕಾ ಆಡಳಿತದ ವತಿಯಿಂದ ಜಯಂತಿಯನ್ನು ಆಚರಿಸಬಹುದಾಗಿತ್ತು ಆದರೆ ಈ ಬಗ್ಗೆ ಜಿಲ್ಲಾಡಳಿತ ಗಮನ ಕೊಡದೆ ಇರುವುದರಿಂದ ಗ್ರಾಮಸ್ಥರ ಜೊತೆಗೂಡಿ ಸರಳವಾಗಿ ದಾಸೀಮಯ್ಯನವರ ಜಯಂತಿಯನ್ನು ಆಚರಿಸಲಾಯಿತು. ದೇವರ ದಾಸೀಮಯ್ಯ ವಿಚಾರ ವೇದಿಕೆ ಅಧ್ಯಕ್ಷ ಶಾಂತರೆಡ್ಡಿ ಚೌಧರಿ ಇದ್ದರು.